4-5 ಡಿಸಿಎಂ ಮಾಡುವ ಪ್ಲ್ಯಾನ್ ಇತ್ತು, ಕೊನೆಗೆ ಒಬ್ಬರಿಗಷ್ಟೇ ಹುದ್ದೆ ನೀಡಿದ್ದು ಯಾರು? : ರಹಸ್ಯ ಬಿಚ್ಚಿಟ್ಟ ಸಿದ್ದರಾಮಯ್ಯ
ಬೆಂಗಳೂರು: ಸರ್ಕಾರದಲ್ಲಿ ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದು ಯಾರು ಗೊತ್ತಾ? ನಾಲ್ಕೈದು ಜನರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದರು, ಒಬ್ಬರಿಗೆ ಅವಕಾಶ ಕೊಡಬೇಕು ಎಂದು ಹೇಳಿದ್ದು ಯಾರು ಗೊತ್ತ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಈ ವೇಳೆ ವೇದಿಕೆ ಸುತ್ತಮುತ್ತಲಿರುವವರು ನೀವೇ ಎಂದು ಹೇಳಿದರು. ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿದ್ದು ನಾನೇ ಎಂದು ಹೇಳಿದರು.
ಗಾಂಧಿ ಭವನದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ "ಒಳ ಮೀಸಲಾತಿ ಕುರಿತ ವಿಚಾರ ಸಂಕಿರಣ"ವನ್ನು ಉದ್ಘಾಟಿಸಿ ಮಾತನಾಡಿದ ಸಿದ್ದರಾಮಯ್ಯ ಅವರು,
ಬಡ್ತಿಯಲ್ಲಿ ಮೀಸಲಾತಿ ಬೇರೆ ಯಾವುದಾದರೂ ರಾಜ್ಯದಲ್ಲಿ ಇದೆಯಾ? ರತ್ನಪ್ರಭಾ ಅವರು ಮುಖ್ಯಕಾರ್ಯದರ್ಶಿಯಾಗಿರುವಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿ, ವರದಿ ತರಿಸಿಕೊಂಡು, ವರದಿಯನ್ನು ಕಾನೂನಿನ ರೂಪದಲ್ಲಿ ಜಾರಿ ಮಾಡಿದ್ದು ನಮ್ಮ ಸರ್ಕಾರ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ರು, ಆದರೆ ತೀರ್ಪು ನಮ್ಮ ಪರವಾಗಿ ಬಂತು. ಕರ್ನಾಟಕದಲ್ಲಿ ಮಾತ್ರ ಬಡ್ತಿಯಲ್ಲಿ ಮೀಸಲಾತಿ ಇದೆ. ಇದೆಲ್ಲಾ ಸಾದ್ಯವಾಗಿದ್ದು ಹೇಗೆ? ಎನ್ನುವ ಪ್ರಶ್ನೆಯನ್ನು ಸಭೆಯ ಮುಂದಿಟ್ಟರು.

ನಾನು ಇಷ್ಟೆಲ್ಲಾ ಮಾಡಿದ್ರೂ ಒಳಮೀಸಲಾತಿ ಜಾರಿಗೆ ತರುವ ಮೊದಲು ಇಲ್ಲಿ ಸಭೆಯಲ್ಲೇ ಇರುವ ಹಲವರು ನನ್ನ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಅದಕ್ಕಾಗಿಯೇ ನಾನು ಅನೇಕ ಬಾರಿ "ಯಾರು ನಿಮ್ಮ ಪರ ಇರುವವರು, ಯಾರು ವಿರೋಧಿಗಳು ಎನ್ನುವುದನ್ನು ಗುರುತಿಸುವ ಕೆಲಸ ಮಾಡಬೇಕು" ಎಂದು ಹೇಳಿದ್ದೇನೆ. ನಾನು ಮಾಡಿರುವ ಕೆಲಸವನ್ನು ನರೇಂದ್ರ ಮೋದಿ ಅವರು ಯಾಕೆ ಮಾಡಿಲ್ಲ? ಸಾಮಾಜಿಕ ಪರಿಸ್ಥಿತಿ ಹೀಗೆ ಮುಂದುವರೆದರೆ ಜನರನ್ನು ಶೋಷಣೆ ಮಾಡಲು ಅವಕಾಶ ಇರುತ್ತದೆ ಎಂದು ಅವರು ಬದಲಾವಣೆ ಮಾಡಲ್ಲ. ಸಂವಿಧಾನ ಅಂಗೀಕಾರ ಮಾಡಿದ ಮೇಲೆ ಅದನ್ನು ವಿರೋಧ ಮಾಡಿದವರು ಯಾರು? ಇದೇ ಮನುವಾದಿಗಳಲ್ಲವೇ? ಆರ್.ಎಸ್.ಎಸ್ ಮುಖವಾಣಿ ಆರ್ಗನೈಸರ್ ನಲ್ಲಿ ಸಂವಿಧಾನವನ್ನು ವಿರೋಧ ಮಾಡಿಲ್ಲವೇ? ಎಂದು ಇತಿಹಾಸವನ್ನು ಸ್ಮರಿಸಿದರು.
ನಾನು ಎಂದಿಗೂ ನಿಮ್ಮ ಜೊತೆ ಇರುತ್ತೇನೆ. ನಾನು ಚುನಾವಣಾ ರಾಜಕೀಯದಿಂದ ನಿವೃತ್ತಿಯಾದರೂ ಸಕ್ರಿಯ ರಾಜಕಾರಣದಲ್ಲಿ ಇರುತ್ತೇನೆ ಎನ್ನುವ ತಮ್ಮ ನಿರ್ಧಾರವನ್ನು ಪುನರುಚ್ಛರಿಸಿದ ಸಿದ್ದರಾಮಯ್ಯ ಅವರು, ತಮ್ಮ ಈ ನಿರ್ಧಾರಕ್ಕೆ ವಯಸ್ಸಿನ ಕಾರಣವನ್ನು ನೀಡಿದರು. ಒಳ ಮೀಸಲಾತಿ ಹೋರಾಟ ಮುಂದುವರೆಯಬೇಕು, ಗುರಿ ತಲುಪುವ ವರೆಗೆ ನಿಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಮರೆತು ಜೊತೆಯಾಗಿ ಹೋರಾಟ ನಡೆಸಬೇಕು. ನಿಮ್ಮ ಸುತ್ತ ನಿಮ್ಮ ನಿಮ್ಮೊಳಗೆ ಬೆಂಕಿ ಹಚ್ಚುವ ಜನರಿದ್ದಾರೆ, ಜಾಗೃತೆಯಾಗಿರಿ ಎನ್ನುವ ಕಿವಿಮಾತನ್ನು ಅವರು ಹೋರಾಟಗಾರರಿಗೆ ಹೇಳಿದರು. ಒಳಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಮಂತ್ರಿಗಳ ಜೊತೆ ಮಾತನಾಡುವುದಾಗಿಯೂ ಸಿದ್ದರಾಮಯ್ಯ ಅವರು ಭರವಸೆ ನೀಡಿದರು
1992ರಲ್ಲಿ ಇಂದಿರಾ ಸಹಾನಿ ಕೇಸ್‌ನಲ್ಲಿ ಯಾವುದೇ ಕಾರಣಕ್ಕೂ ಮೀಸಲಾತಿಯ ಒಟ್ಟು ಮಿತಿಯು ಶೇ. 50ನ್ನು ಮೀರುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ನ 9 ನ್ಯಾಯಾಧೀಶರ ಪೀಠವು ತೀರ್ಪು ನೀಡಿತು. ಮುಂದುವರಿದ ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವರಿಗೆ 10% ಮೀಸಲಾತಿಯನ್ನು ಕೊಟ್ಟರು. ಅಲ್ಲಿಗೆ 60% ಆಯ್ತು. ಆದರೆ ಮೀಸಲಾತಿ 50% ಕ್ಕಿಂತ ಜಾಸ್ತಿ ಆಗಬಾರದು ಎಂಬ ನಿಯಮವಿದೆ. ಅದಕ್ಕೆ ಮೀಸಲಾತಿ ಸುಪ್ರೀಂ ಕೋರ್ಟ್‌ನಲ್ಲೂ, ಹೈಕೋರ್ಟ್‌ನಲ್ಲೂ, ನ್ಯಾಯಾಲಯಗಳಲ್ಲೂ ಬರಬೇಕು ಎಂದು ಆಗ್ರಹಿಸಿದರು.
ಮುಂದುವರೆದು, ಮೀಸಲಾತಿಗಾಗಿ ನಾವು ಹೋರಾಟವನ್ನೇ ಮಾಡಿಲ್ಲ.ನಮ್ಮ ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸುಪ್ರೀಂ ಕೋರ್ಟ್ ಕೂಡ ಒಳಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷ, ನಮ್ಮ ಸರ್ಕಾರ ಯಾವಾಗಲೂ ಒಳ ಮೀಸಲಾತಿ ಪರವಾಗಿದೆ. ಮೀಸಲಾತಿಗೆ ಯಾವತ್ತೂ ಕೂಡ ಭಿನ್ನಾಭಿಪ್ರಾಯಗಳು ಬರಬಾರದು ಎಂದರು. ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರುದ್ಧವಾಗಿರುವ ಜನರ ಜೊತೆಗೆ ಸೇರಿಕೊಳ್ಳುತ್ತಾರೆ. ಅದು ಆಗಬಾರದು. ಯಾವ ಪಕ್ಷ ಮೀಸಲಾತಿಗೆ ವಿರೋಧ ಇದೆಯೋ ಅವರ ಪರವಾಗಿ ನಿಲ್ಲುವುದು, ಆ ಪಕ್ಷದ ಸಿದ್ಧಾಂತಕ್ಕೆ ಜೈ ಅನ್ನುವುದು. ಇದು ಸ್ವಾರ್ಥ ಅಲ್ಲವೇ? ಎಂದು ಪ್ರಶ್ನಿಸಿದರು.
ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು. ಒಳ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಬಂದ ಮೇಲೆ ಎಲ್ಲಾ ಕಡೆಯೂ ಇದಕ್ಕೆ ಚಾಲನೆ ಸಿಕ್ಕಿತು. ನಮ್ಮ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತದೆ ಎಂದು ಅವತ್ತೇ ಹೇಳಿದ್ದೆ. ಅದರಂತೆ, ನಾಗಮೋಹನ್‌ದಾಸ್ ಕಮಿಟಿ ಮಾಡಿದೆವು. ಅವರು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಜೊತೆಗೆ ಮಾತನಾಡಿ ಒಂದು ವರದಿಯನ್ನು ಕೊಟ್ಟರು. ಅದರ ಪ್ರಕಾರ, 5 ಗುಂಪುಗಳನ್ನು ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಿದೆವು ಎಂದು ವಿವರಿಸಿದರು.
ಮುಂದುವರೆದು, ಆ 5 ಗುಂಪುಗಳನ್ನು ಮತ್ತೆ 3 ಮಾಡಿದೆವು. 6:6:5 ಸೂತ್ರದಡಿ ವಿಭಜಿಸಿದೆವು. ಅಲೆಮಾರಿಗಳನ್ನು ಭೋವಿ, ಬಂಜಾರ ಸಮುದಾಯಗಳ ಜೊತೆ ಸೇರಿಸಿದೆವು. ಅದು ಸರಿ ಇಲ್ಲ ಎಂದಾಯಿತು. ಈ ಮರು-ವರ್ಗೀಕರಣದ ವಿರುದ್ಧ ಹೈಕೋರ್ಟ್‌ನಲ್ಲಿ ಅರ್ಜಿಗಳು ದಾಖಲಾದವು. ಆಮೇಲೆ ತಾತ್ಕಾಲಿಕವಾಗಿ 15% ಮಾಡೋಣ ಎಂದಾಯಿತು. ಚರ್ಚೆಗಳು ನಡೆದು ಐದು ಕಾಲು, ಐದು ಕಾಲು, ನಾಲ್ಕೂವರೆ ನೀಡಲು ಸಚಿವ ಸಂಪುಟವೂ ಒಪ್ಪಿಕೊಂಡಿತು. ಇಷ್ಟೆಲ್ಲಾ ಆದರೂ ಕೂಡ ಇನ್ನೂ ಗೊಂದಲಗಳಿವೆ. ಏನೇ ಆದರೂ ಒಳ ಮೀಸಲಾತಿ ಜಾರಿ ಆಗಲೇಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯನವರು ಹೇಳಿದ್ದನ್ನು ಕೇಳುತ್ತೇನೆ ಅಂತಾರೆ. ಒಳಮೀಸಲಾತಿಯಲ್ಲಿ ಇರುವ ಎಲ್ಲಾ ಗೊಂದಲಗಳನ್ನು ನಿವಾರಣೆ ಮಾಡಿ ಜಾರಿ ಮಾಡುವಂತೆ ನಾನು ಅವರ ಬಳಿ ಮಾತನಾಡುತ್ತೇನೆ. ಅಂತಿಮವಾಗಿ ಸಚಿವ ಸಂಪುಟ ತೀರ್ಮಾನ ತೆಗೆದುಕೊಳ್ಳುತ್ತದೆ. ನನ್ನ ಮಾತು ಕೇಳುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ದೇಶದಲ್ಲಿರುವ ಅಸಮಾನತೆ ಹೋಗುವವರೆಗೂ ಮೀಸಲಾತಿ ಇರಲೇಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಲೇಬೇಕು. ಓದಿದವರೆ ಜಾತಿ ವ್ಯವಸ್ಥೆಯನ್ನು ಹೆಚ್ಚು ಪಾಲಿಸುವುದು. ಅಂಬೇಡ್ಕರ್ ಅವರು ಒಂದು ಮಾತು ಹೇಳಿದ್ದಾರೆ, ನಾನು ಇಲ್ಲಿಯವರೆಗೂ ಸಾಮಾಜಿಕ ನ್ಯಾಯದ ರಥವನ್ನು ಎಳೆದುಕೊಂಡು ಬಂದಿದ್ದೇನೆ. ಸಾಧ್ಯವಾದರೆ ಅದನ್ನು ಮುಂದಕ್ಕೆ ಕೊಂಡೊಯ್ಯಿರಿ, ಹಿಂದಕ್ಕೆ ಮಾತ್ರ ತಳ್ಳಬೇಡಿ ಎಂದಿದ್ದಾರೆ. ಅದರಂತೆ ನಾವು ನಡೆದುಕೊಳ್ಳಬೇಕು ಎಂದರು.
ಈ ಹಿಂದೆ ಮೌಢ್ಯ ನಿವಾರಣಾ ಕಾಯ್ದೆ ಜಾರಿ ತಂದಿದ್ದೆವು. ಆದರೆ, ಯಾರು ಅದನ್ನು ಪಾಲಿಸುತ್ತಿಲ್ಲ. ಮೌಢ್ಯಗಳನ್ನು ನಂಬಬೇಡಿ ಎಂದು ಬಸವಣ್ಣನವರೇ ಹೇಳಿದ್ದರು. 2013ರಲ್ಲಿ ನಾನು ಮುಖ್ಯಮಂತ್ರಿಯಾದೆ. ಜನಸಂಖ್ಯೆಗೆ ಅನುಗುಣವಾಗಿ ಎಸ್‌ಸಿಎಸ್‌ಪಿ / ಟಿಎಸ್‌ಪಿ ಕಾಯ್ದೆ ಜಾರಿಗೆ ತಂದೆ. ಅದಕ್ಕೂ ಮೊದಲು ಅಧಿಕಾರಿದಲ್ಲಿದ್ದ ಬಿಜೆಪಿ, ಜೆಡಿಎಸ್ ಪಕ್ಷದ ಯಾರೂ ಕೂಡ ಈ ಕಾಯ್ದೆಯನ್ನು ಜಾರಿ ಮಾಡಿಲ್ಲ ಎನ್ನುವ ವಿಚಾರವನ್ನು ಸಭೆಯ ಗಮನಕ್ಕೆ ತಂದರು.


Click it and Unblock the Notifications
