'ನಿನ್ನ ಗಣಿ ಹಣದಿಂದ ಗೆದ್ದಿಲ್ಲ, ನನ್ನ ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದ್ದೆ': ಜನಾರ್ಧನ ರೆಡ್ಡಿಗೆ ತಂಗಡಗಿ ತಿರುಗೇಟು

ಬೆಂಗಳೂರು: ಹಾಲಿ ಶಾಸಕ ಜನಾರ್ಧನ್ ರೆಡ್ಡಿ ಮತ್ತು ಹಾಲಿ ಸಚಿವ ಶಿವರಾಜ ತಂಗಡಗಿ ಅವರ ನಡುವಿನ ಏಕವಚನದ ವಾಕ್ಸಮರ ಮುಂದುವರಿದಿದೆ. ಸ್ನೇಹ ಸಂಬಂಧ ಸರಿ ಇದ್ದಾಗ ಚುನಾವಣೆ ಗೆಲುವಿಗಾಗಿ ಪಡೆದ ಸಹಾಯ, ಋಣದ ಕುರಿತು ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಯಾರು ಯಾರ ಮುಂದೆ ಕೈಚಾಚಿದ್ದರು ಎಂಬುದರ ಕುರಿತು ಇಬ್ಬರು ನಾಯಕರು ವಿಡಿಯೋ, ಪೋಸ್ಟ್‌ಗಳ ಮೂಲಕ ಹಳೇಯ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.

ಶಾಸಕ ಜನಾರ್ಧನ ರೆಡ್ಡಿ ಅವರು, ನನಗೆ ಸಹಾಯ ಮಾಡಿದ್ದು ರೆಡ್ಡಿಯವರು ಎಂದು ಸಚಿವರು ಹೇಳಿದ ವಿಡಿಯೋ ಪೋಸ್ಟ್ ಮಾಡಿದ್ದರು. ಇದಕ್ಕೆ ಬುಧವಾರ ಶಿವರಾಜ ತಂಗಡಗಿ ಅವರು ತಿರುಗೇಟು ನೀಡಿದ್ದಾರೆ. 'ಅಣ್ತಮ್ಮಾ ಜನಾರ್ದನರೆಡ್ಡಿ, ಮತ್ತದೇ ಪೊಳ್ಳು ನುಡಿಗಳ ಮೊರೆ ಹೋಗಿದ್ದೀಯ. ನಾನು ನನ್ನ ಸ್ವಂತ ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದವನು. ಚುನಾವಣೆಗಾಗಿ ಯಾರ ಮುಂದೆಯೂ ಕೈ ಚಾಚಿದವನಲ್ಲ. ಅದು ನಿನಗೂ ಚೆನ್ನಾಗಿ ಗೊತ್ತಿದೆ'

Shivraj Tangadagi

ರೆಡ್ಡಿ ಪತ್ರಿಕಾ ಕೋಟ್‌ ಮೂಲಕ ತಂಗಡಗಿ ತಿರುಗೇಟು

'ಎರಡು ದಿನ ಹುಡುಕಾಡಿ ತಡಕಾಡಿ ಒಂದು ವಿಡಿಯೋ ಹಾಕಿದ್ದೀಯ. ಸರಿ ಇದೆ. ಆದರೆ, ನಾನು ಮಾತನಾಡಿರುವ ಮಾತಿಗೂ ನೀನು ಹೇಳಿರುವುದಕ್ಕೂ ಸಾಸಿವೆ ಕಾಳಿನಷ್ಟಾದರೂ ಸಂಬಂಧವಿದೆಯೇ? ⁠ನನ್ನ ಯಾವ ಮಾತನ್ನು ಎಲ್ಲಿಗೆ ಜೋಡಿಸಿ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದೀಯಾ?' ಎಂದು ಸಚಿವರು ಜನಾರ್ಧನರೆಡ್ಡಿಯವರು ಹೇಳಿಕೆಯ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನಲ್ಲಿ 'ದಕ್ಷಿಣ ಭಾರತದಲ್ಲಿ ಮೊದಲು ಬಿಜೆಪಿ ಅಧಿಕಾರಕ್ಕೆ ಬರಲು ಜನಾರ್ಧನ ರೆಡ್ಡಿ ಕಾರಣವೆಂದು ಹೇಳುತ್ತಾರೆ. ಆದರೆ ಅದಕ್ಕೆ ಕಾರಣ ಭೋವಿ ಜನಾಂಗದ ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್, ಪಾವಗಡ ವೆಂಕಡರಮಣ್ಣಪ್ಪ-ಜನಾರ್ಧನ ರೆಡ್ಡಿ' ಎಂಬ ಪತ್ರಿಕಾ ಕೋಟ್‌ ಅನ್ನು ಪೋಸ್ಟ್ ಮಾಡಿ ಸಚಿವರು ತಿರುಗೇಟು ನೀಡಿದ್ದಾರೆ.

ಮುಂದುವರಿದು 'ನಾನು ನಿನ್ನ ಗಣಿ ಹಣದಿಂದ ಗೆದ್ದಿದ್ದೇನೆ. ನಿನ್ನ ಆಶೀರ್ವಾದ ಗೆದ್ದಿದ್ದೇನೆ ಎಂದೆಲ್ಲಾ ಬೊಗಳೆ ಬಿಟ್ಟಿರುವೆ. ಚುನಾವಣೆ ಸಂದರ್ಭದಲ್ಲಿ ನಾನು ಎಷ್ಟು ಆಸ್ತಿ ಮಾರಾಟ ಮಾಡಿ ಚುನಾವಣೆ ಎದುರಿಸಿದ್ದೇನೆ ಎಂಬುದು ನಿನಗೆ ಗೊತ್ತಿಲ್ಲವೇ?. ನಿನ್ನ ಆಪ್ತ ಸಹಾಯಕನ ಮೂಲಕ ನನ್ನ ಆಸ್ತಿ ನಗದೀಕರಣ ಮಾಡಿಸಿದೆ. ನನ್ನ ಆಸ್ತಿ ನಗದೀಕರಣಕ್ಕೆ ಮಧ್ಯವರ್ತಿಯಾಗಿ ನೆರವಾಗಿದ್ದೆ ಅನ್ನೋದು ಬಿಟ್ಟರೆ ಬೇರೇನಿದೆ? ಎಂದು ಪ್ರಶ್ನಿಸಿದ್ದಾರೆ.

ನನ್ನ ಅಡ್ಡ ಇಟ್ಟುಕೊಂಡು ಅಧಿಕಾರಕ್ಕೆ ಬಂದವರು ನೀವು

'ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಸುವವನು ನಾನು.‌ ಹೀಗಾಗಿಯೇ ತುರ್ತು ಸಮಯದಲ್ಲಿ ನನ್ನ ಆಸ್ತಿ‌ ನಗದೀಕರಣಕ್ಕೆ ನೆರವಾದ ನಿನಗೆ ತುಂಬು ಸಭೆಯಲ್ಲಿ ಮನ ಬಿಚ್ಚಿ ಧನ್ಯವಾದ ತಿಳಿಸಿದ್ದೇನೆ. ಆದರೆ ಅದನ್ನೇ ಬೇರೆ ರೀತಿ ಬಿಂಬಿಸಿ ಪೋಸು ಕೊಡುತ್ತಿದ್ದೀಯ' ಎಂದು ಲೇವಡಿ ಮಾಡಿದರು.

'ಪಕ್ಷೇತರ ಶಾಸಕನಾಗಿದ್ದ ನಾನು ನೀನು ಹೇಳಿದ ಪಕ್ಷಕ್ಕೆ ಬೇಷರತ್ ಬೆಂಬಲ ಕೊಟ್ಟೆ. ನನ್ನ ಅಡ್ಡ ಇಟ್ಟುಕೊಂಡು ನೀನು ಮಂತ್ರಿಯಾದೆ. ನಿನ್ನ ಸಹೋದರ, ಸ್ನೇಹಿತ ಎಲ್ಲರೂ ಅಧಿಕಾರದ ಪಡಸಾಲೆಗೆ ಬಂದಿರಿ. ಹಳೆಯ ವಿಚಾರ ಕೆದಕ್ಕಿದ್ದೀಯಲ್ಲಪ್ಪ. ನೀನೇ ನಿನ್ನ ಬಾಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣವಲ್ಲ. ಭೋವಿ ಸಮಾಜದ ಶಿವರಾಜ ತಂಗಡಗಿ ಎಂದು ಹೇಳಿದ್ದೀಯಾ. ಅದು ಮರೆತು ಹೋಯಿತೇ ಅಥವಾ ಮರೆತಂತೆ ನಾಟಕವೇ?. ಹಾಗಾದರೆ ನಮ್ಮ ಬೆಂಬಲ ಹಾಗೂ ಕನಕಗಿರಿ ಕ್ಷೇತ್ರದ ಜನತೆಯ ಭಿಕ್ಷೆಯಿಂದಲೇ ನೀನು, ನಿನ್ನ ಸಹೋದರ ಸಚಿವರಾಗಿದ್ದಲ್ಲವೇ? ಅದನ್ನೂ ಹೇಳಿಬಿಡು ಎಂದು ಸವಾಲೆಸೆದರು.

ಇತಿಹಾಸ ಕೆದಕಿದ ತಂಗಡಗಿ

ಅಂದು ಕ್ಷೇತ್ರಕ್ಕೆ ನನ್ನನ್ನು ಬಲವಂತವಾಗಿ ಆಹ್ವಾನಿಸಿದ್ದೇ ನೀನು. ಸಾಸಿವೆ ಕಾಳಷ್ಟು ಸಹಾಯವನ್ನೂ ನೆನೆಯಬೇಕಿರುವುದು ಧರ್ಮ ನೆನೆದಿದ್ದೇನೆ. ಅದನ್ನೂ ತಿರುಚಿ ದುರ್ಲಾಭ ಪಡೆದುಕೊಳ್ಳಲು ಯತ್ನಿಸುತ್ತಿದ್ದೀಯಲ್ಲಾ ನಿನ್ನ ಏನನ್ನಬೇಕು?. ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀನು ಎಷ್ಟು ಬಾರಿ ನನ್ನ ಸಂಪರ್ಕಿಸಿದ್ದೆ? ನಮ್ಮ ಅಭ್ಯರ್ಥಿಗೆ ಬೆಂಬಲ‌ ನೀಡುತ್ತೇನೆ ಎಂದು ಎಷ್ಟು ಬಾರಿ ಗೋಗರೆದೆ. ಎಲ್ಲಿ ಯಾವ ರೀತಿ ಸಹಾಯ ಪಡೆದೆ ಎಂಬುದನ್ನು ಹೇಳಿಬಿಡು. ನಿನಗೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೆನಪಾಗಲಿಲ್ಲವೇ? ಎಂದರು.

ಕ್ಷೇತ್ರಕ್ಕೆ ಅನುದಾನ ಸುಮ್ಮನೆ ಬಂದಿಲ್ಲ, ಅಂಗಲಾಚಿದ್ದಕ್ಕೆ ಬಂತು

'ನಿಮ್ಮ ಕ್ಷೇತ್ರಕ್ಕೆ ಹರಿದು ಬಂದ ಅನುದಾನ ಸುಮ್ಮನೆ ಬಂತೇ? ಅನುದಾನಕ್ಕೆ ಅಂಗಾಲಾಚಿದೆಯಲ್ಲ. ನಿನ್ನ ಕ್ಷೇತ್ರಕ್ಕೆ ಬಂದ ಅನುದಾನದಲ್ಲಿ ನನ್ನ ಕೊಡುಗೆ ಇಲ್ಲವೇ?. ನೀನು ನನ್ನ ಋಣದಲ್ಲಿದ್ದೀಯೇ ಹೊರತು ನಾನು ಅಲ್ಲ. ಉಪಕಾರ ಸ್ಮರಣೆ ಇಲ್ಲದ ಕೃತಘ್ನ ನೀನು. ರಾಜಕೀಯದಲ್ಲಿ ಕಾಲಕ್ಕೆ ತಕ್ಕಂತೆ ಮಾತು ಬದಲಾಯಿಸುವ ಊಸರವಳ್ಳಿ. ನೀನು ಎಷ್ಟೇ ಸುಳ್ಳು ಹೇಳಿದರು ಜನರಿಗೆ ಸತ್ಯ ತಿಳಿದಿದೆ'.

'ಮೊದಲು ಸಹಾಯ ಮಾಡಿದವರನ್ನು ನೆನೆಯುವುದು ಕಲಿ. ನಿನ್ನ ಸಚಿವನಾಗಿ ಮೆರೆಸಿದ ಯಡಿಯೂರಪ್ಪ ಅವರಿಗೆ ಬೆನ್ನಿಗೆ ಚೂರಿ ಹಾಕಿದವನು ನೀನು. ಬಿಜೆಪಿಯನ್ನೇ ಮುಗಿಸಲು ಹೊರಟವನು. ಕನಕಗಿರಿಯಲ್ಲಿ ನನ್ನ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿಗೆ ಬಿಟ್ಟು ನನಗೆ ಆರ್ಥಿಕ ನೆರವಾದೆ ಎಂದು ಬುರುಡೆ ಬಿಡುತ್ತಿದ್ದೀಯ. ಹಾಗಾದರೆ ಸ್ವಂತ ಪಕ್ಷ ಮುಗಿಸುವ ಖಯಾಲಿ ಅಂದಿನಿಂದಲೇ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೀಯಾ?

ಶ್ರೀರಾಮುಲು ಮುಗಿಸಲು ಷಡ್ಯಂತ್ರ ಮಾಡಿದ್ದೇಕೆ?

'ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿಕೊಳ್ಳಲು ನೂರು ಹೇಳಬೇಕಾಗುತ್ತದೆ. ನಿನಗೆ ಮಾನ ಮರ್ಯಾದೆ ಇದ್ದರೆ ಜೈಲಿಗೆ ಯಾಕೆ ಹೋದೆ? ಬಿಜೆಪಿ ವಿರುದ್ಧ ಪಕ್ಷ ಯಾಕೆ ಕಟ್ಟಿದೆ? ಶ್ರೀರಾಮುಲು ಮುಗಿಸಲು ಷಡ್ಯಂತ್ರ ಯಾಕೆ ಮಾಡಿದೆ? ಸ್ವಂತ ತಮ್ಮನನ್ನೇ ಯಾಕೆ ಸೋಲಿಸಿದೆ ಹೇಳು. ಇದೆಲ್ಲಾ ಪ್ರಶ್ನೆಗೆ ಉತ್ತರಿಸಿ ನಿನ್ನ ಮೊದಲ ಸವಾಲಿನಂತೆ ನಾಳೆಯೇ ರಾಜೀನಾಮೆ ನೀಡು. ಬೆನ್ನಲ್ಲೇ ನಾನೂ ರಾಜೀನಾಮೆ‌ ನೀಡುತ್ತೇನೆ. ಮುಂದಿನದ್ದು ಉಪ ಚುನಾವಣಾ ಕಣದಲ್ಲೇ ಚರ್ಚೆಯಾಗಲಿ' ಎಂದು ಮತ್ತೆ ಸವಾಲು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+