ನಿಮಿಷಾಂಭ ದೇವಿಗೆ ಹರಕೆ; 22 ಗಂಟೆಯೊಳಗೆ ಸ್ಯಾಂಟ್ರೋ ರವಿ ಅರೆಸ್ಟ್: ಅಲೋಕ್ ಕುಮಾರ್
ಮಂಡ್ಯ,ಜನವರಿ14: ನಿಮಿಷಾಂಭ ದೇವಿಗೆ ಹರಕೆ ಹೊತ್ತ 22 ಗಂಟೆಗಳೊಗೆ ಸ್ಯಾಂಟ್ರೋ ರವಿ ಅರೆಸ್ಟ್ ಆಗಿರುವುದಾಗಿ ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಈ ಕುರಿತು ಶನಿವಾರ ಮಂಡ್ಯ ಜಿಲ್ಲೆಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಗಂಜಾಂ ಗ್ರಾಮದಲ್ಲಿರುವ ನಿಮಿಷಾಂಭ ದೇವಿಗೆ ಪೂಜೆ ಸಲ್ಲಿಸಿ, ಎಡಿಜಿಪಿ ಅಲೋಕ್ ಕುಮಾರ್ ಹರಕೆಯನ್ನು ತೀರಿಸಿದ್ದಾರೆ. ಸ್ಯಾಂಟ್ರೋ ರವಿ ಶೀಘ್ರ ಬಂಧನವಾದರೆ ಮತ್ತೆ ಬಂದು ವಿಶೇಷ ಪೂಜೆ ಸಲ್ಲಿಸುವುದಾಗಿ ಅಲೋಕ್ ಕುಮಾರ್ ಹರಕೆ ಹೊತ್ತಿದ್ದರು. ದೇವಿ ಬಳಿ ಹರಕೆ ಹೊತ್ತು ಹೋಗಿದ್ದ 24 ಗಂಟೆಯೊಳಗೆ ಪೊಲೀಸರಿಗೆ ಸ್ಯಾಂಟ್ರೋ ರವಿ ಇರುವ ಸ್ಥಳ ಪತ್ತೆಯಾಗಿದ್ದು, ಶುಕ್ರವಾರ ಬಂಧಿಸಿದ್ದಾರೆ.
ಈ ವೇಳೆ ಮಾತನಾಡಿದ ಅಲೋಕ್ ಕುಮಾರ್, ದೇವಿ ಮೇಲೆ ಹನ್ನೆರಡು ವರ್ಷಗಳಿಂದ ನನಗೆ ನಂಬಿಕೆ ಇದೆ. 2011 ರಲ್ಲಿ ಮೈಸೂರಿನಲ್ಲಿ ಡಬಲ್ ಮರ್ಡರ್ ಕೇಸ್ ಆಗಿತ್ತು. ಆಗಲೂ ಬಂದು ನಾನು ದೇವಿಗೆ ಹರಕೆ ಹೊತ್ತಿದ್ದೆ, ಹರಕೆ ಹೊತ್ತು ಪೂಜೆ ಸಲ್ಲಿಸಿ ನಾವು ಮೈಸೂರಿಗೆ ಹೋಗುವುದರೊಳಗಾಗಿ ಅಂದ್ರೆ ಐದೇ ಗಂಟೆಗಳಲ್ಲಿ ಆರೋಪಿಗಳನ್ನ ಬಂಧಿಸಲಾಗಿತ್ತು. ಈಗಲೂ ಹತ್ತನೇ ತಾರೀಖು ಬಂದು ನಾನು ಪೂಜೆ ಸಲ್ಲಿಸಿ ಸ್ಯಾಂಟ್ರೋ ರವಿ ಬಂಧನವಾಗಲಿ ಎಂದು ಹರಕೆ ಹೊತ್ತಿದ್ದೆ. ಈಗಲೂ ಹರಕೆ ಹೊತ್ತ 22 ಗಂಟೆಗಳಲ್ಲೇ ಆರೋಪಿ ಸಿಕ್ಕಿದ್ದಾನೆ. ಹಾಗಾಗಿ ದೇವಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದ್ದೇನೆ. ದೇವಿ ಮೇಲೆ ಅಪಾರವಾದ ನಂಬಿಕೆ ಇದೆ ಎಂದರು.

ಆತನಿಂದಾಗಿ ಸರ್ಕಾರಕ್ಕೆ, ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬರುತ್ತಿತ್ತು. ಹಾಗಾಗಿ ಆತ ನಮಗೆ ಬೇಗ ಸಿಗಲಿ ಎಂದು ಹರಕೆ ಹೊತ್ತಿದ್ದೆ. ಆತ ಈಗ ನಮ್ಮ ಕಸ್ಟಡಿಯಲ್ಲಿದ್ದಾನೆ. ಆತನ ಹೇಳಿಕೆ ದಾಖಲಿಸಲಾಗುತ್ತಿದೆ. ಮೊದಲು ಆತನ ವಿರುದ್ದ ದಾಖಲಾಗಿರೊ ಕೇಸ್ ಬಗ್ಗೆ ವಿಚಾರಣೆ ನಡೆಯುತ್ತೆ. ನಂತರ ಆತ ತಲೆ ಮರೆಸಿಕೊಂಡು ಎಲ್ಲೆಲ್ಲಿ ಇದ್ದ ಆತನಿಗೆ ಯಾರೆಲ್ಲಾ ಸಹಾಯ ಮಾಡಿದ್ರು ಎಂಬ ಬಗ್ಗೆ ವಿಚಾರಣೆ ಮಾಡ್ತೀವಿ. ಹಾಗೊಂದು ವೇಳೆ ಯಾರಾದರೂ ಸಹಾಯ ಮಾಡಿದ್ದರೆ ಅವರ ಮೇಲೂ ಕ್ರಮ ಕೈಗೊಳ್ತಿವಿ ಎಂದು ಹೇಳಿದರು.
ಸ್ಯಾಂಟ್ರೋ ರವಿಗೆ ಡಯಾಬಿಟಿಸ್ ಇದೆ, ಗಂಟೆಗೊಮ್ಮೆ ಇನ್ಸುಲಿನ್ ತಗೋತಿದ್ದಾನೆ
ವಿಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸಿನ ಬಗ್ಗೆ ಮಾತ್ರ ಈಗ ಸ್ಯಾಂಟ್ರೋ ರವಿ ವಿಚಾರಣೆ ನಡೆಯುತ್ತಿದೆ. ಬೇರೆ ಇನ್ಯಾವುದೇ ವಿಚಾರಗಳ ಬಗ್ಗೆಯೂ ಆರೋಪಿಯನ್ನು ನಾವು ಪ್ರಶ್ನಿಸಿಲ್ಲ. ನಾವು ಪೊಲೀಸ್ ಕಸ್ಟಡಿಗೆ ನೀಡುವಂತೆ ನ್ಯಾಯಾಧೀಶರನ್ನು ಕೇಳುತ್ತೇವೆ. ಪೊಲೀಸ್ ಕಸ್ಟಡಿಯಲ್ಲಿ ಹೆಚ್ಚಿನ ವಿಚಾರಣೆ ನಡೆಸುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಸ್ಯಾಂಟ್ರೋ ರವಿ 11 ದಿನಗಳ ಕಾಲ ಎಲ್ಲೆಲ್ಲಿ ಓಡಾಡಿಕೊಂಡಿದ್ದ, ಆತನಿಗೆ ಯಾರ್ಯಾರು ಸಹಾಯ ಮಾಡಿದ್ದರು ಎಂಬುದರ ಬಗ್ಗೆ ಆರಂಭಿಕ ಮಾಹಿತಿ ಪಡೆಯುತ್ತಿದ್ದೇವೆ. ಸ್ಯಾಂಟ್ರೋ ರವಿ ವಿಚಾರಣೆಗೆ ಸ್ಪಂದಿಸುತ್ತಿದ್ದಾನೆ. ಸ್ಯಾಂಟ್ರೋ ಡಯಾಬಿಟಿಕ್ ಇದ್ದಾನೆ. ಗಂಟೆಗೊಮ್ಮೆ ಇನ್ಸುಲಿನ್ ಪಡೆದುಕೊಳ್ಳುತ್ತಿದ್ದಾನೆ. ಸೂಕ್ತ ಔಷಧಿ ವ್ಯವಸ್ಥೆ ಮಾಡಿ ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.
ಅವನಿಗೆ ಡಯಾಬಿಟಿಕ್ ಬಿಟ್ಟರೆ ಅಂತಹ ಸಮಸ್ಯೆ ಇದ್ಧಂತೆ ಕಾಣುತ್ತಿಲ್ಲ. ಸ್ಯಾಂಟ್ರೋ ರವಿ ಸೇರಿ ನಾಲ್ವರನ್ನು ವಿಚಾರಣೆ ನಡೆಸುತ್ತಿದ್ದೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದರು. ಶನಿವಾರ ಸಂಜೆ ವೇಳೆಗೆ ಸ್ಯಾಂಟ್ರೋ ರವಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಮಧ್ಯಾಹ್ನ ಊಟಕ್ಕೆ ಸ್ಯಾಂಟ್ರೋ ರವಿ ಮೊಸರನ್ನ ತಿಂದಿದ್ದು ಕೊಂಚ ಸುಸ್ತಾಗಿದ್ದಾನೆ ಅಂತ ಹೇಳಲಾಗುತ್ತಿದೆ. ಅಲ್ಲದೆ ಡಯಾಬಿಟಿಕ್ ಹೆಚ್ಚಾಗಿರುವ ಕಾರಣ ಅಗತ್ಯ ಬಿದ್ದರೆ ವೈದ್ಯರನ್ನು ಸಂಪರ್ಕಿಸುವ ಕುರಿತು ತೀರ್ಮಾನ ಮಾಡಲಾಗಿದೆ.












Click it and Unblock the Notifications