ರಾಜ್ಯದೆಲ್ಲೆಡೆ ಬರವಿದೆ ನನಗೆ ಹೊಸ ಕಾರು ಬೇಡ ಎಂದ ಸಚಿವ!
ಬೆಂಗಳೂರು, ಅಕ್ಟೋಬರ್ 21: ರಾಜ್ಯದಲ್ಲಿ ಭೀಕರ ಬರಗಾಲದಲ್ಲೂ ರಾಜ್ಯ ಸರ್ಕಾರ ಸಂಪುಟದ 33 ಸಚಿವರಿಗೆ ಇನೋವಾ ಹೈಬ್ರೀಡ್ ಕಾರುಗಳನ್ನು ಬರೋಬ್ಬರಿ 9 ಕೋಟಿ 90 ಲಕ್ಷ ರೂ ವೆಚ್ಚದಲ್ಲಿ ಇನೋವಾ ಹೈಬ್ರೀಡ್ ಕಾರುಗಳನ್ನು ರಾಜ್ಯ ಸರ್ಕಾರ ಖರೀದಿ ಮಾಡಿದ್ದು, ಬಾರೀ ವಿರೋಧಕ್ಕೆ ಕಾರಣವಾಗಿದೆ.
ಈಗಾಗಲೇ ದಸರಾ ಹಬ್ಬಕ್ಕಾಗಿ ರಾಜ್ಯ ಸರ್ಕಾರ ತನ್ನ ಸಚಿವರಿಗೆ ಹೊಸ ಸರ್ಕಾರಿ ಕಾರುಗಳನ್ನು ವಿತರಿಸುತ್ತಿದೆ. ಬಹುತೇಕ ಎಲ್ಲ ಸಚಿವರುಗಳು ತಮಗೆ ಇಂಥದ್ದೇ ಕಾರು ಬೇಕು, ಅದಕ್ಕೆ ಇಂಥದ್ದೇ ನಂಬರ್ ಇರಬೇಕು ಎಂದೆಲ್ಲ ಬೇಡಿಕೆ ಸಲ್ಲಿಸುತ್ತಿದ್ದಾರೆ. ಆದರೆ ಕಾರ್ಮಿಕ ಮತ್ತು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ಬರಗಾಲದ ನಡುವೆ ನನಗೆ ಹೊಸ ಕಾರು ಬೇಡ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಮುಂಗಾರು ಆರಂಭದಿಂದಲೂ ಮಳೆಯಿಲ್ಲದೆ, ಭೀಕರ ಬರಗಾಲ ಸೃಷ್ಟಿಯಾಗಿದೆ. ಈ ನಡುವೆ ರಾಜ್ಯದ ಸಚಿವರೊಬ್ಬರು ತಮಗೆ ಸದ್ಯ ಯಾವುದೇ ಹೊಸ ಕಾರಿನ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ, ಮಾದರಿಯಾಗಿದ್ದಾರೆ. ರಾಜ್ಯದೆಲ್ಲೆಡೆ ತೀವ್ರ ಬರ ಆವರಿಸಿದೆ; ಮಳೆ-ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ತೆರಿಗೆ ಹಣವನ್ನು ವಿನಾಕಾರಣ ಪೋಲು ಮಾಡಬಾರದು ಎನ್ನುವ ನಿಲುವಿಗೆ ಸಚಿವ ಸಂತೋಷ್ ಲಾಡ್ ಈ ನಿರ್ಧಾರಕ್ಕೆ ಬಂದಿರುವುದಾಗಿ ಹೇಳಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶದ ಖಾಲಿ ಹುದ್ದೆಗಳ ಭರ್ತಿಗೆ ಪತ್ರ!
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿ ಹಾಗೂ ಬಡ್ತಿ ಮೂಲಕ ತುಂಬ ಬೇಕಾಗಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಎಲ್ಲಾ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರು ಹೊಂದಿರುವ ಖಾತೆಗಳಿಗೆ ಸಂಬಂಧಿಸಿದಂತೆ ಸಚಿವಾಲಯ ಮುಖ್ಯಸ್ಥರಿಗೆ ಭಾರತ ಸಂವಿಧಾನ ಅನುಚ್ಚೇದ 371(ಜೆ) ಅಡಿ ಹೊರಡಿಸಲಾಗಿರುವ ಆದೇಶಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ಮತ್ತು ಪರಾಮರ್ಶಿಸುವ ಕುರಿತು ರಚಿಸಲಾಗಿರುವ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷರೂ ಆದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
2023ರ ಆಗಸ್ಟ್ 17ರಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾದ ತೀರ್ಮಾನದಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ ಸ್ಥಳೀಯ ವೃಂದದಲ್ಲಿನ ಮೀಸಲಿರಿಸಿರುವ ಹುದ್ದೆಗಳನ್ನು ತ್ವರಿತವಾಗಿ ಭರ್ತಿ ಮಾಡಬೇಕಿರುವುದರಿಂದ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ಪತ್ರಗಳನ್ನು ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ರವಾನಿಸಿದ್ದಾರೆ. ಭಾರತ ಸಂವಿಧಾನ ಅನುಚ್ಛೇದ 371 (ಜೆ) ಅಡಿಯಲ್ಲಿ ಇಲಾಖಾವಾರು ಭರ್ತಿ ಮಾಡಲು ಬಾಕಿ ಇರುವ ನೇರ ನೇಮಕಾತಿ ಹಾಗೂ ಮುಂಬಡ್ತಿಯಲ್ಲಿ ಹುದ್ದೆಗಳ ವಿವರಗಳನ್ನು ಪತ್ರದ ಜೊತೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ನೇರ ನೇಮಕಾತಿ ಮೂಲಕ 28,023 ಹುದ್ದೆಗಳನ್ನು ಭರ್ತಿ ಮಾಡಬೇಕಿದ್ದು, ಇವಗಳಲ್ಲಿ 12,945 ಹುದ್ದೆಗಳನ್ನು ಭರ್ತಿ ಮಾಡುವ ಕ್ರಮ ಲೋಕಸೇವಾ ಆಯೋಗ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ನಡೆಯುತ್ತಿದೆ. ಉಳಿದಂತೆ 15,078 ಹುದ್ದೆಗಳು ಖಾಲಿ ಇದ್ದು ಭರ್ತಿ ಪ್ರಕ್ರಿಯೆ ಆರಂಭಗೊಳ್ಳಬೇಕಿದೆ. ಇವುಗಳಲ್ಲಿ ಎ,ಬಿ,ಸಿ ಹಾಗೂ ಡಿ ವೃಂದದ ಹುದ್ದೆಗಳು ಸೇರಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ 9,905 ವಿವಿಧ ಹುದ್ದೆಗಳನ್ನು ಬಡ್ತಿ ಮೂಲಕ ತುಂಬ ಬೇಕಿದ್ದು, ಈ ಹುದ್ದೆಗಳನ್ನು ಬಡ್ತಿ ಮೂಲಕ ತುಂಬಲು ಕ್ರಮ ಕೈಗೊಳ್ಳುವಂತೆಯೂ ಸಚಿವ ಪ್ರಿಯಾಂಕ್ ಖರ್ಗೆ ಸಂಪುಟದ ಎಲ್ಲಾ ಸಚಿವರಿಗೂ ಬರೆದಿರುವ ಪತ್ರದಲ್ಲಿ ಕೋರಿದ್ದಾರಲ್ಲದೆ, ಇಲಾಖೆಯ ಅಧಿಕಾರಿಗಳ ಸಭೆ ಕರೆದು ಈ ನಿಟ್ಟಿನಲ್ಲಿ ಪ್ರಗತಿ ಸಾಧಿಸಲು ಸಹಕಾರ ನೀಡಬೇಕೆಂದೂ ತಿಳಿಸಿದ್ದಾರೆ.












Click it and Unblock the Notifications