ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಾಟೆಯ ಹಿಂದೆ ಆರ್‌ಎಸ್‌ಎಸ್!

Written By:
Subscribe to Oneindia Kannada

ಬೆಂಗಳೂರು, ಸೆ 16: ಇಪ್ಪತ್ತೈದು ವರ್ಷಗಳ ಹಿಂದೆ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನಡೆದಿದ್ದ ಹಿಂಸಾಚಾರವನ್ನು ನೆನೆಪಿಸುವಂತೆ, ಸೆಪ್ಟಂಬರ್ ಹನ್ನೆರಡರಂದು ಬೆಂಗಳೂರಿನಲ್ಲಿ ನಡೆದ ಹಿಂಸಾಚಾರದ ಹಿಂದೆ ರಾಜ್ಯ ಗೃಹ ಸಚಿವರ ಗುಮಾನಿ ಬಿಜೆಪಿ ಮಾತೃ ಸಂಘಟನೆಯ ಮೇಲೆ ಬಿದ್ದಿದೆ.

ಶುಕ್ರವಾರ (ಸೆ 16) ಕೆಪಿಸಿಸಿ ಪದಾಧಿಕಾರಿಗಳ ಸಭೆಯ ನಂತರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಗೃಹ ಸಚಿವ ಡಾ. ಪರಮೇಶ್ವರ್, ಮೊನ್ನೆ ನಡೆದ ಕಾವೇರಿ ಗಲಾಟೆಯ ಹಿಂದೆ ಆರ್‌ಎಸ್‌ಎಸ್ ಸಂಘಟನೆಯ ಕೈವಾಡವಿದೆ ಎನ್ನುವ ಗಂಭೀರ ಹೇಳಿಕೆಯನ್ನು ನೀಡಿದ್ದಾರೆ. (ಕನ್ನಡಿಗರಿಗೆ ರಕ್ಷಣೆ ನೀಡಲು ಸಿದ್ದರಾಮಯ್ಯ ಪತ್ರ)

ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರಕಾರ ಸರಿಯಾಗಿ ಮಾಹಿತಿ ನೀಡಿ ರಾಜ್ಯದ ಪರವಾಗಿ ವಾದಿಸಿತ್ತೇ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದ ಗೃಹ ಸಚಿವರು, ಬೆಂಗಳೂರಿನಲ್ಲಿ ನಡೆದ ಗಲಭೆಯ ಹಿಂದೆ ಯಾರ ಕೈವಾಡವಿದ್ದರೂ ನಾವು ಸುಮ್ಮನೆ ಕೂರುವುದಿಲ್ಲ ಎನ್ನುವ ಎಚ್ಚರಿಕೆಯನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಕಾವೇರಿ ಗಲಾಟೆಗೆ ಸಂಬಂಧಿಸಿದಂತೆ ನಡೆದ ಹಿಂಸಾಚಾರಕ್ಕೆ ಆರ್‌ಎಸ್‌ಎಸ್ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಭೆಯಲ್ಲಿ ದೂರಿದ್ದಾರೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಈ ಸಂಬಂಧ ತನಿಖಾ ತಂಡವನ್ನು ನೇಮಿಸಿ ಕೂಲಂಕುಷ ತನಿಖೆ ನಡೆಸಿ, ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತದೆ, ಇದು ನಮ್ಮ ಕಾರ್ಯಕರ್ತರ ಅಭಿಪ್ರಾಯ ಎಂದು ರಾಜ್ಯ ಗೃಹ ಸಚಿವರು ನುಡಿದಿದ್ದಾರೆ.

ಆರ್‌ಎಸ್‌ಎಸ್ ಪ್ರತಿಕ್ರಿಯೆ: ಗೃಹ ಸಚಿವರ ಹೇಳಿಕೆಗೆ ಕಿಡಿಕಾರಿರುವ ಆರ್‌ಎಸ್‌ಎಸ್, ಸಂಕೀರ್ಣ ಹಾಗೂ ಗಂಭೀರವಾದ ಕಾವೇರಿ ಜಲಸಮಸ್ಯೆಗೆ ಸೂಕ್ತ ಪರಿಹಾರ ಕ್ರಮಗಳನ್ನು ಜನರು ನಿರೀಕ್ಷಿಸುತ್ತಾರೆಯೇ ಹೊರತು ಬಾಲಿಶ ಹೇಳಿಕೆಗಳನ್ನಲ್ಲ. ಸತ್ಯ ಜನರಿಗೆ ತಿಳಿದಿದೆ ಎಂದು ತಿರುಗೇಟು ನೀಡಿದೆ. (ಕಾವೇರಿ ಗಲಭೆ, 25 ಸಾವಿರ ಕೋಟಿ ರು ನಷ್ಟ)

ಕಾವೇರಿ ಗಲಭೆಗೆ ಬಿಜೆಪಿಯನ್ನು ದೂರಿದ ಕಾಂಗ್ರೆಸ್ ಮುಖಂಡರು..

ಪರಮೇಶ್ವರ್

ಪರಮೇಶ್ವರ್

ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಬೆಂಗಳೂರು ಗಲಭೆಯ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಗಲಾಟೆಯ ಹಿಂದೆ ಆರ್‌ಎಸ್‌ಎಸ್ ಸಂಘಟನೆಯ ಕೈವಾಡವಿದೆ ಎನ್ನುವ ಸಂಶಯವಿದೆ, ಈ ಬಗ್ಗೆ ತನಿಖೆ ನಡೆಸಲಾಗುವುದು - ಪರಮೇಶ್ವರ್.

ಬಿ ಕೆ ಹರಿಪ್ರಸಾದ್

ಬಿ ಕೆ ಹರಿಪ್ರಸಾದ್

ಕಾವೇರಿ ಗಲಭೆಗೆ ವಿರೋಧ ಪಕ್ಷದ ಕುತಂತ್ರ ಕಾರಣ, ನಮ್ಮ ಪಕ್ಷದಿಂದ ಯಾವುದೇ ತೊಂದರೆಯಾಗಿಲ್ಲ. ಪ್ರಧಾನಿ ಮಧ್ಯಪ್ರವೇಶಿಸಿ ಕಾವೇರಿ ಸಮಸ್ಯೆಗೆ ಪರಿಹಾರ ನೀಡಲಿ - ರಾಜ್ಯಸಭಾ ಸದಸ್ಯ ಬಿ ಕೆ ಹರಿಪ್ರಸಾದ್.

 ಆರ್ ವಿ ದೇಶಪಾಂಡೆ

ಆರ್ ವಿ ದೇಶಪಾಂಡೆ

ಕಾವೇರಿ ವಿವಾದಕ್ಕೆ ನೂರು ವರ್ಷದ ಇತಿಹಾಸವಿದೆ. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಉಭಯ ರಾಜ್ಯಗಳ ನಡುವಿನ ಜಲ ವಿವಾದವನ್ನು ಇತ್ಯರ್ಥಗೊಳಿಸಲಿ, ನಿಮಗೆ ಕೈಮುಗೀತೀನಿ ಈ ಬಗ್ಗೆ ಹೆಚ್ಚೇನು ನನ್ನನ್ನು ಕೇಳಬೇಡಿ - ಸಚಿವ ಆರ್ ವಿ ದೇಶಪಾಂಡೆ.

ದಿನೇಶ್ ಗುಂಡೂರಾವ್

ದಿನೇಶ್ ಗುಂಡೂರಾವ್

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಉರುಳಿಸುವ ಉದ್ದೇಶದಿಂದ ಮೋದಿ ಸಹಕಾರ ನೀಡುತ್ತಿಲ್ಲ. ಮಹದಾಯಿ ಮತ್ತು ಕಾವೇರಿ ವಿಚಾರದಲ್ಲಿ ಮೋದಿ ನಡೆ ಸಂಶಯಕ್ಕೀಡಾಗುವಂತೆ ಮಾಡಿದೆ. ರಾಜ್ಯ ಬಿಜೆಪಿ ಮುಖಂಡರು ರಾಜಕೀಯ ಮಾಡುತ್ತಿದ್ದಾರೆ -ಸಚಿವ ದಿನೇಶ್ ಗುಂಡೂರಾವ್.

ಆರ್‌ಎಸ್‌ಎಸ್ ಪ್ರತಿಕ್ರಿಯೆ

ಆರ್‌ಎಸ್‌ಎಸ್ ಪ್ರತಿಕ್ರಿಯೆ

ತಮ್ಮ ವೈಫಲ್ಯ, ಅಸಮರ್ಥತೆಯನ್ನು ಮುಚ್ಚಿಕೊಳ್ಳಲು ಸಂಘದ ಮೇಲೆ ಆರೋಪ ಹೊರಿಸುವ ಚಾಳಿ ಅನೇಕ ಅಪ್ರಬುದ್ಧ ರಾಜಕಾರಣಿಗಳಿಗಿದೆ. ಅದೇ ಜಾಡನ್ನು ನಾಡಿನ ಮಾನ್ಯ ಗೃಹ ಮಂತ್ರಿಗಳು ತುಳಿದಿರುವುದು ಖೇದಕರ ಎಂದು ಆರ್‌ಎಸ್‌ಎಸ್ ಕ್ಷೇತ್ರೀಯ ಸಂಘಚಾಲಕ ವಿ ನಾಗರಾಜ್ ಅವರ ಪತ್ರಿಕಾ ಹೇಳಿಕೆ ನೀಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
RSS behind Cauvery violence in Bengaluru, Home Minister Parameshwar statement and RSS reaction on Parameshar statement.
Please Wait while comments are loading...