ಅಕ್ಕಿ ದರ 5 ರಿಂದ 10 ರೂ. ಹೆಚ್ಚಳ; ಸರ್ಕಾರಕ್ಕೆ ಎಚ್ಚರಿಕೆ!
ಬೆಂಗಳೂರು, ಜೂನ್ 22: ಒಂದು ಕಡೆ ಕರ್ನಾಟಕ ಸರ್ಕಾರ 'ಗೃಹಜ್ಯೋತಿ' ಯೋಜನೆ ನೋಂದಣಿ ಮಾಡಿಕೊಳ್ಳುತ್ತಿದೆ. ಮತ್ತೊಂದು ಕಡೆ 'ಅನ್ನಭಾಗ್ಯ' ಯೋಜನೆಯಡಿ 10 ಕೆಜಿ ಅಕ್ಕಿ ಪೂರೈಕೆ ಮಾಡಲು ಅಕ್ಕಿ ಖರೀದಿಗಾಗಿ ಪ್ರಯತ್ನ ನಡೆಸುತ್ತಿದೆ. ಮತ್ತೊಂದು ಕಡೆ ಉದ್ಯಮಿಗಳು ವಿದ್ಯುತ್ ಬಿಲ್ ಏರಿಕೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.
ವಿದ್ಯುತ್ ಬಿಲ್ ಹೆಚ್ಚಳದ ಕುರಿತು ರೈಸ್ ಮಿಲ್ ಮಾಲೀಕರು ಧ್ವನಿ ಎತ್ತಿದ್ದಾರೆ. ಸರ್ಕಾರ ವಿದ್ಯುತ್ ದರ ಕಡಿತ ಮಾಡದಿದ್ದರೆ ಅಕ್ಕಿಯ ದರವನ್ನು 5 ರಿಂದ 10 ರೂ.ಗೆ ಏರಿಕೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಅಕ್ಕಿಯ ದರ ಏರಿಕೆಯಾದರೆ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.

ಕರ್ನಾಟಕದ ರೈಸ್ ಮಿಲ್ ಮಾಲೀಕರ ಸಂಘದ ವಿದ್ಯುತ್ ದರ ಏರಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ. ವಿದ್ಯುತ್ ಬಿಲ್ ದುಪ್ಪಟ್ಟು ಬರುತ್ತಿದೆ, ನಮಗೆ ನಷ್ಟವಾಗುತ್ತಿದೆ. ಸರ್ಕಾರ ದರ ಇಳಿಕೆ ಮಾಡದಿದ್ದರೆ ನಾವು ಪ್ರತಿ ಕೆಜಿ ಅಕ್ಕಿ ದರವನ್ನು 5 ರಿಂದ 10 ರೂ. ಏರಿಸುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
2 ಸಾವಿರ ರೈಸ್ ಮಿಲ್‌ಗಳು; ಕರ್ನಾಟಕದಲ್ಲಿ ಸುಮಾರು 2 ಸಾವಿರ ರೈಸ್ ಮಿಲ್‌ಗಳು ಇವೆ ಎಂದು ಅಂದಾಜಿಸಲಾಗಿದೆ. ಈಗ ವಿದ್ಯುತ್ ದರ ಏರಿಕೆಯಾದ ಪರಿಣಾಮ ಅವರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಅವರು ಅಕ್ಕಿಯ ದರ ಏರಿಕೆಯ ಚಿಂತನೆ ನಡೆಸುತ್ತಿದ್ದಾರೆ.
ಕಳೆದ ಹದಿನೈದು ದಿನಗಳಿಂದ ಹೋಲ್‌ಸೆಲ್ ಅಕ್ಕಿಯ ದರದಲ್ಲಿ ಏರಿಕೆ ಕಂಡುಬರುತ್ತಿದೆ. ಮುಂದಿನ ವಾರದೊಳಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆಯೂ ಇದೆ. ಇದೇ ಸಮಯದಲ್ಲಿ ಸರ್ಕಾರ 'ಅನ್ನಭಾಗ್ಯ' ಯೋಜನೆಯಡಿ ಪೂರೈಕೆ ಮಾಡಲು ಅಕ್ಕಿ ಖರೀದಿಗೆ ಮುಂದಾಗಿದ್ದು, ಸದ್ಯಕ್ಕೆ ದರಗಳು ಕಡಿಮೆಯಾಗುವ ನಿರೀಕ್ಷೆ ಮಾಡುವಂತಿಲ್ಲ.
ಪ್ರತಿಪಕ್ಷಗಳ ಟೀಕೆ; 'ಅನ್ನಭಾಗ್ಯ' ಅಕ್ಕಿ ನೀಡುವುದು ಮತ್ತು ವಿದ್ಯುತ್ ದರ ಏರಿಕೆ ಈಗಾಗಲೇ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ವಿದ್ಯುತ್ ದರ ಏರಿಕೆ ಖಂಡಿಸಿ ಕೈಗಾರಿಕೋದ್ಯಮಿಗಳು ರಾಜ್ಯದ ಹಲವು ಕಡೆ ಗುರುವಾರ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿ, "ಕೈಗಾರಿಕೋದ್ಯಮಿಗಳ ಹೋರಾಟಕ್ಕೆ ಬಿಜೆಪಿ ನೈತಿಕ ಬೆಂಬಲ ನೀಡಿದೆ. ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಬರೆ ಎಳೆಯುವ ಕೆಲಸ ಮಾಡಿದೆ" ಎಂದು ಆರೋಪಿಸಿದರು.
"ನಮ್ಮ ಸರ್ಕಾರ ಬಡವರಿಗೆ 5 ಕೆಜಿ ಅಕ್ಕಿ ಕೊಡುವ ಕೆಲಸ ಮಾಡಿದೆ. ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಅಕ್ಕಿ ವಿತರಿಸುವ ಕೆಲಸ ಮಾಡುತ್ತಿದೆ. ಉಚಿತವಾಗಿ 10 ಕೆಜಿ ಅಕ್ಕಿ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದರು. ಭರವಸೆಯಂತೆ 10 ಕೆಜಿ ಅಕ್ಕಿ ಕೊಡಲಾಗದೆ ಸರ್ಕಾರ ವಿಫಲವಾಗಿದೆ" ಎಂದು ದೂರಿದರು.
ಇನ್ನು ವಿದ್ಯುತ್ ದರ ಏರಿಕೆ ಕುರಿತು ಬೃಹತ್ ಕೈಗಾರಿಕೆ ಸಚಿವ ಎಂ. ಬಿ. ಪಾಟೀಲ್ ಮಾತನಾಡಿದರು. "ರಾಜ್ಯದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ್ದು ನಮ್ಮ ಸರ್ಕಾರ ಅಲ್ಲ. ಕೆಇಆರ್ಸಿ ವಿದ್ಯುತ್ ದರ ಹೆಚ್ಚಳ ಮಾಡಿದೆ. ನಾವು ಅಧಿಕಾರಕ್ಕೆ ಬರುವ ಮೊದಲೇ ವಿದ್ಯುತ್ ದರ ಹೆಚ್ಚಳ ಆಗಿದೆ. ಬೆಲೆ ಏರಿಕೆಗೂ ನಮಗೂ ಯಾವ ಸಂಬಂಧವಿಲ್ಲ. ಈಗಾಗಲೇ ಮುಖ್ಯಮಂತ್ರಿಗಳು ದರ ಏರಿಕೆ ಹಿಂಪಡೆಯಲು ಆಗಲ್ಲ ಎಂದು ಹೇಳಿದ್ದಾರೆ. ಆದರೂ ಸಹ ನಾನು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇನೆ, ಕೈಗಾರಿಕೋದ್ಯಮಿಗಳು ಸಹಕರಿಸಿ" ಎಂದು ಮನವಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿ ಪ್ರವಾಸದಿಂದ ವಾಪಸ್ ಆಗಿದ್ದಾರೆ. ಜೂನ್ 28ರಂದು ಅವರು ಸಚಿವ ಸಂಪುಟ ಸಭೆಯನ್ನು ಕರೆದಿದ್ದು, ಅಕ್ಕಿ ಖರೀದಿ, ವಿದ್ಯುತ್ ಬಿಲ್ ಕಡಿಮೆ ಮಾಡುವುದು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆ ಇದೆ.











Click it and Unblock the Notifications