ಧಾರವಾಡ: ಸಶಕ್ತ-ಸಕಾಲ ಸರ್ಕಾರಿ ಆಡಳಿತ ಸೇವೆ ಪಡೆಯಲಿರುವ ಜಿಲ್ಲೆ ಜನ
ಧಾರವಾಡ, ಡಿಸೆಂಬರ್ 01: ಧಾರವಾಡ ಜಿಲ್ಲೆ ಜನತೆಗೆ ಸಿಹಿ ಸುದ್ದಿಯೊಂದು ಲಭಿಸಿದೆ. ಸರ್ಕಾರಿ ಕಚೇರಿಗಳಲ್ಲಿನ ಕೆಲಸಗಳು ಇನ್ಮುಂದೆ ಸರಾಗವಾಗಿ ನಡೆಯುವ ಸಾಧ್ಯತೆಗಳು ಇದೆ. ಆಡಳಿತದಲ್ಲಿ ಮಾದರಿ ಜಿಲ್ಲೆ ಆಗಿಸಿರುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರು, ಸಾರ್ವಜನಿಕರ ಬೇಡಿಕೆ, ಮನವಿಗಳಿಗೆ ತಕ್ಷಣವೇ ಸ್ಪಂದಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅದರಂತೆ ಅಧಿಕಾರಿಗಳು ಕಾರ್ಯ ನಿರ್ವಹಿಲಿದ್ದಾರೆ.
ಸಮರ್ಥ, ಸಮರ್ಪಕ ಆಡಳಿತ ನಿರ್ವಹಣೆ ಮಾಡಿದರೆ ಸಾಕಷ್ಟು ಸಮಸ್ಯೆಗಳು ಸ್ಥಳದಲ್ಲಿ ಪರಿಹಾರವಾಗುತ್ತವೆ. ಸಾರ್ವಜನಿಕರ ಬೇಡಿಕೆ, ಮನವಿಗಳಿಗೆ ಕಾನೂನಾತ್ಮಕವಾಗಿ ಸ್ಪಂದಿಸಿ, ತಕ್ಷಣ ಕ್ರಮವಹಿಸುವ ಮೂಲಕ ಆಡಳಿತದಲ್ಲಿ ಧಾರವಾಡ ಜಿಲ್ಲೆಯು ಇತರ ಜಿಲ್ಲೆಗಳಿಗೆ ಮಾದರಿ ಆಗುವಂತೆ ಮಾಡಬೇಕೆಂದು ಅವರು ಹೇಳಿದರು.

ಶುಕ್ರವಾರ ಬೆಳಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು. ಮಾಲ್ ಅಡಮಿನಿಷ್ಟ್ರೇಶನ್ ತೆಗೆದು ಹಾಕುವುದು ಲೋಕಾಯುಕ್ತ ಕಾಯ್ದೆಯ ಮುಖ್ಯ ಉದ್ದೇಶವಾಗಿದೆ.
ಕಚೇರಿಗೆ ಬರುವ ಸಾರ್ವಜನಿಕರಿಗೆ ಸಹನೆಯಿಂದ ಉತ್ತರಿಸಿ ಮತ್ತು ಸರಿಯಾದ ಮಾಹಿತಿ ನೀಡುವ ಮೂಲಕ ಆಡಳಿತದಲ್ಲಿ ಜನರ ವಿಶ್ವಾಸ ಗಳಿಸಬೇಕು. ಕಡತ ವಿಲೇವಾರಿಯಲ್ಲಿ ಅನಗತ್ಯ ವಿಳಂಬ ಮಾಡಿದರೆ, ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ಮಾದರಿ ಕಾರ್ಯ ನಿರ್ವಹಣೆಗೆ ಸೂಚನೆ
ಸರ್ಕಾರಿ ಕಚೇರಿಗಳನ್ನು ಇಲಾಖಾ ಅಥವಾ ಜಿಲ್ಲಾ ಮುಖ್ಯಸ್ಥರು ಸಶಕ್ತವಾಗಿ ನಿಭಾಯಿಸಬೇಕು. ಕೆಳ ಹಂತದ ಅಧಿಕಾರಿಗಳ ಕಾರ್ಯವೈಖರಿಗಳನ್ನು ಕಾಲಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡುವ ಮೂಲಕ ತಿಳಿದುಕೊಳ್ಳಬೇಕು. ಇತರರಿಗೆ ಮಾದರಿ ಆಗುವಂತೆ ಇಲಾಖೆಗಳನ್ನು ನಿರ್ವಹಣೆ ಮಾಡಬೇಕು.
ಪ್ರತಿ ಇಲಾಖೆಗಳಲ್ಲಿ ಆಂತರಿಕ ಜಾಗೃತ ದಳಗಳನ್ನು ರಚಿಸಿಕೊಳ್ಳಬೇಕು. ಈ ಮೂಲಕ ಸಿಬ್ಬಂದಿಗಳ ಕಾರ್ಯಕ್ಷಮತೆ ಪರಿಶೀಲಿಸಬೇಕು. ಉತ್ತಮ ರೀತಿಯಲ್ಲಿ ಕೆಲಸ ಮಾಡುವ ಅಧಿಕಾರಿ, ಸಿಬ್ಬಂದಿಗಳಿಗೆ ಪುರಸ್ಕರಿಸಬೇಕು ಮತ್ತು ಕೆಲಸದಲ್ಲಿ ಉದಾಸೀನತೆ, ನಿರ್ಲಕ್ಷ್ಯ ಮತ್ತು ನಿಧಾನಗತಿ ಅನುಸರಿಸುವವರಿಗೆ ಎಚ್ಚರಿಕೆ ನೀಡಬೇಕು. ಮತ್ತು ಅಗತ್ಯವಿದ್ದರೆ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಬೇಕೆಂದು ಲೋಕಾಯುಕ್ತರು ತಿಳಿಸಿದರು.
ಪಾಲಿಕೆ ಕಾರ್ಯಕ್ಕೆ ಶ್ಲಾಘನೆ
ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ ಅವರಿಂದ ಅವಳಿನಗರದಲ್ಲಿ ಕಸ ಸಂಗ್ರಹ, ಕಸ ವಿಂಗಡನೆ, ತ್ಯಾಜ್ಯ ನಿರ್ವಹಣೆ, ಸಾವಯವ ಗೊಬ್ಬರ ತಯಾರಿಕೆ ಕುರಿತು ಮಾಹಿತಿ ಪಡೆದು, ಮಹಾನಗರಪಾಲಿಕೆ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಭೂ ಮಾಪನ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕ ಮೋಹನ ಶಿವಣ್ಣನವರ ಅವರಿಂದ ಜಿಲ್ಲೆಯ ಎಲ್ಲ 1206 ಕೆರೆಗಳ ಸರ್ವೆ ಮಾಡಿರುವ ಕುರಿತು ಮಾಹಿತಿ ಪಡೆದರು. ಕೆರೆಗಳ ಸರ್ವೆ ಮತ್ತು ಒತ್ತುವರಿ ತೆರವು ಕಾರ್ಯ ತಿಳಿದ ಲೋಕಾಯುಕ್ತ ನ್ಯಾಯಮೂರ್ತಿಗಳು ಶ್ಲಾಘಿಸಿ, ಭೂದಾಖಲೆಗಳ ಇಲಾಖೆ ಅಧಿಕಾರಿಯನ್ನು ಅಭಿನಂದಿಸಿದರು.
ನೂರಾರು ಎಕರೆ ಒತ್ತುವರಿ: ಡಿಸಿ
ಸರ್ವೆ ಮಾಡಿರುವ 1206 ಕೆರೆಗಳಲ್ಲಿ, 156 ಕೆರೆಗಳಲ್ಲಿನ 283.38 ಎಕರೆ ಒತ್ತುವರಿ ಭೂಮಿ ಗುರುತಿಸಲಾಗಿದೆ. ಈ ಪೈಕಿ 84 ಕೆರೆಗಳ 115.21 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲಾಗಿದೆ. ಇಲ್ಲಿಯವರೆಗೆ 1050 ಕೆರೆಗಳು ಒತ್ತುವರಿ ಮುಕ್ತವಾಗಿವೆ. ಮತ್ತು ಇನ್ನು 72 ಕೆರೆಗಳ ಸುಮಾರು 168 ಎಕರೆ ಭೂಮಿ ಒತ್ತುವರಿ ತೆರವುಗೊಳಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಇದರಲ್ಲಿ ಸರಕಾರಿ ಕಟ್ಟಡ, ದೇವಸ್ಥಾನ, ಸಮುದಾಯಭವನ ಹಾಗೂ ಶಾಲಾ ಕಟ್ಟಡಗಳಿದ್ದು ಪರಿಶೀಲಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ವಿವರಿಸಿದರು.
ಸಭೆಯಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಮಹಾನಗರ ಪಾಲಿಕೆ, ನಗರಾಭಿವೃದ್ದಿ ಪ್ರಾಧಿಕಾರ, ನಿರಾವರಿ, ಅಬಕಾರಿ, ಪೊಲೀಸ್ ಇಲಾಖೆಗಳ ಕೆಲವು ದೂರು ಪ್ರಕರಣ ಕುರಿತು ವರದಿ ನೀಡುವಂತೆ ಹಗಡೆ ಅಧಿಕಾರಿಗಳಿಗೆ ಸೂಚಿಸಿದರು. ಸಭೆಯ ನಂತರ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್. ಪಾಟೀಲ ಅವರು ಸಾರ್ವಜನಿಕರು, ಸಂಘ, ಸಂಸ್ಥೆಗಳಿಂದ ದೂರು ಸ್ವೀಕರಿಸಿದರು.
ಮಹಾನಗರ ಪೊಲೀಸ ಆಯುಕ್ತರಾದ ರೇಣುಕಾ ಸುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೋನಲ್ ವೃಷ್ಣಿ, ಲೋಕಾಯುಕ್ತ ಕಾರ್ಯದರ್ಶಿ ಶ್ರೀನಿವಾಸ ಮತ್ತಿತರರು ಪಾಲ್ಗೊಂಡಿದ್ದರು.












Click it and Unblock the Notifications