ಕರ್ನಾಟಕ: ದೇಗುಲಗಳಲ್ಲಿ ಮೊಬೈಲ್ ಬಳಕೆ ನಿಷೇಧಿಸುವಂತೆ ಅರ್ಚಕರ ಒಕ್ಕೂಟದಿಂದ ಸರ್ಕಾರಕ್ಕೆ ಮನವಿ
ಮುಜರಾಯಿ ದೇಗುಲಗಳಲ್ಲಿ ಭಕ್ತರಿಗೆ ಮೊಬೈಲ್ ನಿಷೇಧ?: ಸಚಿವೆ ಶಶಿಕಲಾ ಜೊಲ್ಲೆಗೆ ಮನವಿ
ಬೆಂಗಳೂರು ಡಿಸೆಂಬರ್ 18: ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮೊಬೈಲ್ ಬಳಕೆಯನ್ನು ಸಂಪೂರ್ಣ ನಿಷೇಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆಯಾಗಿದೆ. ಸರ್ಕಾರ ಮನವಿ ಪುರಸ್ಕರಿಸಿದರೆ ಎಲ್ಲ ದೇವಸ್ಥಾನಗಳಲ್ಲಿ ಭಕ್ತರು ಮೊಬೈಲ್ ಬಳಕೆ ಕಡ್ಡಾಯವಾಗಿ ನಿಷೇಧಗೊಳ್ಳಲಿದೆ.
ದೇವಾಲಯಗಳಿಗೆ ಆಗಮಿಸುವ ಭಕ್ತರು ಮೊಬೈಲ್ ಬಳಕೆಯಿಂದ ಧಾರ್ಮಿಕ ಪೂಜಾ ಕೈಂಕರ್ಯಗಳಿಗೆ ತೊಂದರೆ ಆಗುತ್ತಿದೆ. ಈ ಕಾರಣದಿಂದ ದೇವಾಲಯಗಳಲ್ಲಿ ಮೊಬೈಲ್ ಬಳಕೆ ನಿಧಿಸುವಂತೆ 'ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ-ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ'ವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಈ ಒಕ್ಕೂಟವು ರಾಜ್ಯದಲ್ಲಿ ಕಳೆದ 50 ವರ್ಷದಿಂದ ಅರ್ಚಕರು, ಆಗಮಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿರುವ ಸಂಸ್ಥೆಯಾಗಿದೆ.
ಶನಿವಾರ ಬೆಂಗಳೂರಿನಲ್ಲಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಈ ವೇಳೆ ಒಕ್ಕೂಟದ ಮುಖ್ಯಸ್ಥರು, ಕೆಲ ದೀಕ್ಷಿತರು (ಪುರೋಹಿತರು) ಶನಿವಾರ ಹಿಂದೂ ಧಾರ್ಮಿಕ ಮತ್ತು ಧರ್ಮದಾಯ ದತ್ತಿ, ಹಜ್ ಮತ್ತು ವಕ್ಫ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ದೇವಸ್ಥಾನಗಳಲ್ಲಿ ಅರ್ಚಕರು ಪೂಜೆ ಮಾಡುವಾಗ ಮೊಬೈಲ್ ಬಳಕೆಯಿಂದ ಅನಗತ್ಯವಾಗಿ ಕಿರಿಕಿರಿಯಾಗುತ್ತದೆ. ದೇವಾಲಯಗಳಲ್ಲಿ ಅಶ್ಲೀಲ ರಿಂಗ್ ಟೋನ್‌ಗಳು ಕೇಳಿ ಬರುತ್ತವೆ. ಭಕ್ತರು ಧ್ಯಾನ ಮಾಡುವಾಗ ಕೆಲವರು ಹುಂಡಿ, ಪೂಜೆ, ಅರ್ಚನೆ, ದೇವರ ಮೂರ್ತಿ ಪೋಟೊ ತೆಗೆಯುತ್ತಾರೆ. ಇನ್ನು ಕೆಲವರು ದೇವರಿಗೆ ಬೆನ್ನು ಮಾಡಿ ಫೋಟೊ (ಸೆಲ್ಫಿ) ಕ್ಲಿಕ್ಕಿಸಿಕೊಳ್ಳುತ್ತಾರೆ.
ದೇವಾಲಯ ವ್ಯವಸ್ಥೆ ಮೇಲೆ ತಪ್ಪು ಭಾವನೆ?
ಅರ್ಚಕರು ಅರ್ಚನೆ ಹೇಳುವಾಗ ಮೊಬೈಲ್ ಹಾಡುಗಳನ್ನು ಹಾಕುತ್ತಾರೆ. ಕೆಲವೆಡೆ ಹೆಣ್ಣುಮಕ್ಕಳ ಫೋಟೊ ತೆಗೆಯುತ್ತಾರೆ. ಇದರಿಂದ ಪೂಜೆಯ ಏಕಾಗ್ರತೆ ತಪ್ಪುತ್ತದೆ. ಅಲ್ಲದೇ ಇತರ ಭಕ್ತಾಧಿಗಳ ಧ್ಯಾನ, ಪೂಜೆಗಳಿಗೆ ಧಕ್ಕೆ ಉಂಟಾಗುತ್ತದೆ. ಈ ಸಂಬಂಧ ದೇವಸ್ಥಾನಗಳ ವ್ಯವಸ್ಥೆಯ ಮೇಲೆಯೆ ತಪ್ಪು ಭಾವನೆ ಮತ್ತು ತಪ್ಪು ಕಲ್ಪನೆ ಮೂಡುವ ಸಾಧ್ಯತೆ ಇರುತ್ತದೆ.

ಆದ್ದರಿಂದ ದೇವಾಲಯಗಳಲ್ಲಿ ಪೂಜೆ, ಹೋಮ, ಹವನ, ಅರ್ಚನೆ ಸೇರಿದಂತೆ ಎಲ್ಲ ಬಗೆಯ ಧಾರ್ಮಿಕ ಕೈಂಕರ್ಯಗಳು ಸುಗಮವಾಗಿ ನಡೆಯಬೇಕು. ಅದಕ್ಕಾಗಿ ದೇವಸ್ಥಾನದ ಒಳಗೆ ಮೊಬೈಲ್ ಬಳಕೆ ನಿಷೇಧಿಸಬೇಕು. ದೇವಾಲಯ ಪ್ರವೇಶಿಸುವ ಮುನ್ನ ನಿಗದಿತ ಜಾಗದಲ್ಲಿ ಮೊಬೈಲ್ ಇಟ್ಟು ಬರಲು ಅವಕಾಶ ನೀಡಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಆದೇಶ ನೀಡುವಂತೆ ಒಕ್ಕೂಟದ ಸದಸದ್ಯರು ಮನವಿ ಮಾಡಿದರು.












Click it and Unblock the Notifications