ಕೇಕ್‌ನಲ್ಲೇ ಹಾಸಿಗೆ, ದಿಂಬು, ಬೆಡ್‌ಶೀಟ್, ರೊಮ್ಯಾನ್ಸ್! ರವಿಚಂದ್ರನ್ ಶಾಂತಿಕ್ರಾಂತಿ ಸಿನಿಮಾದ ಇಂಟರೆಸ್ಟಿಂಗ್ ಸ್ಟೋರಿ
'ಜೂಹಿ ಚಾವ್ಲಾಗೆ, ಜಂಪ್ ಮಾಡ್ಬಿಡಮ್ಮಾ ಬೆಡ್ ಮೇಲೆ ಅಂದೆ. ಏನೂ ಗೊತ್ತಿರದ ಆಕೆ ಜಂಪ್ ಮಾಡಿದ್ರು. ಬಿದ್ದಾಕ್ಷಣ ಫುಲ್ ಶಾಕ್!' ಶಾಂತಿಕ್ರಾಂತಿ ಸಿನಿಮಾದ ಒಂದು ಸೀನ್ ಬಗ್ಗೆ ರವಿಚಂದ್ರನ್ ಹೇಳಿರೋ ಇಂಟರೆಸ್ಟಿಂಗ್ ಸಂಗತಿ ಇದು. ಕೇಕ್‌ನಿಂದಲೇ ಇಡೀ ಬೆಡ್, ದಿಂಬು, ಬೆಡ್ ಸ್ಪ್ರೆಡ್, ಬೆಡ್‌ಶೀಟ್ ಎಲ್ಲವನ್ನೂ ಮಾಡಿ ಅಲ್ಲೇ ರೊಮ್ಯಾಂಟಿಕ್ ಸೀನ್ ಮಾಡಿರೋ ಕ್ರೇಜಿಸ್ಟಾರ್ ಕ್ರೇಜಿ ಐಡಿಯಾದ ಕಥೆ ಇದು.
ದೇಶದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಶಾಂತಿ ಕ್ರಾಂತಿ ಮತ್ತೆ ಥಿಯೇಟರ್‌ಗೆ ಬರ್ತಿದೆ. ಆಧುನಿಕ ಕನ್ನಡ ಚಿತ್ರರಂಗದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಹೆಗ್ಗಳಿಕೆ ಈ ಸಿನಿಮಾದ್ದು. ಈ ಬಗ್ಗೆ ರವಿಚಂದ್ರನ್ ಮಗ ವಿಕ್ರಂ ರವಿಚಂದ್ರನ್ ಅವರೇ ಮಾಹಿತಿ ನೀಡಿದ್ದಾರೆ.

ಕನ್ನಡದ ಮೊಟ್ಟಮೊದಲ ಪ್ಯಾನ್ ಇಂಡಿಯಾ ಸಿನಿಮಾ ಎಂಬ ಹೆಗ್ಗಳಿಕೆ 1959ರಲ್ಲಿ ಬಿಡುಗಡೆಯಾದ ಡಾ. ರಾಜ್‌ಕುಮಾರ್ ಅಭಿನಯದ ಮಹಿಷಾಸುರ ಮರ್ದಿನಿ ಚಿತ್ರಕ್ಕೆ ಸಲ್ಲುತ್ತದೆ. ಇದು ಏಳು ಭಾಷೆಗಳಿಗೆ ಡಬ್ ಆಗಿ ಬಿಡುಗಡೆಯಾಗಿತ್ತು. ಹಾಗೆಯೇ ವಿ. ರವಿಚಂದ್ರನ್ ಅವರ 1991ರ ಶಾಂತಿ ಕ್ರಾಂತಿ ಚಿತ್ರವನ್ನು ಆಧುನಿಕ ರೀತಿಯಲ್ಲಿ ಏಕಕಾಲಕ್ಕೆ ಹಲವು ಭಾಷೆಗಳಲ್ಲಿ ನಿರ್ಮಿಸಿದ ಮೊದಲ ಪ್ಯಾನ್ ಇಂಡಿಯಾ ಪ್ರಯತ್ನವೆಂದು ಪರಿಗಣಿಸಲಾಗುತ್ತದೆ. ಇವತ್ತು ಪ್ಯಾನ್ ಇಂಡಿಯಾ ಸಿನಿಮಾ ಅನ್ನೋದು ಬಹಳ ನಾರ್ಮಲ್ ಆಗಿದೆ. ಆದರೆ ಮೂವತ್ತೈದು ವರ್ಷಗಳ ಹಿಂದೆಯೇ ಪ್ಯಾನ್ ಇಂಡಿಯಾ ಸಿನಿಮಾಗಳ ಕಲ್ಪನೆ ಕ್ರೇಜಿಸ್ಟಾರ್ ರವಿಚಂದ್ರನ್ ತಲೆಗೆ ಬಂದಿತ್ತು. ಅವರು ಅದನ್ನು ಶಾಂತಿಕ್ರಾಂತಿ ಮೂಲಕ ವಿಶ್ವಕ್ಕೆ ತೋರಿಸಿಕೊಟ್ಟರು. ವಿಶೇಷ ಅಂದರೆ ಈ ಸಿನಿಮಾದಲ್ಲಿ ದಕ್ಷಿಣ ಭಾರತೀಯ ಚಿತ್ರರಂಗದ ದಿಗ್ಗಜರಾದ ರಜನಿಕಾಂತ್, ನಾಗಾರ್ಜುನ್ ಅವರೂ ನಟಿಸಿದ್ದಾರೆ.
ಶಾಂತಿ ಕ್ರಾಂತಿ ರಿಕ್ರಿಯೇಟ್ ಆಗುತ್ತಿದೆಯಾ?
ಹೌದು ಅನ್ನುತ್ತವೆ ಮೂಲಗಳು. ರವಿಚಂದ್ರನ್ ಮಗ ವಿಕ್ರಂ ರವಿಚಂದ್ರನ್ ಅವರೇ ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ರವಿಚಂದ್ರನ್ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಜನ ಈ ಸಿನಿಮಾವನ್ನು ರೀರಿಲೀಸ್ ಮಾಡುವಂತೆ ಒತ್ತಡ ಹಾಕುತ್ತಿದ್ದರು. ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿ ನಿಧಾನಕ್ಕೆ ಜನರ ಈ ಕ್ರೇಜ್ ಕಡಿಮೆ ಆಗಿ, ಪ್ಯಾನ್ ಇಂಡಿಯಾ ಅಂತ ಇದ್ದಬದ್ದ ಸಿನಿಮಾಗಳನ್ನೆಲ್ಲ ಬೇರೆ ಬೇರೆ ಭಾಷೆಗಳಲ್ಲಿ ಹೊರತಂದು ಆ ಸಿನಿಮಾಗಳು ತೋಪೆದ್ದು ನಿರ್ಮಾಪಕ ಚಾಪೆ ಸುತ್ಕೊಂಡು ಹೋಗೋ ಟೈಮಲ್ಲೇ ದೇಶದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಅನ್ನೋ ಹೆಗ್ಗಳಿಕೆ ಪಡೆದುಕೊಂಡಿರುವ ಶಾಂತಿ ಕ್ರಾಂತಿ ಮರು ಬಿಡುಗಡೆ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಕೇಕ್ ಸೀನ್‌ನ ಮತ್ತೆ ನೋಡಲು ಬಯಸಿದ ಜನ
ಶಾಂತಿಕ್ರಾಂತಿ ಸಿನಿಮಾದಲ್ಲಿ ಕೇಕ್ ಅನ್ನೇ ಹಾಸಿಗೆ ಡಿಸೈನ್‌ನಲ್ಲಿ ರೆಡಿ ಮಾಡಿರುವ ಸೀನ್ ಇದೆ. ನಾಯಕಿಗೆ ಸರ್ಪ್ರೈಸ್ ಕೊಡಬೇಕು ಅಂತ ನಾಯಕ ಇಡೀ ಹಾಸಿಗೆಯ ಡಿಸೈನ್‌ನಲ್ಲಿ ಕೇಕ್ ರೆಡಿ ಮಾಡಿಸಿರುತ್ತಾನೆ. ಇದರ ಬಗ್ಗೆ ಏನೂ ಗೊತ್ತಿಲ್ಲದ ನಾಯಕಿ ಹಾಸಿಗೆ ಅಂದುಕೊಂಡು ಅದರ ಮೇಲೆ ಬೀಳ್ತಾಳೆ. ಆಮೇಲಿನದು ನಾವು ಊಹಿಸಲೂ ಆಗದಂಥಾ ರೊಮ್ಯಾಂಟಿಕ್ ಸೀನ್. ಈ ಬಗ್ಗೆ ರವಿಚಂದ್ರನ್ ಅವರೇ ಒಂದು ಕಡೆ ಸೊಗಸಾಗಿ ಮಾತನಾಡಿದ್ದಾರೆ. 'ಅದೊಂದು ಹುಚ್ಚು ಕಲ್ಪನೆ. ಆವರೆಗೆ ಯಾರೂ ಮಾಡಿರಬಾರದು. ಇಡೀ ಬೆಡ್ ಕೇಕ್ ಆಗಿರಬೇಕು, ದಿಂಬೂ ಕೇಕ್ ಆಗಿರಬೇಕು, ಬೆಡ್ ಸ್ಪ್ರೆಡ್, ಬೆಡ್‌ಶೀಟ್ ಎಲ್ಲವೂ ಕೇಕ್ ಆಗಿರಬೇಕು. ಆ ಥರ ಒಂದು ಬರ್ತ್ ಡೇ ಆಚರಿಸಬೇಕು, ಅವನು ಪ್ರೀತಿಸಿದ ಹುಡುಗಿಗೆ ಅವನು ಹಾಗೆಲ್ಲ ಮಾಡಿರುತ್ತಾನೆ. ಈ ಐಡಿಯಾ ಇವತ್ತುವರೆಗೆ ಯಾರೂ ಬಳಸೂ ಇಲ್ಲ. ಹಿಂದೆಯೂ ಬಳಸಿರಲಿಲ್ಲ.' ಅಂತಾರೆ.
ಜೂಹಿ ಚಾವ್ಲಾಗೂ ಗೊತ್ತಿರಲಿಲ್ಲವಂತೆ
'ಆ ಸೀನ್ ಮಾಡುವವರೆಗೆ ಜೂಹಿ ಚಾವ್ಲಾ ಅವರಿಗೆ ಅದು ಕೇಕ್‌ನಿಂದ ಮಾಡಿರುವ ಬೆಡ್ ಅನ್ನೋದು ಗೊತ್ತಿರಲಿಲ್ಲ. ಎಲ್ಲ ಸೆಟ್ ಆದಮೇಲೆ ಅವರನ್ನು ಕರೆಸಿ, 'ಜಂಪ್ ಮಾಡ್ಬಿಡಮ್ಮಾ ಬೆಡ್ ಮೇಲೆ' ಅಂದೆ. ಜಂಪ್ ಮಾಡಿದ್ಮೇಲೆ ಅವಳಿಗೆ ಗೊತ್ತಾಯ್ತು ಅದು ಕೇಕ್ ಅಂತ. ಅವಳ ಮುಖದಲ್ಲಿರುವ ಆ ಎಕ್ಸ್‌ಪ್ರೆಶನ್ ನೋಡಿ. ಅದು ರಿಯಲ್ ಆಗಿ ಬಂದಿರುವ ಎಕ್ಸ್‌ಪ್ರೆಶನ್. ' ಅನ್ನೋದು ರವಿಚಂದ್ರನ್ ಮಾತು.
ಹಾಡಿ ಹೊಗಳಿದ ರಜನಿಕಾಂತ್
ಹೀಗೂ ಐಡಿಯಾ ಬರಬಹುದು ಅನ್ನುವ ಕಲ್ಪನೆ ರಜನಿಕಾಂತ್ ಅವರಿಗೂ ಇರಲಿಲ್ಲವಂತೆ. 'ಏನ್ರೀ ರವಿಚಂದ್ರನ್, ಏನ್ರೀ ಐಡಿಯಾ ಇದೆಲ್ಲ..ಈ ಥರ ಎಲ್ಲ ಕೇಕ್‌ನಲ್ಲೆಲ್ಲ ಹಾಸಿಗೆ ಮಾಡೋದಾ.. ನಾನಂತೂ ಕಲ್ಪನೆಯೂ ಮಾಡಿಕೊಂಡಿರಲಿಲ್ಲ ಅಂದಿದ್ದರು. ರಜನಿ ಅವರ ಇಮೇಜೇ ಬೇರೆ ಇತ್ತು. ಅವರ ಇಮೇಜ್‌ಗೆ ಇಂಥಾ ಸೀನ್‌ಗಳೆಲ್ಲ ಬರೋದು ಸಾಧ್ಯವೇ ಇರಲಿಲ್ಲ. ನನಗೆ ಕ್ರೇಜಿ ಮಾಸ್ಟರ್ ಅನ್ನೋ ಬಿರುದನ್ನು ಜನ ಕೊಟ್ಟಿದ್ದಾರೆ. ಆ ಬಿರುದಿಗೆ ನ್ಯಾಯ ಸಲ್ಲಿಸಲು ನಾನು ಹಾಗೆ ಮಾಡ್ಕೊಂಡು ಬಂದ್ನೋ ಅಥವಾ ಆ ನನ್ನ ಈ ಕ್ರೇಜಿ ಮೈಂಡ್‌ಸೆಟ್‌ನಿಂದಲೇ ಅಂಥಾ ಹೆಸರು ಬಂತೋ ಗೊತ್ತಿಲ್ಲ' ಅನ್ನೋದು ಕ್ರೇಜಿ ಸ್ಟಾರ್ ರವಿಚಂದ್ರನ್ ಆತ್ಮಾವಲೋಕನ.


Click it and Unblock the Notifications
