ಗೆಳೆಯ ಅಣ್ಣಾಮಲೈಗೆ ಭಾವುಕ ಪತ್ರ ಬರೆದ ಸಿಂಗಂ ರವಿ ಚನ್ನಣ್ಣನವರ್
ಬೆಂಗಳೂರು, ಜೂನ್ 08: ಇತ್ತೀಚೆಗಷ್ಟೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಖ್ಯಾತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಸಿಂಗಂ ಖ್ಯಾತಿಯ ಮತ್ತೊಬ್ಬ ಖಡಕ್ ಅಧಿಕಾರಿ ರವಿ ಚನ್ನಣ್ಣನವರ್ ಅವರು ಭಾವುಕ ಪತ್ರ ಬರೆದಿದ್ದಾರೆ.
ರವಿ ಚನ್ನಣ್ಣನವರ್ ಹಾಗೂ ಅಣ್ಣಾಮಲೈ ಅವರು ಪರಸ್ಪರ ಆತ್ಮೀಯ ಗೆಳೆಯರು ಆಗಿದ್ದಾರೆ. ಇಂದು ಅಣ್ಣಾಮಲೈ ಅವರ ಹುಟ್ಟುಹಬ್ಬ ಹಾಗಾಗಿ ರವಿ ಚನ್ನಣ್ಣನವರ್ ಅವರು ಗೆಳೆಯನಿಗೆ ಭಾವುಕ ಪತ್ರ ಬರೆದಿದ್ದಾರೆ.
ರವಿ ಚನ್ನಣ್ಣನವರ್ ಅವರು ಎರಡು ಪುಟಗಳ ಸುಧೀರ್ಘ ಪತ್ರವನ್ನು ಬರೆದಿದ್ದು, ಅಣ್ಣಾಮಲೈ ಅವರೊಂದಿಗೆ ಕಳೆದ ದಿನಗಳು, ಅಣ್ಣಾಮಲೈ ಅವರ ಗಟ್ಟಿ ವ್ಯಕ್ತಿತ್ವ, ಅವರ ಜನಪರ ಮನಸ್ಸು, ಇಲಾಖೆಯ ಬಗ್ಗೆ ಗೌರವ, ಕೆಳ ಸ್ತರದ ನೌಕರರ ಬಗೆಗಿನ ಮಮತೆ ಎಲ್ಲವನ್ನೂ ಉಲ್ಲೇಖಿಸಿ ಹೊಗಳಿದ್ದಾರೆ.
ಇಬ್ಬರೂ ಒಟ್ಟಿಗೆ ಕಳೆದ ದಿನಗಳನ್ನೂ ಮೆಲುಕು ಹಾಕಿರುವ ರವಿ ಚನ್ನಣ್ಣನವರ್ ಅವರು, 'ನನ್ನಂಥವರು ಎಷ್ಟೋ ಮಂದಿ ಸೇರಿ ಒಬ್ಬ ಅಣ್ಣಾಮಲೈ ಆಗುತ್ತಾರೆ' ಎಂದು ಮನಃಪೂರ್ವಕವಾಗಿ ಹೊಗಳಿದ್ದಾರೆ. ಅಣ್ಣಾಮಲೈ ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಸತತವಾಗಿ ಚಿಂತಿಸಿದ್ದಾಗಿ ರವಿ ಚೆನ್ನಣ್ಣನವರ್ ಅವರು ಹೇಳಿದ್ದಾರೆ.

ಕನ್ನಡಿಗರ ಉದಾರ ಮನಸ್ಸಿನ ಬಗ್ಗೆ ಉಲ್ಲೇಖ
ಕನ್ನಡಿಗರ ಉದಾರ ಮನಸ್ಸಿನ ಬಗೆಗೂ ಉಲ್ಲೇಖಿಸಿರುವ ರವಿ ಚನ್ನಣ್ಣನವರ್ ಅವರು, ನೀನು ಮಾಡಿರುವ ಸೇವೆಯನ್ನು ಇಡೀಯ ಕರ್ನಾಟಕವೇ ಮೆಚ್ಚಿಕೊಂಡಿದೆ. ಪೊಲೀಸ್ ಅಧಿಕಾರಿಗಳು ನಿರೀಕ್ಷೆಯ ಅರ್ಧದಷ್ಟು ಕೆಲಸ ಮಾಡಿದರೂ ಅವರನ್ನು ದೇವರಂತೆ ಹೊತ್ತು, ಮೆರೆಸುತ್ತಾರೆ, ನೀನು ಪೂರ್ಣ ಪ್ರಮಾಣದ ಕರ್ತವ್ಯ ಮೆರೆದಿದ್ದೀಯಾ, ನಿನ್ನನ್ನು ನಮ್ಮ ಜನ ಹೃದಯದಲ್ಲಿಟ್ಟು ಪೂಜೆ ಮಾಡಿದ್ದಾರೆ ಎಂದು ರವಿ ಚನ್ನಣ್ಣನವರ್ ಹೇಳಿದ್ದಾರೆ.

'ನಿನ್ನೊಂದಿಗೆ ಕೆಲಸ ಮಾಡಲು ಬಯಸಿದ್ದೆ'
ಅಣ್ಣಾಮಲೈ ಅವರೊಂದಿಗೆ ಕೆಲಸ ಮಾಡಲು ಬಯಸಿದ್ದಾಗಿಯೂ ಸಹ ರವಿ ಚನ್ನಣ್ಣನವರ್ ಅವರು ಪತ್ರದಲ್ಲಿ ಬರೆದಿದ್ದಾರೆ. ರವಿ ಚನ್ನಣ್ಣನವರ್ ಅವರು ಹಾಸನದಲ್ಲಿ ಎಸ್‌ಪಿ ಆಗಿದ್ದಾಗ, ಎಎಸ್‌ಪಿ ಆಗಿ ಕೆಲಸ ಮಾಡಲು ಅಣ್ಣಾಮಲೈ ಅವರು ಬೇಕೆಂದು ಕೇಳಿದ್ದಾಗಿ ರವಿ ಚನ್ನಣ್ಣನವರ್ ಹೇಳಿದ್ದಾರೆ. ಬೆಂಗಳೂರಿಗೆ ವರ್ಗವಾಗಿ ಬಂದ ನಂತರ ಹಲವು ವಿಷಯಗಳಲ್ಲಿ ಪರಸ್ಪರ ಸಂವಾದ, ಚರ್ಚೆ, ಸಮಾಲೋಚನೆ ಮಾಡಿದ್ದು ನೆನಪಿನಲ್ಲಿ ಉಳಿಯುತ್ತದೆ ಎಂದು ಚನ್ನಣ್ಣನವರ್ ಹೇಳಿದ್ದಾರೆ.

'ರಾಜೀನಾಮೆ ಹಿಂಪಡೆಯಲು ಜನ ಒತ್ತಾಯಿಸುತ್ತಿದ್ದಾರೆ'
ನಿನ್ನ ನಿಸ್ವಾರ್ಥ ಸೇವೆಯನ್ನು ನೋಡಿರುವ ಜನ ನಿನ್ನ ರಾಜೀನಾಮೆಯನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ರಾಜೀನಾಮೆ ಹಿಂಪಡೆಯಲು ಒತ್ತಡ ಹೇರುತ್ತಿದ್ದಾರೆ. ರಾಜೀನಾಮೆ ಬಗ್ಗೆ ನೀನು ನೀಡಿದ ಕಾರಣವನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಪೊಲೀಸ್ ಸೇವೆಯಲ್ಲಿ ಮುಂದುವರೆಯಬೇಕೆಂದು ಒತ್ತಾಯಿಸುತ್ತಿದ್ದಾರೆ, ನಿನ್ನ ಮನೋಧರ್ಮ, ಪೀಡಿಸುತ್ತಿರುವ ಜ್ವಲಂತ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಂಬಲದಿಂದ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದೀಯಾ ಎಂಬುದು ನನ್ನ ಭಾವನೆ ಎಂದು ರವಿ ಚೆನ್ನಣ್ಣನವರ್ ಅವರು ಬರೆದಿದ್ದಾರೆ.

'ಮಹೋನ್ನತ ಕಾರ್ಯಕ್ಕೆ ನೀನು ತಯಾರಾಗುತ್ತಿರುವೆ'
ಅಣ್ಣಾಮಲೈ ಅವರ ಮುಂದಿನ ಭವಿಷ್ಯಕ್ಕೆ ಹಾರೈಸಿರುವ ರವಿ ಚನ್ನಣ್ಣನವರ್, ಮಹೋನ್ನತ ಕಾರ್ಯವೊಂದಕ್ಕೆ ನೀನು ಸನ್ನದ್ಧನಾಗುತ್ತಿದ್ದೀಯಾ ಎಂಬುದು ನನ್ನ ನಂಬಿಕೆ, ನಿನ್ನ ಹಿಂದೆ ಪ್ರೀತಿಯ ದೊಡ್ಡ ಪಡೆಯೇ ಇದೆ. ನೀನು ಮುಂದೆ ಸಾಗು ನಿನ್ನೊಂದಿಗೆ ಬಹಳಷ್ಟು ಹೆಜ್ಜೆ ಹಾಕುತ್ತಾರೆ, ಕರ್ನಾಟಕ ಪೊಲೀಸ್ ಇಲಾಖೆ ನಿನ್ನನ್ನು ಸದಾ ಸ್ಮರಿಸುತ್ತದೆ ಎಂದು ರವಿ ಚನ್ನಣ್ಣನವರ್ ಅವರು ಹೇಳಿದ್ದಾರೆ.

'ನಿನ್ನ ಹುಟ್ಟು, ಜೀವನ ಚರಿತ್ರೆಯಾಗಲಿ ದೋಸ್ತ್'
ಅಂತಿಮವಾಗಿ ಎಲ್ಲವೂ ಭಗವಂತನ ಇಚ್ಛೆ, ನಿನಗೆ ನಿನ್ನ ಕಾರ್ಯಕ್ಕೆ ಬೆನ್ನೆಲುಬಾಗಿ ನಿಂತ ನಿನ್ನ ಕುಟುಂಬಕ್ಕೆ ಶುಭವಾಗಲಿ. ಈ ನಿನ್ನ ಗಟ್ಟಿ ನಿರ್ಧಾರದ ಹಿಂದೆ ನಿಂತ ನಿನ್ನ ಎಲ್ಲ ಹಿತೈಶಿಗಳಿಗೆ, ಶ್ರೇಯೋಭಿಲಾಷಿಗಳಿಗೆ ನನ್ನ ನಮಸ್ಕಾರ, ನಿನ್ನ ಹುಟ್ಟು ಮತ್ತು ಜೀವನ ಭಾರತ ಇತಿಹಾಸದಲ್ಲಿ ಚರಿತ್ರೆಯಾಗಲೆಂದು ಹಾರೈಸುತ್ತೇನೆ 'ಹ್ಯಾಪಿ ಬರ್ತ್ ಡೇ ದೋಸ್ತ್' ಎಂದು ಪತ್ರ ಮುಗಿಸಿದ್ದಾರೆ ರವಿ ಚೆನ್ನಣ್ಣನವರ್.












Click it and Unblock the Notifications