ಇಷ್ಟೇಲ್ಲಾ ದ್ರೋಹ ಬಗೆದ ಬಿಜೆಪಿಗೆ 40 ಸೀಟು ಬರಲ್ಲ; ಮೋದಿ, ಬೊಮ್ಮಾಯಿಗೆ 9 ಪ್ರಶ್ನೆಗಳನ್ನ ಕೇಳಿ ಸವಾಲ್ ಹಾಕಿದ ಸುರ್ಜೆವಾಲಾ
ಮೈಸೂರು,ಏಪ್ರಿಲ್26: ಮೀಸಲಾತಿ ವಿಚಾರದಲ್ಲಿ ಬಿಜೆಪಿಯ ಮಹಾ ಮೋಸ ಮತ್ತೊಮ್ಮೆ ಬಯಲಾಗಿದೆ. ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶ ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ್ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಬಗೆದಿದೆ, ಅಪಮಾನ ಮಾಡಿದೆ. ಬೊಮ್ಮಾಯಿ ಸರ್ಕಾರ 2002 ರಲ್ಲಿ ಜಾರಿಗೆ ತಂದಿದ್ದ ಮೀಸಲಾತಿಯನ್ನು ಮರು ಜಾರಿ ಮಾಡುವುದಾಗಿ ಕೋರ್ಟ್ ನಲ್ಲಿ ತಿಳಿಸಿದೆ. ಆಮೂಲಕ ಒಕ್ಕಲಿಗರು 3A ಹಾಗೂ ಲಿಂಗಾಯತರು 3B ವರ್ಗೀಕರಣದಲ್ಲಿ ಮುಂದುವರಿಯಲಿದ್ದಾರೆ ಎಂದರು.

ಬೊಮ್ಮಾಯಿ ಸರ್ಕಾರ ಆದೇಶದಂತೆ ಹೆಚ್ಚುವರಿ 2% ಮೀಸಲಾತಿ ಸಿಗುವುದಿಲ್ಲ. ಬೊಮ್ಮಾಯಿ ಸರ್ಕಾರ ಏ.25, 2023ರಂದು ಸುಪ್ರೀಂ ಕೋರ್ಟ್ ನಲ್ಲಿ ಸಾಲಿಸಿಟರ್ ಜನರಲ್ ಮೂಲಕ, ಮಾರ್ಚ್ 27, 2023ರಂದು ತಾನು ಹೊರಡಿಸಿದ್ದ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಾನೇ ತಡೆ ಹಿಡಿದಿದ್ದು, ಕ್ಷಮಿಸಲಾರದ ಪಾಪ ಎಸಗಿದೆ.ಆಮೂಲಕ ಕಾಂಗ್ರೆಸ್ ಪಕ್ಷ ಹೇಳಿದ್ದ ಮಾತು ನಿಜವಾಗಿದೆ. ಬೊಮ್ಮಾಯಿ ಹಾಗೂ ಮೋದಿ ನೇತೃತ್ವದ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ಈ ಸಮುದಾಯಗಳಿಗೆ ಡಬಲ್ ದ್ರೋಹ ಬಗೆದಿವೆ.
ದ್ರೋಹ ಬಗೆವ ಬಿಜೆಪಿ ಸರ್ಕಾರದ ಮೂಲ ಉದ್ದೇಶ, ಚುನಾವಣೆ ಸಮಯದಲ್ಲಿ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಈ ಸಮುದಾಯಗಳಿಗೆ ಲಾಲಿಪಾಪ್ ಕೊಟ್ಟು ಯಾಮಾರಿಸುವ ಪ್ರಯತ್ನ ನಡೆದಿದೆ. ಅಂತಿಮವಾಗಿ ಈ ಮೀಸಲಾತಿ ಹೆಚ್ಚಳ ವಿಚಾರ ಕಾನೂನು ಕಟಕಟೆಯಲ್ಲಿ ನಿಂತು ಯಾರಿಗೂ ಮೀಸಲಾತಿ ಸಿಗಬಾರದು, ಮೀಸಲಾತಿ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವ ಷಡ್ಯಂತ್ರ ರೂಪಿಸಿದೆ ಎಂದು ಆರೋಪಿಸಿದರು.

ಮೋದಿ - ಬೊಮ್ಮಾಯಿಗೆ ಕೇಳಿದ 9 ಪ್ರಶ್ನೆಗಳು ಇಲ್ಲಿವೆ.
1. ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳಿಗೆ ಸುಳ್ಳಿನ ಮೀಸಲಾತಿ ಘೋಷಿಸಿ ಮೋಸ ಮಾಡಿದ್ದು ಯಾಕೆ?
2. ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥಿಸಿಕೊಳ್ಳುತ್ತಿಲ್ಲ ಯಾಕೆ?
3. ಮೀಸಲಾತಿ ಪ್ರಕರಣದಲ್ಲಿ ಮೋದಿ ಹಾಗೂ ಬೊಮ್ಮಾಯಿ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಿಲ್ಲ ಯಾಕೆ?
4. ಮಾರ್ಚ್ 14, 2023ರಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳವನ್ನು ನಿರಾಕರಿಸಿದ್ದು ಯಾಕೆ?
5. ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮೀಸಲಾತಿ ಹೆಚ್ಚಳ ಕಾನೂನನ್ನು ಸಂವಿಧಾನದ 9ನೇ ಶೆಡ್ಯೂಲ್ ನಲ್ಲಿ ಸೇರಿಸಲಿಲ್ಲ ಏಕೆ?
6. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳು ಹಾಗೂ ಇತರ ಸಮುದಾಯಗಳು ಮೀಸಲಾತಿ ಹೆಚ್ಚಳ ಬೇಡಿಕೆ ಇಟ್ಟಿದ್ದು, ಇವರ ಆಶೋತ್ತರ ಈಡೇರಿಸಲು 50% ಇರುವ ಮೀಸಲಾತಿ ಮಿತಿ ವಿಸ್ತರಣೆ ಮಾಡಲು ನಿರಾಕರಿಸುತ್ತಿರುವುದು ಏಕೆ?
7. ಚುನಾವಣೆ ಸಮಯದಲ್ಲಿ ಸಮಾಜ ಒಡೆದು ರಾಜಕೀಯ ಲಾಭಕ್ಕಾಗಿ ಅಲ್ಪಸಂಖ್ಯಾತರನ್ನು ಗುರಿ ಮಾಡುತ್ತಿರುವುದೇಕೆ?
8. ಮೀಸಲಾತಿ ಹೆಚ್ಚಳ ನಿರ್ಧಾರವನ್ನು ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ಮೂಲಕ ತಡೆ ನೀಡಿರುವುದೇಕೆ?
9. ಪರಿಶಿಷ್ಟ ಜಾತಿ ಹಾಗೂ ಪಂಗಡಗಳು, ಲಿಂಗಾಯತರು, ಒಕ್ಕಲಿಗರು, ಹಿಂದುಳಿದ ವರ್ಗಗಳಿಗೆ ಮೀಸಲಾತಿ ವಿಚಾರದಲ್ಲಿ ಆಗಿರುವ ಮೋಸಕ್ಕೆ ಪ್ರಧಾನಿ ಮೋದಿ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳುವರೆ?












Click it and Unblock the Notifications