ಯಡಿಯೂರಪ್ಪ ಅವರ ನಿವಾಸದ ಮೇಲಿನ ದಾಳಿ ಖಂಡನೀಯ: ರಣದೀಪ್ ಸಿಂಗ್ ಸುರ್ಜೆವಾಲ
ಬೆಂಗಳೂರು, ಮಾರ್ಚ್27: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಿವಾಸದ ಮೇಲೆ ದಾಳಿ ನಡೆದಿರುವುದು ಖಂಡನೀಯ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.
ಈ ಕುರಿತು ಬೆಂಗಳೂರಿನಲ್ಲಿ ಸೋಮವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾರ ನಿವಾಸದ ಮೇಲೂ ದಾಳಿ ನಡೆಯಬಾರದು. ಬಿಜೆಪಿಯ ದ್ವೇಷ ಹಾಗೂ ವಿಭಜನೆಯ ರಾಜಕೀಯ ಪರಿಶಿಷ್ಟ ಜಾತಿ ಹಾಗೂ ಸಮುದಾಯಗಳಲ್ಲಿ ಅಶಾಂತಿಗೆ ಕಾರಣವಾಗಿದೆ. ಬಿಜೆಪಿ ಹಾಗೂ ಬೊಮ್ಮಾಯಿ ಅವರು ಕರ್ನಾಟಕ ರಾಜ್ಯದ ಆಧುನಿಕ ಶಕುನಿಯಾಗಿದ್ದಾರೆ. ಮಹಾಭಾರತದ ಕಾಲದಲ್ಲಿ ಶಕುನಿ ವಿಭಜನೆ ಮಾಡಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತಿದ್ದ. ಹೀಗಾಗಿ ಬೊಮ್ಮಾಯಿ ಅವರು ಆಧುನಿಕ ಶಕುನಿಯಾಗಿದ್ದಾರೆ. ಇವರು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳನ್ನು ವಿಭಜನೆ ಮಾಡುತ್ತಿದ್ದಾರೆ.

ಮೀಸಲಾತಿ ಪ್ರಮಾಣದ ಮಿತಿ ಶೇ.50ರಷ್ಟು ಇರುವಾಗ ಬಿಜೆಪಿಯವರು ಶೇ.56ರಷ್ಟು ಮೀಸಲಾತಿಯನ್ನು ಹೇಗೆ ಜಾರಿ ಮಾಡಲಿದ್ದಾರೆ? ಈ ವಿಚಾರದಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯವನ್ನು ಮೂರ್ಖರನ್ನಾಗಿಸುತ್ತಿರುವುದೇಕೆ? ಅವರು ಮೀಸಲಾತಿ ಹೆಚ್ಚಳದ ಕಾನೂನನ್ನು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದೇ ಹೇಗೆ ಜಾರಿ ಮಾಡಲಿದ್ದಾರೆ? ಇದು ಪರಿಶಿಷ್ಟರಿಗೆ ಮಾಡುವ ಮೋಸವಲ್ಲವೇ? ಎಂದು ಪ್ರಶ್ನಿಸಿದರು.
ಮೋದಿ ಅವರ ಸರ್ಕಾರ ಡಿ.20, 2022 ಹಾಗೂ ಮಾರ್ಚ್ 14, 2023ರಂದು ಸಂಸತ್ತಿನಲ್ಲಿ ಪರಿಶಿಷ್ಟರ ಮಿಸಲಾತಿ ಹೆಚ್ಚಳವನ್ನು ಸಾರಾಸಗಟಾಗಿ ತರಸ್ಕರಿಸಿದೆ. ಹಾಗಿದ್ದರೆ ಇದನ್ನು ಯಾರು ಜಾರಿ ಮಾಡಲಿದ್ದಾರೆ? ಮೋದಿ ಅವರು ಈ ಪರಿಶಿಷ್ಟರ ಮೀಸಲಾತಿ ವಿಚಾರವಾಗಿ ಯಾಕೆ ಉತ್ತರ ನೀಡುತ್ತಿಲ್ಲ? ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ವಿಚಾರವಾಗಿ ತಂದಿರುವ ಕಾನೂನನ್ನು ಸಂವಿಧಾನದ 9ನೇ ಶೆಡ್ಯುಲ್ ನಲ್ಲಿ ಸೇರಿಸಬೇಕು ಹಾಗೂ ಮಿಸಲಾತಿ ಮಿತಿಯನ್ನು ಶೇ.50ರಿಂದ ವಿಸ್ತರಣೆ ಮಾಡಬೇಕು.

ಈ ಸರ್ಕಾರ ಒಕ್ಕಲಿಗರು, ಲಿಂಗಾಯತರು, ಮುಸಲ್ಮಾನ ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಮಾಡುತ್ತಿದೆ. ಅವರು 90 ದಿನಗಳ ಅಂತರದಲ್ಲಿ 3 ಬಾರಿ ಮೀಸಲಾತಿ ವರ್ಗೀಕರಣ ಬದಲಿಸಿದ್ದಾರೆ. ಈ ಸರ್ಕಾರ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸದೇ ಪೂರಕವಾದ ಅಂಕಿಅಂಶಗಳು ಇಲ್ಲದೆ, ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಪಡೆಯದೇ ಮೀಸಲಾತಿ ಹೆಚ್ಚಳ ಮಾಡಿದ್ದು, ಈ ಮೀಸಲಾತಿ ತೀರ್ಮಾನಗಳು ಹೇಗೆ ಜಾರಿಗೆ ಬರಲು ಸಾಧ್ಯ? ಎಂದು ಪ್ರಶ್ನಿಸಿದರು.
ಈ ಸರ್ಕಾರ ಎಲ್ಲ ವರ್ಗಗಳನ್ನು ವಿಭಜಿಸಿ ಪರಸ್ಪರ ಹೊಡೆದಾಡಿಕೊಳ್ಳುವಂತೆ ಮಾಡುವ ಪ್ರಯತ್ನವಾಗಿದೆ. ಒಕ್ಕಲಿಗ ಹಾಗೂ ಲಿಂಗಾಯತರನ್ನು ಮುಸಲ್ಮಾನರ ವಿರುದ್ದ ಎತ್ತಿ ಕಟ್ಟುವುದು, ಪರಿಶಿಷ್ಟ ಸಮುದಾಯಗಳ ನಡುವೆ ಪರಸ್ಪರ ಕಚ್ಚಾಟ ತರುವುದು ಈ ಸರ್ಕಾರದ ಪ್ರಯತ್ನವಾಗಿದೆ. ಆ ಮೂಲಕ ಈ 40% ಸರ್ಕಾರದ ಹಗರಣಗಳನ್ನು ಮುಚ್ಚಿಹಾಕುವುದು ಸರ್ಕಾರದ ಕಾರ್ಯತಂತ್ರವಾಗಿದೆ.
ಕೊನೆಯದಾಗಿ ಕೇಳುವ ಪ್ರಶ್ನೆ ಎಂದರೆ ಈ ಮೀಸಲಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳು ಹಾಗೂ ಸಚಿವರ ಮನೆ ಮುತ್ತಿಗೆ ಹಾಕುವ ಬದಲು ಯಡಿಯೂರಪ್ಪ ಅವರ ಮನೆ ಮುತ್ತಿಗೆ ಹಾಕುತ್ತಿರುವುದೇಕೆ? ಯಡಿಯೂರಪ್ಪ ಅವರು ಯಾವುದೇ ಹುದ್ದೆಯಲ್ಲಿ ಇಲ್ಲ. ಅವರು ಬಿಜೆಪಿ ಪ್ರಚಾರ ಸಮಿತಿಯಲ್ಲೂ ಸ್ಥಾನ ಪಡೆದಿಲ್ಲ. ಬಿಜೆಪಿಯ ಬೇರೊಬ್ಬರು ಯಡಿಯೂರಪ್ಪ ಅವರನ್ನು ಗುರಿಯಾಗಿಸಲು ಅವರ ಮನೆ ಮುತ್ತಿಗೆ ಹಾಕಲು ಕಳುಹಿಸುತ್ತಿದ್ದಾರೆ. ಇದು ಬಿಜೆಪಿಯ ಆಂತರಿಕ ಸಮಸ್ಯೆ. ರಾಜಕೀಯ ಲಾಭಕ್ಕಾಗಿ ಈ ಸಂಘರ್ಷವನ್ನು ಹೊತ್ತಿಸಲಾಗುತ್ತಿದೆ. ಜನರು ಈ ಬಗ್ಗೆ ಎಚ್ಚರದಿಂದ ಇರಬೇಕು.












Click it and Unblock the Notifications