Get Updates
Get notified of breaking news, exclusive insights, and must-see stories!

KSRTC STRIKE: ರಾಮಲಿಂಗಾ ರೆಡ್ಡಿ ಗುಡ್‌ನ್ಯೂಸ್; ನೌಕರರ ಹಿಂಬಾಕಿ ಬಿಡುಗಡೆ, ವೇತನ ಪರಿಷ್ಕರಣೆಗೆ ಆದೇಶ

ಬೆಂಗಳೂರು: ಕರ್ನಾಟಕ ರಾಜ್ಯ ಸಾರಿಗೆ ನಿಗಮಗಳ ನೌಕರರು ಮುಷ್ಕರ ನಡೆಸುವ ಒಂದು ಮುನ್ನವೇ ಸಂಧಾನಕ್ಕೆ ಸರ್ಕಾರ ಮುಂದಾಗಿದೆ. ಈವರೆಗೂ ಸಾರಿಗೆ ನೌಕರರ ಹಿಂಬಾಕಿ ನೀಡುವಲ್ಲಿ ವಿಳಂಬ ಮಾಡಿದ್ದ ರಾಜ್ಯ ಸರ್ಕಾರ ಇದೀಗ ಹಿಂಬಾಕಿ ಪಾವತಿಗಾಗಿ ಬರೋಬ್ಬರಿ 1,271 ಕೋಟಿ ರೂಪಾಯಿ ಬಿಡುಗಡೆ ನಿರ್ಧರಿಸಿದೆ. ಜೊತೆಗೆ ವೇತನ ಪರಿಷ್ಕರಣೆಗೂ ಆದೇಶಿಸಿದೆ. ಗುರುವಾರ (ಫೆ.19) ಹಮ್ಮಿಕೊಂಡ ರಾಜ್ಯ ಸಾರಿಗೆ ಮುಷ್ಕರದ ಒಂದು ದಿನ ಮುನ್ನವೇ ಬುಧವಾರ ತುರ್ತಾಗಿ ಸರ್ಕಾರದ ಈ ನಿರ್ಧಾರ ಪ್ರಕಟಿಸಿದೆ.

ಒಟ್ಟು 36 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಬೇಕು ಎಂದು ಸಾರಿಗೆ ನೌಕರರು ಪಟ್ಟು ಹಿಡಿದಿದ್ದರು. ಈ ಪೈಕಿ 26 ತಿಂಗಳ ಹಿಂಬಾಕಿ ಪಾವತಿಸಲು ರಾಜ್ಯ ಸರ್ಕಾರ ಸಮ್ಮತಿಸಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಲು ಒಪ್ಪಿಕೊಂಡಿದೆ. ಈ ನಿಟ್ಟಿನಲ್ಲಿ ಬುಧವಾರ ಮಹತ್ವದ ಆದೇಶ ಹೊರ ಬಿದ್ದಿದೆ.

KSRTC Employees salary hike order

ವೇತನ ಹೆಚ್ಚಳದ ಆದೇಶದಲ್ಲಿ ಏನೇನಿದೆ?

ಕರ್ನಾಟಕ ನಾಲ್ಕು ಸಾರಿಗೆ ನಿಗಮಗಳ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಮೂರ್ತಿ ಅವರ ಏಕ ಸದಸ್ಯ ಸಮಿತಿಯ ಶಿಫಾರಸ್ಸಿನಂತೆ ದಿನಾಂಕ 01.01.2022 ರಿಂದ 28.02.2023 ಅವಧಿಗೆ 14 ತಿಂಗಳ ವರೆಗಿನ ಹಿಂಬಾಕಿ ವೇತನ ನೀಡಲು ಸರ್ಕಾರ ಒಪ್ಪಿಗೆ ನೀಡಿದೆ. ಅದಕ್ಕೆ ತಗುಲುವ ರೂ.718.93 ಕೋಟಿಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ.

ಮಾತ್ರವಲ್ಲದೇ 38 ತಿಂಗಳ ಹಿಂಬಾಕಿ ಪೈಕಿ ಉಳಿದ 24 ತಿಂಗಳಲ್ಲಿ ದಿನಾಂಕ 01.01.2021 ರಿಂದ 31.12.2021ರ ವರೆಗೆ 12 ತಿಂಗಳ ವೇತನ ಹಿಂಬಾಕಿ ಮೊತ್ತ ರೂ. 552.99 ಕೋಟಿಗಳ ವಿಶೇಷ ಅನುದಾನವನ್ನು ಸರ್ಕಾರವು ಬಿಡುಗಡೆ ಮಾಡಲಿದೆ ಒಪ್ಪಿದೆ ಎಂದು ಇಂದಿನ ಆದೇಶದಲ್ಲಿ ತಿಳಿಸಲಾಗಿದೆ.

ಬೆಂಗಳೂರು ಚಲೋ ನಿಲ್ಲದು: ಕಾರ್ಮಿಕ ಸಂಘಟನೆ

ರಾಜ್ಯ ಸರ್ಕಾರ ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಬಿಡುಗಡೆ ಮಾಡಲೇಬೇಕು. ನಾಳೆ (ಫೆ 19) ಗುರುವಾರ ಸಾರಿಗೆ ನಿಗಮಗಳ ನೌಕರರ ಪ್ರತಿಭಟನೆ, 'ಬೆಂಗಳೂರು ಚಲೋ' ನಡೆಯಲಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಜಗದೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಸರ್ಕಾರ ಕೊನೆ ಕ್ಷಣದಲ್ಲಿ ಆದೇಶ ನೀಡಿದರೂ ಸಹಿತ ನೌಕರರ ಒಕ್ಕೂಟಗಳು ಬೇಡಿಕೆಗಳನ್ನು ಪರಿಪೂರ್ಣವಾಗಿ ಈಡೇರಿಸುವಂತೆ ಪಟ್ಟು ಹಿಡಿದಿವೆ.

ನೌಕರರ ಸಂಘಟನೆಗಳೊಂದಿಗೆ ಸಂಧಾನಕ್ಕೆ ಸೂಚಿಸಿ ಆದೇಶ

ರಾಜ್ಯದ ಎಲ್ಲ ರಸ್ತೆ ಸಾರಿಗೆ ನಿಗಮಗಳ ನೌಕರರು ಮತ್ತು ಅಧಿಕಾರಿಗಳಿಗೆ ದಿನಾಂಕ 01.04.2025 ರಿಂದ ಜಾರಿಗೆ ಬರುವಂತೆ ಶೇಕಡವಾರು ಎಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳ ಪರಿಷ್ಕರಿಸಬೇಕು ಎನ್ನುವ ಸಂಬಂಧ ಕಾರ್ಮಿಕ ಸಂಘಟನೆಗಳೊಡನೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಸಂಧಾನ ಪ್ರಕ್ರಿಯೆ ಪ್ರಾರಂಭಿಸಲು ಆದೇಶಿಸಲಾಗಿದೆ. ಮಾತ್ರವಲ್ಲದೇ ಈವರೆಗೆ ವೇತನ ಹೆಚ್ಚಿಸದಿರಲು, ಹಿಂಬಾಕಿ ಬಿಡುಗಡೆ ತಡವಾಗಿದ್ದಕ್ಕೆ ಸರ್ಕಾರ ಒಂದಷ್ಟು ಕಾರಣಗಳನ್ನು ಆದೇಶದಲ್ಲಿ ತಿಳಿಸಿದೆ.

ವೇತನ ಪರಿಷ್ಕರಣೆ ವಿಳಂಬಕ್ಕೆ ಕಾರಣಗಳೇನು?

ಮಾರ್ಚ್-2023 ರಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರ ವೇತನ ಪರಿಷ್ಕರಣೆ ಮಾಡಿ, ಆ ಸಂಬಂಧ ಬಜೆಟ್‌ನಲ್ಲಿ ಯಾವುದೇ ಅನುದಾನವನ್ನು ಮೀಸಲಿಡದೆ ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿ ಬೇಡಿಕೆ ಸಂಬಂಧ ಶ್ರೀ ಶ್ರೀನಿವಾಸ ಮೂರ್ತಿ, ಭಾಆಸೇ., (ನಿವೃತ್ತ) ರವರ ಏಕ ಸದಸ್ಯ ಸಮಿತಿಯನ್ನು ರಚಿಸಿ, ಸಮಿತಿಯ ಶಿಫಾರಸಿನ ಮೇರೆಗೆ ಹಿಂಬಾಕಿ ವೇತನ ಪಾವತಿ ಎಂಬುದಾಗಿ ಆದೇಶಿಸಿದ್ದರಿಂದ ಈ ರೀತಿಯ ವಿಳಂಬವಾಗಿದೆ ಎಂದು ತಿಳಿಸಿದೆ.

ನಿವೃತ್ತ ನೌಕರರ ವೇತನ ಪರಿಷ್ಕರಣೆ ಸಂಬಂಧ ಉಪಧನ ಬಾಕಿ ಮೊತ್ತ ರೂ.224 ಕೋಟಿ ಗಳನ್ನು ಯಾವುದೇ ಅನುದಾನವನ್ನು ಮೀಸಲಿಡದೆ ಇದ್ದಾಗ್ಯೂ ಸಹ ಬಿಡುಗಡೆಗೊಳಿಸಲಾಗಿದೆ. 2019-2023ರ ಅವಧಿಯಲ್ಲಿನ ರೂ.4900 ಕೋಟಿ ಬಾಕಿ ಉಳಿಸಿರುವ ಹೊಣೆಗಾರಿಕೆ ಮೊತ್ತದಲ್ಲಿ, ನೌಕರರ ಭವಿಷ್ಯ ನಿಧಿ ಮತ್ತು ಡೀಸೆಲ್ ಬಾಕಿ ಪಾವತಿಗಾಗಿ ನಮ್ಮ ಸರ್ಕಾರವು ಬ್ಯಾಂಕ್‌ನಿಂದ ರೂ.2000 ಕೋಟಿ ಸಾಲವನ್ನು ಪಡೆಯಲು ಸಾರಿಗೆ ಸಂಸ್ಥೆಗಳಿಗೆ ಅನುಮತಿಸಿದೆ. ಈ ಸಾಲದ ಅಸಲು ಮತ್ತು ಬಡ್ಡಿಯನ್ನು ಸರ್ಕಾರವು ಪಾವತಿಸುತ್ತಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

2019-2023 ರ ಅವಧಿಯಲ್ಲಿ ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸಮರ್ಪಕವಾಗಿ ಹೊಸ ಬಸ್ಸುಗಳ ಸೇರ್ಪಡೆಯಾಗದೆ ಮತ್ತು ಹೊಸ ನೇಮಕಾತಿ ಸ್ಥಗಿತಗೊಂಡಿತ್ತು. ಇದರಿಂದ, ಕಳೆದ ಎರಡುವರೆ ವರ್ಷಗಳಲ್ಲಿ ಸಾರಿಗೆ ಸಂಸ್ಥೆಗಳನ್ನು ಬಲಪಡಿಸಲು ಮತ್ತು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ 7800 ಹೊಸ ಬಸ್ಸುಗಳ ಸೇರ್ಪಡೆ ರೂ.3510 ಕೋಟಿ ಮತ್ತು 10000 ಹೊಸ ನೇಮಕಾತಿ ಮಾಡಲಾಗಿದೆ.

ಸಾರಿಗೆ ಸಂಸ್ಥೆಗಳು ಪ್ರತಿ ದಿನ ಗಳಿಸುವ ಆದಾಯದಲ್ಲಿ ಶೇ.34.50 ರಷ್ಟು ಡೀಸೆಲ್ ವೆಚ್ಚ ಮತ್ತು ಶೇ.46.37 ಸಿಬ್ಬಂದಿ ವೆಚ್ಚ ಒಟ್ಟಾರೆ ಶೇ.80.87 ಪಾವತಿಸಲಾಗುತ್ತಿದೆ. ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳ ಕ್ಲಿಷ್ಟಕರ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕಳೆದ 2 ವರ್ಷಗಳಲ್ಲಿ ಸಂಸ್ಥೆಗಳು ಪಾವತಿಸಬೇಕಾಗಿದ್ದ ಮೋಟಾರು ವಾಹನ ತೆರಿಗೆ ಮೊತ್ತ ರೂ.1219.23 ಕೋಟಿ ಗೆ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಈ ಆದೇಶ ವಿಳಂಬಕ್ಕೆ ಕಾರಣಗಳನ್ನು ವಿವರಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+