ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಬಿಸಿಗಾಳಿ, ಮಳೆ ಮುನ್ಸೂಚನೆ
ಬೆಂಗಳೂರು, ಮೇ 01; ಕರ್ನಾಟಕದಲ್ಲಿ ಉರಿ ಬಿಸಿಲಿನ ಝಳದ ನಡುವೆಯೂ ಅನೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಶನಿವಾರ ರಾತ್ರಿ ಬೆಂಗಳೂರು ನಗರದ ವಿವಿಧ ಪ್ರದೇಶಗಳಲ್ಲಿ ಮಿಂಚು, ಗುಡುಗು ಸಹಿತ ಮಳೆಯಾಗಿದೆ.
ಭಾನುವಾರ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ.
ದೇಶದ ವಿವಿಧ ರಾಜ್ಯಗಳಲ್ಲಿ ಬಿಸಿಗಾಳಿ ಬೀಸುತ್ತಿದೆ. ಕರ್ನಾಟಕದ ಉತ್ತರ ಒಳನಾಡಿನ ಹಲವು ಪ್ರದೇಶಗಳಲ್ಲಿ ಇಂದು ಬಿಸಿಗಾಳಿ ಬೀಸಲಿದೆ. ಮೇ 2ರ ಉಷ್ಣಾಂಶದಲ್ಲಿ ಕುಸಿತ ಕಂಡುಬರಲಿದೆ ಎಂದು ಅಂದಾಜಿಸಲಾಗಿದೆ.
ಮಂಗಳೂರಿನಲ್ಲಿ ಗರಿಷ್ಠ 33, ಕನಿಷ್ಠ 27 ಡಿಗ್ರಿ ಸೆಲ್ಸಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ. ಶಿವಮೊಗ್ಗ 37-21, ಮೈಸೂರು 34-22, ಮಂಡ್ಯ 36-23, ರಾಮನಗರ 36-23, ಹಾಸನ 34-21, ಕೋಲಾರ 36-23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ.

ರಾಯಚೂರು 42-27, ಕೊಪ್ಪಳ 39-24, ಬಾಗಲಕೋಟೆ 41-24, ಕಲಬುರಗಿ 40-27, ಬೀದರ್ 41-26 ಮತ್ತು ಯಾದಗಿರಿಯಲ್ಲಿ ಗರಿಷ್ಠ 43 ಮತ್ತು ಕನಿಷ್ಠ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುವ ನಿರೀಕ್ಷೆ ಇದೆ.
ಭಾರತೀಯ ಹವಾಮಾನ ಇಲಾಖೆ ಕೇರಳ, ಕರ್ನಾಟಕ, ತಮಿಳುನಾಡು, ತೆಲಂಗಾಣದಲ್ಲಿ ಎರಡು ದಿನಗಳ ಕಾಲ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಮುನ್ಸೂಚನೆ ನೀಡಿದೆ. ಪಂಜಾಬ್, ಹರ್ಯಾಣ, ದೆಹಲಿಯಲ್ಲಿಯೂ ಮೇ 2ರ ಬಳಿಕ ಮಳೆಯಾಗಲಿದೆ.
ಭಾನುವಾರ ಪಶ್ಚಿಮ ರಾಜಸ್ಥಾನ, ಪಂಜಾಬ್, ದೆಹಲಿ, ಪಶ್ಚಿಮ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಜಾರ್ಖಂಡ್‌ನಲ್ಲಿ ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಅಂಡಮಾನ್‌ನಲ್ಲಿ ಮೇ 4ರಂದು ಚಂಡಮಾರುತ ರೂಪಗೊಳ್ಳುವ ಸಾಧ್ಯತೆ ಇದ್ದು, ಇದರ ಪರಿಣಾಮ ಮಳೆಯಾಗಲಿದೆ.
ಒಡಿಶಾ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್ ರಾಜ್ಯಗಳಲ್ಲಿ ಈಗಾಗಲೇ ಉಷ್ಣಾಂಶ ಕುಸಿತಕಂಡಿದೆ. ಭಾರತೀಯ ಹವಾಮಾನ ಇಲಾಖೆಯ ಹಿರಿಯ ವಿಜ್ಞಾನಿ ಆರ್. ಕೆ. ಜಿನಮಣಿ ಮಾತನಾಡಿ, "ಮೇ 2 ರಿಂದ 4ರ ತನಕ ರಾಜಸ್ಥಾನ, ನವದೆಹಲಿ, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಮಳೆಯಾಗಲಿದೆ. ಇದರಿಂದಾಗಿ ಉಷ್ಣಾಂಶ ಕುಸಿತವಾಗಲಿದೆ" ಎಂದು ಹೇಳಿದ್ದಾರೆ.












Click it and Unblock the Notifications