Santhosh Patil Suicide; ರಾಹುಲ್ ಗಾಂಧಿ ಟ್ವೀಟ್
ಬೆಂಗಳೂರು, ಏಪ್ರಿಲ್ 12; ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿದೆ. ಆದರಲ್ಲೂ ಸಾವಿಗೆ ಮುನ್ನ ಕಳಿಸಿರುವ ವಾಟ್ಸಪ್ ಸಂದೇಶದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪ ಹೆಸರು ಪ್ರಸ್ತಾಪಿಸಲಾಗಿದೆ. ಇದರಿಂದಾಗಿ ಪ್ರಕರಣ ರಾಜಕೀಯ ತಿರುವು ಪಡೆದಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. "ಬಿಜೆಪಿಯ ಶೇ 40 ಕರ್ನಾಟಕದ ಕಮೀಷನ್ ಸರ್ಕಾರ ಅವರ ಪಕ್ಷದ ಕಾರ್ಯಕರ್ತನ ಜೀವ ಪಡೆದಿದೆ" ಎಂದು ಹೇಳಿದ್ದಾರೆ.
BJP’s 40% Commission Govt in Karnataka has claimed the life of their own Karyakarta.
— Rahul Gandhi (@RahulGandhi) April 12, 2022
The victim’s pleas to the PM went unanswered.
PM & CM are complicit.#BJPCorruptionFiles pic.twitter.com/x6LUJfaQX5
"ಸಂತ್ರಸ್ತ ಪ್ರಧಾನಿಗೆ ನೀಡಿದ ದೂರಿಗೆ ಇದುವರೆಗೂ ಉತ್ತರ ಸಿಕ್ಕಿಲ್ಲ. ಇದರಲ್ಲಿ ಸಿಎಂ ಮತ್ತು ಪಿಎಂ ಸಹ ಭಾಗಿದಾರರು" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಉಗ್ರ ಹೋರಾಟ; ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿ ವಿರುದ್ಧ ಉಗ್ರ ಹೋರಾಟ ನಡೆಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈಗಾಗಲೇ ಸಚಿವ ಕೆ. ಎಸ್. ಈಶ್ವರಪ್ಪ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸುತ್ತಿದ್ದಾರೆ.
ಕಾಂಗ್ರೆಸ್ ನಾಯಕರ ನಿಯೋಗ ಬುಧವಾರ ರಾಜ್ಯಪಾಲರನ್ನು ಭೇಟಿ ಮಾಡಲಿದ್ದು, ಶೇ 40ರಷ್ಟು ಕಮಿಷನ್‌ಗಾಗಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಕಾರಣರಾಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ. ಎಸ್. ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು, ಅವರ ವಿರುದ್ಧ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು, ಅವರನ್ನು ಬಂಧಿಸಿ ವಿಚಾರಣೆ ನಡೆಸಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.
ರಾಜೀನಾಮೆ ಕೊಡಲ್ಲ; ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಸಚಿವ ಕೆ. ಎಸ್. ಈಶ್ವರಪ್ಪ, "ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ಆತ ಯಾರೆಂಬುದೇ ನನಗೆ ಗೊತ್ತಿಲ್ಲ. ಆತ ನಮ್ಮ ಇಲಾಖೆ ಮೇಲೆ ಆರೋಪ ಮಾಡಿದ್ದ. ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. ಆತನ ಮೇಲೆ ಮತ್ತು ಒಂದು ಖಾಸಗಿ ಚಾನಲ್ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ನ್ಯಾಯಾಲಯದಿಂದ ಆತನಿಗೆ ನೋಟಿಸ್ ಬಂದಿದೆ. ಹೀಗಾಗಿ ಆತ ಆತ್ಮಹತ್ಯೆ ಮಾಡಿಕೊಂಡಿರಬಹುದು" ಎಂದರು.
"ಆತ ನಮ್ಮ ಇಲಾಖೆಯಿಂದ ಯಾವುದೇ ಟೆಂಡರ್ ಪಡೆದುಕೊಂಡಿಲ್ಲ. ಕಾಂಗ್ರೆಸ್ ರಾಜೀನಾಮೆ ನೀಡುವಂತೆ ಆಗ್ರಹಿಸಿದೆ. ನಾನು ರಾಜೀನಾಮೆ ನೀಡುವುದಿಲ್ಲ. ತನಿಖೆ ನಡೆಯಲಿ, ನನ್ನ ಮೇಲೆ ಆರೋಪ ಮಾಡಿದವರು ನ್ಯಾಯಾಲಯದಲ್ಲಿ ಸಾಬೀತು ಮಾಡಬೇಕಿತ್ತು" ಎಂದರು.
ಇದು ಕೊಲೆ; ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇದು ಆತ್ಮಹತ್ಯೆ ಅಲ್ಲ, ಕೊಲೆ. ಕಮಿಷನ್ ಕಿರುಕುಳದ ಬಗ್ಗೆ ಮೃತ ಸಂತೋಷ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿಯವರಿಂದ ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ವರೆಗೆ ಎಲ್ಲರಿಗೂ ಪತ್ರ ಬರೆದಿದ್ದರು. ಹೀಗಿದ್ದರೂ ಅವರಿಗೆ ನ್ಯಾಯ ಸಿಗಲಿಲ್ಲ. ಆದ್ದರಿಂದ ಇವರೆಲ್ಲರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ಗುತ್ತಿಗೆದಾರನ ಆತ್ಮಹತ್ಯೆಯ ಆರೋಪಿ ಸಚಿವ ಕೆ. ಎಸ್. ಈಶ್ವರಪ್ಪನವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಸಂಪುಟದಿಂದ ಕಿತ್ತುಹಾಕಿ, ಅವರ ವಿರುದ್ಧ ಕೊಲೆ ಮೊಕದ್ದಮೆ ದಾಖಲಿಸಬೇಕು. ಜೊತೆಗೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
"ನಮ್ಮ ಸರ್ಕಾರದ ಕಾಲದಲ್ಲಿ ಯಾರೋ ಪೊಲೀಸ್ ಅಧಿಕಾರಿಯೊಬ್ಬರು ಆರೋಪ ಹೊರಿಸಿದಾಗ ಸಚಿವ ಕೆ. ಜೆ. ಜಾರ್ಜ್ ರಾಜೀನಾಮೆ ನೀಡಿಲ್ಲವೇ?. ಆಗ ಸಚಿವ ಜಾರ್ಜ್ ರಾಜೀನಾಮೆ ನೀಡಬೇಕೆಂದು ಇದೇ ಬಿಜೆಪಿ ನಾಯಕರು ಆಕಾಶ-ಭೂಮಿ ಒಂದು ಮಾಡಿಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications