ಆಗಸ್ಟ್ 30ಕ್ಕೆ ಮೈಸೂರಿನಲ್ಲಿ ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿಯಿಂದ ಚಾಲನೆ
ಬೆಂಗಳೂರು, ಆಗಸ್ಟ್ 21: ವಿಳಂಬದ ನಂತರವೈ ಬಹು ನಿರೀಕ್ಷಿತ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 30 ರಂದು ಮೈಸೂರಿನಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಉದ್ಘಾಟಿಸುವ ಸಾಧ್ಯತೆಯಿದೆ.
ಗೃಹ ಲಕ್ಷ್ಮಿ ಯೋಜನೆಯು ಮನೆಯ ಯಜಮಾನಿಗೆ ತಿಂಗಳಿಗೆ ರೂ 2,000 ನೀಡುವ ಕಾರ್ಯಕ್ರಮವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭಾನುವಾರ ದಿನಾಂಕವನ್ನು ಖಚಿತಪಡಿಸಿದ್ದಾರೆ ಮತ್ತು ಮೆಗಾ ಕಾರ್ಯಕ್ರಮಕ್ಕೆ ಸಿದ್ಧತೆಗಾಗಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ್ದಾರೆ.

ಕಾಂಗ್ರೆಸ್ ನೇತೃತ್ವದ ಸರ್ಕಾರವು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸಜ್ಜುಗೊಳಿಸಲು ಯೋಜಿಸುತ್ತಿದೆ. ಯೋಜನೆ ಬಿಡುಗಡೆಯಾದ ತಕ್ಷಣ 1,09,54,000 ನೋಂದಾಯಿತ ಮಹಿಳೆಯರಿಗೆ ತಮ್ಮ ಖಾತೆಗಳಿಗೆ 2,000 ರೂಪಾಯಿ ಹಣ ಜಮೆಯಾಗುತ್ತದೆ ಎಂದು ತಿಳಿಸಿದ್ದಾರೆ.
ಪಡಿತರ ಚೀಟಿಯಲ್ಲಿ ಕುಟುಂಬದ ಮುಖ್ಯಸ್ಥರ ಹೆಸರನ್ನು ನಮೂದಿಸಿರುವ ಮಹಿಳೆ ಈ ಯೋಜನೆಗೆ ಅರ್ಹಳಾಗಿರುತ್ತಾರೆ. ಆದಾಗ್ಯೂ, ಆದಾಯ ತೆರಿಗೆ ಪಾವತಿಸುವ ಅಥವಾ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ಕ್ಲೈಮ್ ಮಾಡುವ ಮಹಿಳೆ ಅಥವಾ ಆಕೆಯ ಪತಿ ಯೋಜನೆಗೆ ಅರ್ಹರಲ್ಲ ಎಂದು ಸರ್ಕಾರ ಈಗಾಗಲೇ ಹೇಳಿದೆ.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಈ ಮೊದಲು ಕಾರ್ಯಕ್ರಮವನ್ನು ಆಗಸ್ಟ್ 20 ರಂದು ಉದ್ಘಾಟಿಸಲು ನಿರ್ಧರಿಸಲಾಗಿತ್ತು ಮತ್ತು ಅದನ್ನು ಆಗಸ್ಟ್ 27 ಕ್ಕೆ ಮುಂದೂಡಲಾಯಿತು ಮತ್ತು ಈಗ ಆಗಸ್ಟ್ 30 ರಂದು ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಈ ಹಿಂದೆ ಬೆಳಗಾವಿಯಲ್ಲಿ ಗೃಹ ಲಕ್ಷ್ಮಿ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರ ಯೋಜಿಸಿತ್ತು, ಆದರೆ ಅದನ್ನು ರಾಹುಲ್ ಗಾಂಧಿಯವರ ವೇಳಾಪಟ್ಟಿಗೆ ಹೊಂದಿಸಲು ಮೈಸೂರಿಗೆ ಸ್ಥಳಾಂತರಿಸಲಾಯಿತು.
ಮೈಸೂರಿನಲ್ಲಿ ಕಾರ್ಯಕ್ರಮ ತಯಾರಿ ಪರಿಶೀಲಿಸಿ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ನಾನು ಅದೃಷ್ಟಶಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆಯಾಗಿ, ನನ್ನ ಇಲಾಖೆಯಿಂದ ಮಹಿಳೆಯರಿಗಾಗಿ ಯೋಜನೆ ರೂಪಿಸಿ, ತಾಯಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಮೈಸೂರಿನಲ್ಲಿ ಆಯೋಜನೆ ಮಾಡಲಾಗುತ್ತಿದೆ. ಆ.30ಕ್ಕೆ ರಾಹುಲ್ ಗಾಂಧಿ ಬೆಂಗಳೂರಿಗೆ ಬರುತ್ತಿದ್ದಾರೆ. ಬೆಂಗಳೂರಿಗೆ ಹತ್ತಿರ ಅಂದ್ರೆ ಮೈಸೂರು. ಹೀಗಾಗಿ ಮೈಸೂರಿಗೆ ಬಂದು ರಾಹುಲ್ ಗಾಂಧಿ ಕಾರ್ಯಕ್ರಮ ಉದ್ಘಾಟನೆ ಮಾಡ್ತಾರೆ. ಅಲ್ಲದೇ ಬೇರೆ ಕಾರ್ಯಕ್ರಮಗಳ ನಿಮಿತ್ತ ಕಾರ್ಯಕ್ರಮ ಶಿಫ್ಟ್ ಆಗಿದೆ. ಅನ್ನಭಾಗ್ಯ ಯೋಜನೆ ಬೆಳಗಾವಿಯಲ್ಲಿ ನಡೆಯಬಹುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.












Click it and Unblock the Notifications