ಶನಿವಾರವೇ ಪ್ರಮಾಣವಚನ: ಸಂಪುಟ ಸೇರುವ ಶಾಸಕರು ಯಾರು? ಇಲ್ಲಿದೆ ಪಟ್ಟಿ
Recommended Video

ನವದೆಹಲಿ, ಡಿಸೆಂಬರ್ 21: ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಮೊದಲ ಬಾರಿಗೆ ಸಂಪುಟ ವಿಸ್ತರಣೆ ಆಗುತ್ತಿದೆ.
ಸರ್ಕಾರ ರಚನೆಯಾದ ಸಂದರ್ಭದಿಂದಲೂ ಕಗ್ಗಂಟಾಗಿ ಉಳಿದಿದ್ದ ಸಂಪುಟ ವಿಸ್ತರಣೆ ಕಾಂಗ್ರೆಸ್ ನಾಯಕರಿಗೆ ತಲೆನೋವಾಗಿ ಪರಿಣಮಿಸಿತ್ತು. ವಿವಿಧ ಕಾರಣಗಳನ್ನು ಒಡ್ಡಿ ಸಂಪುಟ ವಿಸ್ತರಣೆಯನ್ನು ಮುಂದೂಡುತ್ತಲೇ ಬರಲಾಗುತ್ತಿತ್ತು. ಕೊನೆಗೂ ಅದಕ್ಕೆ ಮುಹೂರ್ತ ಕೂಡಿಬಂದಿದ್ದು, ಶನಿವಾರ ಹೊಸ ಸಚಿವರು ಪ್ರಮಾಣ ವಚನ ಸ್ವೀಕಾರ ನಡೆಸುವುದು ಖಚಿತವಾಗಿದೆ.
ಶುಕ್ರವಾರ ನವದೆಹಲಿಯಲ್ಲಿ ರಾಜ್ಯದ ಕಾಂಗ್ರೆಸ್ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಸಚಿವ ಸ್ಥಾನಕ್ಕೆ ನೇಮಕವಾಗಬೇಕಾದ ಶಾಸಕರ ಹೆಸರುಗಳನ್ನು ಅಂತಿಮಗೊಳಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಕೆಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಜೆ ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಯಾರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದ್ದು, ಮುಖಂಡರು ಮುಂದಿಟ್ಟ ಹೆಸರುಗಳಿಗೆ ರಾಹುಲ್ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

ತಮ್ಮನ ಬದಲು ಅಣ್ಣನಿಗೆ ಸ್ಥಾನ?
ಬಂಡಾಯವೇಳುವ ಮೂಲಕ ಮೈತ್ರಿ ಸರ್ಕಾರಕ್ಕೆ ನಿರಂತರವಾಗಿ ನಡುಕ ಹುಟ್ಟಿಸಿರುವ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈಬಿಡಲು ರಾಹುಲ್ ಗಾಂಧಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ರಮೇಶ್ ಅವರ ಬದಲು ಅವರ ಸಹೋದರ ಸತೀಶ್ ಜಾರಕಿಹೊಳಿ ಅವರನ್ನು ಸಂಪುಟಕ್ಕೆ ಸೇರಿಸುವ ಸಾಧ್ಯತೆ ಇದೆ. ಪಕ್ಷದ ಆಂತರಿಕ ಸಮಸ್ಯೆಗಳ ಕಾರಣ ಸತೀಶ್ ಜಾರಕಿಹೊಳಿ ಕೂಡ ಬಂಡೆದಿದ್ದರು. ಆದರೆ, ಬಳಿಕ ಸರ್ಕಾರದ ಜೊತೆಗಿರುವುದಾಗಿ ಹೇಳಿಕೆ ನೀಡಿದ್ದರು. ರಮೇಶ್ ಜಾರಕಿಹೊಳಿ ಬಿಜೆಪಿ ಮುಖಂಡರ ಜೊತೆ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್ ನಾಯಕರಿಗೆ ಮುಜುಗರ ಉಂಟುಮಾಡಿದ್ದರು.

ಲಿಂಗಾಯತ ಕೋಟಾದಡಿ ಯಾರು?
ಸಂಪುಟ ವಿಸ್ತರಣೆ ವೇಳೆ ಲಿಂಗಾಯತ ಸಮುದಾಯದ ಒಬ್ಬ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಿದೆ. ಇದರಲ್ಲಿ ಮಾಜಿ ಸಚಿವ ಎಂಬಿ ಪಾಟೀಲ್, ಬಿಸಿ ಪಾಟೀಲ್ ಮತ್ತು ಬಿಕೆ ಸಂಗಮೇಶ್ ನಡುವೆ ಪೈಪೋಟಿಯಿದೆ. ಇವರಲ್ಲಿ ಎಂಬಿ ಪಾಟೀಲ್ ಅವರ ಪರವಾಗಿ ರಾಹುಲ್ ಒಲವು ಇದೆ. ಈ ಹಿಂದೆ ಎಂಬಿ ಪಾಟೀಲ್ ಕೂಡ ತಮಗೆ ಸಚಿವ ಸ್ಥಾನ ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಡಿಸಿದ್ದರು. ಆಗ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವುದಾಗಿ ರಾಹುಲ್ ಗಾಂಧಿ ಮನವೊಲಿಸಿದ್ದರು. ಹೀಗಾಗಿ ಎಂಬಿ ಪಾಟೀಲ್ ಅವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿದೆ.

ಎಂಟಿಬಿ, ಶಿವಳ್ಳಿ, ಪರಮೇಶ್ವರ್ ನಾಯ್ಕ್, ತುಕಾರಾಂ
ಸಂಪುಟ ವಿಸ್ತರಣೆಯಲ್ಲಿ ಕುರುಬ ಕೋಟಾದಲ್ಲಿ ಸಿಎಸ್ ಶಿವಳ್ಳಿ ಅವರಿಗೆ ಸ್ಥಾನ ಸಿಗುವುದು ನಿಶ್ಚಿತವಾಗಿದೆ ದಲಿತ ಎಡಗೈ ಸಮುದಾಯದ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿಆರ್. ತಿಮ್ಮಾಪುರ ಅವರೂ ಸಂಪುಟ ಸೇರಲಿದ್ದಾರೆ. ಜೊತೆಗೆ ಎಂಟಿಬಿ ನಾಗರಾಜ್, ಪಿ.ಟಿ. ಪರಮೇಶ್ವರ್ ನಾಯ್ಕ್, ಸಂಡೂರು ಶಾಸಕ ಇ. ತುಕಾರಾಂ, ಮುಸ್ಲಿಂ ಸಮುದಾಯದ ರಹೀಂ ಖಾನ್ ಸಂಪುಟ ಸೇರುವುದು ಬಹುತೇಕ ಖಾತರಿಯಾಗಿದೆ.

ಹೊರ ಹೋಗುವವರು ಯಾರು?
ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಜಯಮಾಲಾ ಮತ್ತು ಅರಣ್ಯ ಸಚಿವ ಆರ್. ಶಂಕರ್ ಅವರನ್ನು ಸಂಪುಟದಿಂದ ಕೈ ಬಿಡಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ಸಂಜೆ ಪ್ರಮಾಣವಚನ
ಸಂಪುಟ ವಿಸ್ತರಣೆಗೆ ರಾಹುಲ್ ಗಾಂಧಿ ಹಸಿರು ನಿಶಾನೆ ನೀಡುತ್ತಿದ್ದಂತೆಯೇ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ಸಂಭ್ರಮ ಮನೆಮಾಡಿದೆ. ಶನಿವಾರ ಸಂಜೆಯೇ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ.
ಸಂಜೆ 5.30ರ ವೇಳೆಗೆ ರಾಜಭವನದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ.

ನಿಗಮ, ಮಂಡಳಿಗೆ ನೇಮಕ
ಉಮೇಶ್ ಜಾಧವ್, ಬಿ. ನಾರಾಯಣರಾವ್, ಅಬ್ಬಯ್ಯ ಪ್ರಸಾದ್, ಆರ್. ನರೇಂದ್ರ, ಮುನಿರತ್ನ ಅವರನ್ನು ನಿಗಮ ಮಂಡಳಿಗೆ ಆಯ್ಕೆ ಮಾಡಲಾಗಿದೆ. ಎಂಟು ಶಾಸಕರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನಮಾನ ನೀಡಲಾಗಿದೆ. ರೂಪಾ ಶಶಿಧರ್, ಅಂಜಲಿ ನಿಂಬಾಳ್ಕರ್, ಸೌಮ್ಯಾ ರೆಡ್ಡಿ ಅವರಿಗೆ ಸಂಸದೀಯ ಕಾರ್ಯದರ್ಶಿ ಸ್ಥಾನ ನೀಡಲಾಗಿದೆ.












Click it and Unblock the Notifications