ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ: ಆರಗ ಜ್ಞಾನೇಂದ್ರಗೆ ತಿವಿದ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಆಗಸ್ಟ್ 02: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುರಿತು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದವನ್ನೇ ಸೃಷ್ಟಿಸಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಮೈಬಣ್ಣದ ಬಗ್ಗೆ ಆರಗ ಜ್ಞಾನೇಂದ್ರ ಅವರು ಹೀಯಾಳಿಸಿ ಮಾತನಾಡಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕರು ವ್ಯಾಪಕ ವಾಗ್ದಾಳಿ ನಡೆಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿರುವ ಮಲ್ಲಿಕಾರ್ಜುನ ಖರ್ಗೆ ಪುತ್ರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರು, 'ಆರಗ ಜ್ಞಾನೇಂದ್ರ ಅವರೇ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆಯ ಮಾತು' ಎಂದು ತಿಳಿಸಿದ್ದಾರೆ.

ಸುಟ್ಟು ಕರಕಲಾಗಿದ್ದು ನಿಮ್ಮ ಬುದ್ದಿಯೇ ಹೊರತು ಕಲ್ಯಾಣ ಕರ್ನಾಟಕದ ಜನರಲ್ಲ. ಶತಶತಮಾನಗಳಿಂದ ವರ್ಣಾಶ್ರಮದ ಹೆಸರಲ್ಲಿ ಶೋಷಣೆ ನಡೆಸಿ ಶ್ರಮಜೀವಿಗಳ ಬೆವರಿನಲ್ಲಿ ಬಿಟ್ಟಿ ತಿಂದವರ ಚರ್ಮ ಬೆಳ್ಳಗಿರಬಹುದು, ಸ್ವಾಭಿಮಾನದಿಂದ ದುಡಿದು ತಿನ್ನುವವರ ಮೈ ಬಿಸಿಲಲ್ಲಿ ಸುಟ್ಟಿರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.
'ಆರಗ ಜ್ಞಾನೇಂದ್ರ ಅವರು ಒಂದೇ ಒಂದು ದಿನ ಮಣ್ಣು ಹೊತ್ತರೆ ಅವರ ಮೈಬಣ್ಣವೂ ಕಪ್ಪಗಾಗುತ್ತದೆ. ಮನುಸ್ಮೃತಿಯ ವರ್ಣಾಶ್ರಮವನ್ನು ಅಪ್ಪಿ ಒಪ್ಪಿ ಮುದ್ದಾಡುವ ಬಿಜೆಪಿಗೆ ದಲಿತರ ರಾಜಕೀಯ ಏಳಿಗೆಯ ಬಗ್ಗೆ ತೀವ್ರ ಅಸಹನೆ ಇರುವುದು ಇಂತಹ ಮಾತುಗಳಿಂದ ಹೊರಬರುತ್ತವೆ. ಬಿಜೆಪಿಯ ಈ ಅಸಹನೆ ಬಿಜೆಪಿಯನ್ನೇ ಸುಟ್ಟು ಕರಕಲು ಮಾಡುತ್ತದೆ, ಏಕೆಂದರೆ ಇದು ಮನುಸ್ಮೃತಿಯ ಕಾಲವಲ್ಲ, ಬಾಬಾ ಸಾಹೇಬರ ಸಂವಿಧಾನದ ಕಾಲ' ಎಂದು ಹೇಳಿದ್ದಾರೆ.

ಸಂತೋಷ್ ಲಾಡ್ ವಾಗ್ದಾಳಿ
ನಮ್ಮ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಹಿರಿಯ ನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಕೀಳಾಗಿ ಟೀಕಿಸಿರುವ ಬಿಜೆಪಿಯ ಆರಗ ಜ್ಞಾನೇಂದ್ರ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ.ಶಿಸ್ತಿನ ಪಕ್ಷದವರೆಂದು ಹೇಳಿಕೊಳ್ಳುವ ರಾಜ್ಯದ ಮಾಜಿ ಗೃಹ ಸಚಿವರೊಬ್ಬರು ಇಷ್ಟೊಂದು ನಿಕೃಷ್ಠವಾಗಿ ಮಾತಾಡುತ್ತಾರೆಂದರೆ ಇದು ಅವರಷ್ಟೇ ಅಲ್ಲ ಅವರ ಪಕ್ಷದ ಮನಸ್ಥಿತಿಗೆ ತಾಜಾ ಉದಾಹರಣೆ ಎಂದು ಸಂತೋಷ್ ಲಾಡ್ ಟ್ವೀಟ್ ಮಾಡಿದ್ದಾರೆ.












Click it and Unblock the Notifications