KPSC; ನ. 5ರ ಪರೀಕ್ಷೆ ದಿನಾಂಕ ಬದಲಾವಣೆಗೆ ಸಚಿವರ ಪತ್ರ
ಬೆಂಗಳೂರು, ಅಕ್ಟೋಬರ್ 25; ಕರ್ನಾಟಕ ಲೋಕಸೇವಾ ಆಯೋಗ ನವೆಂಬರ್ 5ರಂದು ಒಂದೇ ದಿನ ವಿವಿಧ ಇಲಾಖೆಗೆ ನೇಮಕಾತಿಯ ಸ್ಪರ್ಧಾತ್ಮಕ ಪರೀಕ್ಷೆಗೆ ದಿನಾಂಕ ನಿಗದಿಗೊಳಿಸಿದೆ. ಆದ್ದರಿಂದ ಅಭ್ಯರ್ಥಿಗಳು ದಿನಾಂಕ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಅಭ್ಯರ್ಥಿಗಳು ಈ ಕುರಿತು ಸಚಿವರಿಗೂ ಸಹ ಮನವಿ ಮಾಡುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ & ಜೈವಿಕ ತಂತ್ರಜ್ಞಾನ ಸಚಿವರಾದ ಪ್ರಿಯಾಂಕ್ ಖರ್ಗೆ ಪರೀಕ್ಷೆ ದಿನಾಂಕದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರವನ್ನು ಬರೆದಿದ್ದಾರೆ.

ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಸಚಿವರು, ರಾಜ್ಯ ಲೋಕಸೇವಾ ಆಯೋಗವು ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರ ಹುದ್ದೆಗೆ 242, ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳು 47, ಮತ್ತು ರಾಜ್ಯ ಪೊಲೀಸ್ ಇಲಾಖೆಯು ಕೂಡ, ಖಾಲಿ ಇರುವ 454 ಸಿವಿಲ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ದಿನಾಂಕ 05/11/2023 ರ ಭಾನುವಾರದಂದು ಒಂದೇ ದಿನ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಆದರೆ ಕಳೆದ 5 ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗದೇ ಸಾವಿರಾರು ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಹಾಗೂ ವಯೋಮಿತಿಗೆ ತಕ್ಕಂತೆ ಸರಿಯಾಗಿ ಉದ್ಯೋಗ ಸಿಗದೇ ಈಗಾಗಲೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಪ್ರತಿಯೊಂದು ನೇಮಕಾತಿಗೂ ಅರ್ಜಿ ಸಲ್ಲಿಸಿ ವರ್ಷಗಟ್ಟಲೇ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಒಂದೇ ದಿನ ಮೂರು ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಿರುವುದರಿಂದ ಗೊಂದಲ ಉಂಟಾಗಿ, ಅಭ್ಯರ್ಥಿಗಳು ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಕ್ರಮ ವಹಿಸುವಂತೆ ನನಗೆ ಮನವಿ ಸಲ್ಲಿಸಿರುತ್ತಾರೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಯುವಕರು ನವೆಂಬರ್ 3ರಂದು ಪೊಲೀಸ್ ಇಲಾಖೆ ಪರೀಕ್ಷೆಗಳನ್ನು ಬರೆದರೆ ಬೇರೆ ಸರ್ಕಾರಿ ಹುದ್ದೆಗಳ ನೇಮಕಾತಿಗಳ ಅವಕಾಶದಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ಕುರಿತು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಬೇರೆ ಬೇರೆ ಪರೀಕ್ಷೆಗಳಿಗೆ ಪ್ರತ್ಯೇಕವಾಗಿ ದಿನಾಂಕವನ್ನು ನಿಗದಿ ಪಡಿಸುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಸಚಿವರ ಪತ್ರದ ವಿವರ; ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಸಚಿವರು ತಮ್ಮ ಪತ್ರದಲ್ಲಿ ಸರ್ಕಾರಿ ನೌಕರಿ ಸೇರಬೇಕೆಂದು ರಾಜ್ಯದ ಯುವಕ-ಯುವತಿಯರು ಪ್ರತಿಯೊಂದು ನೇಮಕಾತಿಗೂ ಅರ್ಜಿ ಸಲ್ಲಿಸಿ, ವರ್ಷಗಟ್ಟಲೇ ತಯಾರಿ ನಡೆಸಿದ ಅಭ್ಯರ್ಥಿಗಳಿಗೆ ಒಂದೇ ದಿನ ಮೂರು ಹುದಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಿಗಧಿಗೊಳಿಸಿರುವುದರಿಂದ ಗೊಂದಲ ಉಂಟಾಗಿ, ಹಲವಾರು ಅಭ್ಯರ್ಥಿಗಳು ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಕ್ರಮ ವಹಿಸುವಂತೆ ನನಗೆ ಮನವಿ ಸಲ್ಲಿಸಿರುತ್ತಾರೆ.
ಲೋಕಸೇವಾ ಆಯೋಗವು ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿನ ಲೆಕ್ಕ ಸಹಾಯಕರ ಹುದ್ದೆಗೆ 242, ಸಹಕಾರ ಸಂಘಗಳ ನಿರೀಕ್ಷಕರ ಹುದ್ದೆಗಳು 47, ಮತ್ತು ರಾಜ್ಯ ಪೊಲೀಸ್ ಇಲಾಖೆಯು ಕೂಡ ಖಾಲಿ ಇರುವ 454 ಸಿವಿಲ್ ಕಾನ್‌ಸ್ಟೇಬಲ್ ಹುದ್ದೆಗಳಿಗೆ ದಿನಾಂಕ 05/11/2023 ರ ಭಾನುವಾರದಂದು ಸ್ಪರ್ಧಾತ್ಮಕ ಪರೀಕ್ಷೆ ನಿಗದಿಗೊಳಿಸಲಾಗಿದೆ.
ಆದರೆ ಕಳೆದ 05 ವರ್ಷದಿಂದ ಹಲವಾರು ಸರ್ಕಾರಿ ಹುದ್ದೆಗಳಿಗೆ ನೇಮಕಾತಿಯಾಗದೇ ಸಾವಿರಾರು ಅಭ್ಯರ್ಥಿಗಳು ವಿದ್ಯಾರ್ಹತೆಗೆ ಹಾಗೂ ವಯೋಮಿತಿಗೆ ತಕ್ಕಂತೆ ಸರಿಯಾಗಿ ಉದ್ಯೋಗ ಸಿಗದೇ ಈಗಾಗಲೇ ಅನ್ಯಾಯಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಲಕ್ಷಾಂತರ ಪ್ರತಿಭಾನ್ವಿತ ಅಭ್ಯರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಕರ್ನಾಟಕ ಲೋಕಸೇವಾ ಆಯೋಗದಿಂದ ನಿಗಧಿಯಾಗಿರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೇರೆ ಬೇರೆ ದಿನಾಂಕಗಳಲ್ಲಿ ನಿಗದಿ ಮಾಡಲು ಕೋರಲಾಗಿದೆ ಎಂದು ವಿವರಣೆ ನೀಡಿದ್ದಾರೆ.












Click it and Unblock the Notifications