Gruha Jyothi scheme; ಶನಿವಾರ ಕಲಬುರಗಿಯಲ್ಲಿ ಯೋಜನೆಗೆ ಚಾಲನೆ

ಕಲಬುರಗಿ, ಆಗಸ್ಟ್ 04; ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ್ದ 'ಗೃಹಜ್ಯೋತಿ' ಯೋಜನೆ ಜಾರಿಗೆ ಬಂದಿದೆ. ಶನಿವಾರ ಯೋಜನೆಯ ಫಲಾನುಭವಿಗಳಿಗೆ ಆಗಸ್ಟ್‌ನ ಶೂನ್ಯ ಪಾವತಿಯ ವಿದ್ಯುತ್ ಬಿಲ್ ನೀಡುವ ಮೂಲಕ ಅಧಿಕೃತವಾಗಿ ಯೋಜನೆಯನ್ನು ಕಲಬುರಗಿಯಲ್ಲಿ ಉದ್ಘಾಟಿಸಲಾಗುತ್ತದೆ.

ಕಲಬುರಗಿ ನಗರದ ಎನ್. ವಿ. ಮೈದಾನದಲ್ಲಿ ಶನಿವಾರ ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಲಿದ್ದಾರೆ. 10 ಫಲಾನುಭವಿಗಳಿಗೆ ಸಾಂಕೇತಿಕವಾಗಿ ಶೂನ್ಯ ದರದ ವಿದ್ಯುತ್ ಬಿಲ್ ನೀಡುವ ಯೋಜನೆ ಉದ್ಘಾಟಿಸಲಿದ್ದಾರೆ. ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

Priyank Kharge Inspected Gruha Jyothi Inauguration Function Preparations

ಶುಕ್ರವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐಟಿ&ಬಿಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಎನ್. ವಿ. ಮೈದಾನಕ್ಕೆ ಭೇಟಿ ನೀಡಿ 'ಗೃಹಜ್ಯೋತಿ' ಕಾರ್ಯಕ್ರಮದ ಉದ್ಘಾಟನೆ ಸಿದ್ಧತೆಗಳನ್ನು ವೀಕ್ಷಣೆ ಮಾಡಿದರು.

ಕಲಬುರಗಿ ಜಿಲ್ಲಾಡಳಿತ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಚಿವರು ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನಮ್, ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ 'ಗೃಹಜ್ಯೋತಿ' ಉದ್ಘಾಟನಾ ಸಮಾರಂಭದ ವೇದಿಕೆ ಹಾಗೂ ಇತರೆ ತಯಾರಿಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡರು.

ಎಷ್ಟು ಫಲಾನುಭವಿಗಳು; ಸಚಿವ ಪ್ರಿಯಾಂಕ್ ಖರ್ಗೆ ಬಳಿಕ ಕಲಬುರಗಿ ಜಿಲ್ಲಾಧಿಕಾರಿ‌ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. "ಗೃಹಜ್ಯೋತಿ ಯೋಜನೆಗೆ ಕಲಬುರಗಿ ಜಿಲ್ಲೆಯಲ್ಲಿ 4,69,029 ಫಲಾನುಭವಿಗಳು ಸೇರಿದಂತೆ ರಾಜ್ಯದಲ್ಲಿ ಒಟ್ಟು 1,41,23,240 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ" ಎಂದರು.

"ಕಳೆದ‌ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಂದ ಅಭಿಪ್ರಾಯ ಸಂಗ್ರಹಿಸಿದ ನಂತರ ಕಾಂಗ್ರೆಸ್‌ ಪಕ್ಷ ಪ್ರಣಾಳಿಕೆ ತಯಾರಿಸಿತ್ತು. 5 ಪ್ರಮುಖ ಗ್ಯಾರಂಟಿಗಳನ್ನು ಕೂಡಾ ಘೋಷಿಸಲಾಯಿತು. ಅದರಂತೆ ಒಂದೊಂದೆ ಗ್ಯಾರಂಟಿಗಳನ್ನು ಜಾರಿಗೊಳಿಸಲಾಗುತ್ತಿದ್ದು, ಗೃಹಜ್ಯೋತಿ ಯೋಜನೆಯನ್ನು ಶನಿವಾರ ಕಲುಬುರಗಿಯಲ್ಲಿ ಲೋಕಾರ್ಪಣೆ ಮಾಡಲಾಗುವುದು" ಎಂದು ಸಚಿವರು ಹೇಳಿದರು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಸಚಿವರು, "ಗೃಹಜ್ಯೋತಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಹಾಗೂ ರಾಜ್ಯಸಭಾ ವಿರೋಧಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ‌ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ‌ ಇಂಧನ ಸಚಿವ‌ ಕೆ. ಜೆ. ಜಾರ್ಜ್ ಸೇರಿದಂತೆ ಹಲವರು ಉಪಸ್ಥಿತರಿರುತ್ತಾರೆ" ಎಂದರು.

"ಈ ಕಾರ್ಯಕ್ರಮಕ್ಕೆ ಸುಮಾರು 20 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಸಮಾರಂಭದಲ್ಲಿ 10 ಜನರಿಗೆ ಸಾಂಕೇತಿಕವಾಗಿ ಶೂನ್ಯ ಬಿಲ್ ಕೊಡಲಾಗುವುದು. ಈ ಯೋಜನೆಯನ್ನು ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಲೋಕಾರ್ಪಣೆ ಮಾಡಲಿದ್ದಾರೆ" ಎಂದು ವಿವರಣೆ ನೀಡಿದರು.

ಶನಿವಾರ ನಡೆಯಲಿರುವ ಕಾರ್ಯಕ್ರಮದ ಯಶಸ್ಸಿಗೆ ಕಲಬುರಗಿ ಜಿಲ್ಲಾಡಳಿತ 14 ಸಮಿತಿಗಳನ್ನು ರಚನೆ ಮಾಡಿದೆ. ಸಮಿತಿ ಸದಸ್ಯರಿಗೆ ನೀಡಲಾದ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರು ಕುಳಿತುಕೊಳ್ಳಲು ಆಸನ, ಊಟ ಹಾಗೂ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.

ಕರ್ನಾಟಕ ಸರ್ಕಾರದ 'ಗೃಹಜ್ಯೋತಿ' ಯೋಜನೆಗೆ ಹೆಸರು ನೋಂದಣಿ ಮಾಡಲು ಯಾವುದೇ ಗಡುವು ನೀಡಿಲ್ಲ. ಆದರೆ, ಜುಲೈ 27ರೊಳಗೆ ಹೆಸರು ನೋಂದಣಿ ಮಾಡಿದವರಿಗೆ ಆಗಸ್ಟ್‌ನಲ್ಲಿ ಶೂನ್ಯ ದರದ ವಿದ್ಯುತ್ ಬಿಲ್ ಬರುತ್ತಿದೆ. ಈಗಾಗಲೇ ಬಿಲ್ ಮನೆ-ಮನೆಗೆ ತಲುಪುತ್ತಿದೆ. ಯೋಜನೆಗೆ ಶನಿವಾರ ಅಧಿಕೃತ ಚಾಲನೆ ಸಿಗಲಿದೆ.

ಜುಲೈ 28ರ ಬಳಿಕ ಹೆಸರು ನೋಂದಣಿ ಮಾಡಿದವರು ಆಗಸ್ಟ್‌ ತಿಂಗಳ ಯೋಜನೆ ಫಲಾನುಭವಿಯಾಗಲಿದ್ದು, ಸೆಪ್ಟೆಂಬರ್‌ನಲ್ಲಿ ಶೂನ್ಯ ದರದ ಬಿಲ್ ಪಡೆಯಲಿದ್ದಾರೆ. ಎಸ್ಕಾಂಗಳು ಸಹ ಯಾರು ನೋಂದಣಿ ಮಾಡಿಲ್ಲ ಎಂಬ ಮಾಹಿತಿ ಕಲೆ ಹಾಕಿ, ನೋಂದಣಿ ಮಾಡಿಸುವ ಕೆಲಸ ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+