ಹಾಸನದ ನೊಂದ ಮಹಿಳೆಯರ ಮನೆಗೆ ಅಮಿತ್ ಶಾ, ನಡ್ಡಾ ಯಾವಾಗ ಹೋಗುತ್ತಾರೆ?: ಪ್ರಿಯಾಂಕ್ ಖರ್ಗೆ
ಕಲಬುರಗಿ, ಏಪ್ರಿಲ್ 30: ಹುಬ್ಬಳ್ಳಿ ಘಟನೆ ಬಗ್ಗೆ ಹೋರಾಟ ನಡೆಸಿ ಈಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಹಗರಣದಲ್ಲಿ ಸುಮ್ಮನಿರುವ ಬಿಜೆಪಿ ನಾಯಕರ ಧೋರಣೆಯನ್ನು ಕಟುವಾಗಿ ಟೀಕಿಸಿದ ಪ್ರಿಯಾಂಕ್ ಖರ್ಗೆ, ಹಾಸನದ ಮೂರು ಸಾವಿರ ನೊಂದ ಮಹಿಳೆಯರ ಮನೆಗೆ ಅಮಿತ್ ಶಾ ಹಾಗೂ ನಡ್ಡಾ ಯಾವಾಗ ಹೋಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿ ಅವರು, ಪ್ರಜ್ವಲ್ ಗೆ ಹಾಕುವ ಒಂದೊಂದು ಓಟು ನನ್ನ ಕೈಬಲ ಪಡಿಸಿದಂತೆ ಎಂದ ಮೋದಿ ಅವರಿಗೆ ಪ್ರಜ್ವಲ್ ಮಹಿಳೆರಿಗೆ ಕಿರುಕುಳ ನೀಡಿದ್ದಾರೆ ಅವರಿಗೆ ಟಿಕೇಟ್ ನೀಡಬೇಡಿ ಎಂದು ಅವರ ವಿರುದ್ದ ಪತ್ರ ಬರೆದಿದ್ದು ಗೊತ್ತಿರಲಿಲ್ಲವಾ? ಬಿಜೆಪಿಯವರೇ, ನಿಮ್ಮ ನಾಯಕರಾದ ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ ಹಾಗೂ ಶೋಭಕ್ಕ ಅವರಿಂದ ಬಿಸಿಲಲ್ಲಿ ಪ್ರತಿಭಟನೆ ಮಾಡಿಸಿ ಆಮೇಲೆ ನಮ್ಮೊಂದಿಗೆ ಚರ್ಚೆಗೆ ಬನ್ನಿ ಎಂದು ಅಹ್ವಾನಿಸಿದರು.

ಸೋಲಿನ ಭೀತಿಯಿಂದಾಗಿ ಖರ್ಗೆ ಕಲಬುರಗಿಗೆ ಪದೇ ಪದೇ ಬರುತ್ತಿದ್ದಾರೆ ಎನ್ನುವ ಸಂಸದ ಉಮೇಶ್ ಜಾಧವ ಹೇಳಿಕೆ ಕುರಿತು ಮಾತನಾಡಿ, ಅವರು ಮಲ್ಲಿಕಾರ್ಜುನ ಖರ್ಗೆ ಅವರು ಎರಡು ಸಲ ಕಲಬುರಗಿಯಿಂದ ಲೋಕಸಭೆ ಸದಸ್ಯರಾಗಿದ್ದವರು. ಈಗ ರಾಜ್ಯಸಭೆ ವಿರೋಧ ಪಕ್ಷದ ನಾಯಕರು. ಅವರು ಕಲಬುರಗಿಗೆ ಬರಲು ಚಿಂಚೋಳಿ ಎಂಪಿ ಅವರ ಅನುಮತಿ ಬೇಕಿಲ್ಲ ಎಂದು ತಿರುಗೇಟು ನೀಡಿದರು.ಚಿಂಚೋಳಿ ಎಂಪಿ ಯವರೇ ನೀವು ಕೂಡಾ ಮೋದಿ, ಅಮಿತ್ ಶಾ, ಯಡಿಯೂರಪ್ಪ, ವಿಜಯೇಂದ್ರ, ಸಿ.ಟಿ.ರವಿ ಸೇರಿದಂತೆ ಹಲವಾರು ನಾಯಕರನ್ನು ಕರೆಸಿದ್ದೀರಲ್ಲ ಯಾಕೆ? ನಿಮಗೂ ಸೋಲಿನ ಭೀತಿ ಆವರಿಸಿದೆಯಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಹತಾಶೆರಾಗಿದ್ದಾರೆ, ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಕಲಬುರಗಿಗೆ ಬರುತ್ತಿದ್ದಾರೆ. ಪ್ರಿಯಾಂಕ್ ಹಾಗೂ ಶರಣಪ್ರಕಾಶ ಪಾಟೀಲ್ ಗ್ರಾಮಪಂಚಾಯತಗಳಿಗೆ ಹೋಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಜಾಧವ ಹೇಳುತ್ತಾರೆ. ಹೌದು, ಪ್ರತಿಯೊಬ್ಬರು ಗೆಲ್ಲಬೇಕೆಂದೆ ಪ್ರಚಾರ ಮಾಡುತ್ತಾರೆ. ಚುನಾವಣೆಯನ್ನು ಚುನಾವಣೆಯನ್ನಾಗಿ ಎದುರಿಸಿ, ವೈಯಕ್ತಿಕ ಟೀಕೆ ಮಾಡಿದರೆ ನಾವೂ ಕೂಡಾ ಹಾಗೆ ಉತ್ತರ ಕೊಡಬೇಕಾಗುತ್ತದೆ. ಬೇವಿನ ಬೀಜ ಬಿತ್ತಿ ಮಾವು ಬೆಳೆಯಲು ಆಗುವುದಿಲ್ಲ ಎಂದರು.
ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತಿದೆ ಎನ್ನುವ ಬಿಜೆಪಿ ನಾಯಕರ ಮಾತಿಗೆ ಸಿಡಿಮಿಡಿಗೊಂಡ ಖರ್ಗೆ, ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಮ್ಮ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ಜಾಧವ್ ತಮ್ಮ ಮಗನನ್ನು ಚಿಂಚೋಳಿ ಶಾಸಕನನ್ನಾಗಿ ಮಾಡಿಲ್ಲವೇ? ಇದೇ ಪ್ರಶ್ನೆಯನ್ನು ಯಡಿಯೂರಪ್ಪ, ಅಮಿತ್ ಶಾ ಮುಂದೆ ಮಾತನಾಡಲಿ ಎಂದರು. "ಹಳ್ಳಿಯಿಂದ ದಿಲ್ಲಿಯವರೆಗೆ ಬಿಜೆಪಿ ನಾಯಕರು ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಇವರ ಡಿಎನ್ ಎ ಟೆಸ್ಟ್ ಮಾಡಿಸಬೇಕಿದೆ. ನಾನೇ ನನ್ನ ಸ್ವಂತ ಖರ್ಚಿನಲ್ಲಿಯೇ ವ್ಯವಸ್ಥೆ ಮಾಡಿಸುತ್ತೇನೆ ಬಿಜೆಪಿ ನಾಯಕರು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಬಹಿರಂಗ ಚರ್ಚೆಗೆ ಜಾಧವ್ ಆಹ್ವಾನ ನೀಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿಷಯಾಧಾರಿತ ಚರ್ಚೆ ಮಾಡೋಣ ಬನ್ನಿ. ನಾನೇ ವೇದಿಕೆ ಸಿದ್ದಪಡಿಸುತ್ತೇನೆ. ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಜ್ ನಂತಹ ಯೋಜನೆಗಳು ಯಾಕೆ ವಾಪಸ್ ಹೋದವು ಎನ್ನುವುದಕ್ಕೆ ಅಲ್ಲಿ ನೀವು ಉತ್ತರ ಕೊಡಿ. ಕಾನೂನು ಸುವ್ಯವಸ್ಥೆ ಕೆಟ್ಟಿದೆ ಎಂದಿದ್ದೀರಿ, ಕಲಬುರಗಿಯಲ್ಲಿ ನಿಮ್ಮನ್ನು ಹೊರತುಪಡಿಸಿದರೆ ಎಲ್ಲರೂ ಆರಾಮಾಗಿ ಓಡಾಡುತ್ತಿದ್ದಾರೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಒಬ್ಬ ಉಸ್ತುವಾರಿ ಸಚಿವರನ್ನ ತರಲು ಯೋಗ್ಯತೆ ಇರಲಿಲ್ಲ. ಮೂರು ವರ್ಷದಲ್ಲಿ ಮೂವರು ಸಚಿವರು ಬದಲಾದರು. ನೀವು ನಮಗೆ ಪಾಠ ಮಾಡಲು ಬರುತ್ತೀರಾ?" ಎಂದರು.












Click it and Unblock the Notifications