ಪ್ರವೀಣ್ ನೆಟ್ಟಾರು ಹತ್ಯೆ: SDPI, PFIಗೆ ಸೇರಿದ ಮೂವರ ಬಂಧನ
ಬೆಂಗಳೂರು, ನ.06: ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸದಸ್ಯ ಪ್ರವೀಣ್ ನೆಟ್ಟಾರು ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶನಿವಾರ ಮೂವರನ್ನು ಬಂಧಿಸಿದೆ.
ರಾಜ್ಯದ ದಕ್ಷಿಣ ಕನ್ನಡ, ಹುಬ್ಬಳ್ಳಿ ಮತ್ತು ಮೈಸೂರಿನ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐಗೆ ಸೇರಿದ ಮೂವರನ್ನು ಎನ್‌ಐಎ ಬಂಧಿಸಿದೆ.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಕಾರ್ಯದರ್ಶಿ ಕೆ ಇಸ್ಮಾಯಿಲ್ ಶಾಫಿ ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮುಖಂಡ ಇಬ್ರಾಹಿಂ ಶಾ ಅವರನ್ನು ಬೆಳ್ಳಾರೆಯಲ್ಲಿ ಬಂಧಿಸಿದೆ. ಎಸ್‌ಡಿಪಿಐ ಮುಖಂಡ ಕೆ ಮಹಮ್ಮದ್ ಇಕ್ಬಾಲ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಶೋಧ ಕಾರ್ಯಚರಣೆ ವೇಳೆ ಬಂಧಿತರ ಮನೆಗಳಿಂದ ಡಿಜಿಟಲ್ ಸಾಧನಗಳು ಮತ್ತು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ. ಪ್ರವೀಣ್ ನೆಟ್ಟಾರು ಹತ್ಯೆಯ ಸಂಚಿನಲ್ಲಿ ಪಾಲ್ಗೊಂಡಿದ್ದಕ್ಕಾಗಿ ಈ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎನ್ಐಎ ತಿಳಿಸಿದೆ.
ಬಿಜೆಪಿ ಯುವ ಘಟಕದ ಮುಖಂಡನಾದ ಪ್ರವೀಣ್ ಅವರನ್ನು ಜುಲೈ 26 ರಂದು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನಲ್ಲಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು. ಸಮೀಪದ ಗ್ರಾಮದಲ್ಲಿ ಮಸೂದ್ ಎಂಬ 18 ವರ್ಷದ ಯುವಕನ ಕೊಲೆಯಾದ ಬೆನ್ನಲ್ಲೇ ಈ ದಾಳಿ ನಡೆದಿತ್ತು. ಇದರಿಂದಾಗಿ ಈ ಕೊಲೆಗಳು ಭಾರೀ ಚರ್ಚೆಗೆ ಕಾರಣವಾಗಿತ್ತು.
ಪ್ರವೀಣ್ ಹತ್ಯೆಯ ಮರುದಿನ ಜುಲೈ 28 ರಂದು ಸುರತ್ಕಲ್‌ನಲ್ಲಿ ಪ್ರವೀಣ್ ಮೇಲಿನ ಹಲ್ಲೆಗೆ ಪ್ರತೀಕಾರವಾಗಿ ಫಾಜಿಲ್ ಎಂಬ ವ್ಯಕ್ತಿಯನ್ನು ಬರ್ಬರವಾಗಿ ಕೊಂದಿದ್ದರು. ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತಿಕಾರವಾಗಿ ಆರೋಪಿಗಳು ಫಾಜಿಲ್ ಹತ್ಯೆಗೆ ಯೋಜನೆ ರೂಪಿಸಿದ್ದರು ಎಂದು ಫಾಜಿಲ್ ಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಸಂಸ್ಥೆ ಆಗಸ್ಟ್‌ನಲ್ಲಿ ಪ್ರಕರಣದ ಐವರು ಪ್ರಮುಖ ಆರೋಪಿಗಳನ್ನು ಆರು ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿತ್ತು.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ಅವರ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದ್ದರು.












Click it and Unblock the Notifications