Siddaramaiah's Watch: ಹತಾಶ ಸಿದ್ದರಾಮಯ್ಯರ 'ಹುಬ್ಲೋಟ್ ವಾಚ್' ಕಥೆ ಮುಗಿದಿಲ್ಲ: ಪ್ರಹ್ಲಾದ್ ಜೊಶಿ
ಬೆಂಗಳೂರು, ಸೆಪ್ಟಂಬರ್ 26: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರು ಹತಾಶರಾಗಿದ್ದಾರೆ. ಹತಾಶರಾಗಿ ಅವರು ವಿವೇಚನಾರಹಿತರಾಗಿ ಏನೇನೊ ಮಾತನಾಡುತ್ತಿದ್ದಾರೆ. ಕೇವಲ ತಮ್ಮ ಕುಟುಂಬದ ಹಗರಣವನ್ನು ತನಿಖೆಗೆ ಒಳಪಡಿಸಿದಕ್ಕೆ ಇಷ್ಟು ಹತಾಶರಾದರೆ ಹೇಗೆ?. ನಿಮ್ಮ ವಾಚಿನ ಕಥೆ ಇನ್ನೂ ಮುಗಿದಿಲ್ಲ ಎಂದು ಕೆಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರು ಇತ್ತೀಚಿನ ಹೇಳಿಕೆಗಳ ಕುರಿತು ವಾಗ್ದಾಳಿ ನಡೆಸಿ ಟ್ವೀಟ್ (ಎಕ್ಸ್) ಮಾಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಕೆಲವು ಹಗರಣ, ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ.

ಸಿದ್ಧರಾಮಯ್ಯ ಪಕ್ಷದ ಅಧಿನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೇ ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ. ಅಂಥದರಲ್ಲಿ ನೀವು ನಿಷ್ಠೆಯಿಂದ ಹಗಲು ರಾತ್ರಿ ದೇಶದ ಅಭಿವೃದ್ಧಿಗೆ, ಜನತೆಯ ಒಳಿತಿಗೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುವ ನೈತಿಕತೆ ನಿಮಗಿಲ್ಲ ಎಂದು ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದರು.
'ಹುಬ್ಲೋಟ್ ವಾಚ್' ಕಥೆ ಇನ್ನೂ ಮುಗಿದಿಲ್ಲ: ಜೋಶಿ
ಸಿದ್ದರಾಮಯ್ಯನರೇ ನಿಮ್ಮ ಹುಬ್ಲೋಟ್ ವಾಚ್ ಕಥೆ ಮುಗಿದು ಹೋದ ಅಧ್ಯಾಯ ಅಲ್ಲ. ನಿಮ್ಮ ದುಬಾರಿ ವಾಚಿನ ಕಥೆಗಳು, ಅದರ ಕುರಿತ ಸಾಕಷ್ಟು ವಿಚಾರಗಳು ಹೊರಬರಬೇಕಿದೆ. ಆರೋಪಗಳನ್ನು ಸಾಬೀತುಪಡಿಸಬಹುದು ಅಂತಲೇ ನೀವು ಲೋಕಾಯುಕ್ತ ಅಧಿಕಾರವನ್ನು ಕಸಿದುಕೊಂಡು, ನಂತರ ಸ್ಥಾಪಿಸಿದ್ದು ಏನನ್ನು ಎಂದು ಮರೆತಿರುವಿರಾ? ಎಂದು ಅವರು ಮಾರ್ಮಿಕವಾಗಿ ಮಾತನಾಡಿದ್ದಾರೆ.
ಇನ್ನೂ ಅರ್ಕಾವತಿ ಲೇಔಟ್ ವಿಚಾರವಾಗಿ ನೀಡಿದ ನ್ಯಾಯಾಧೀಶ ಕೆಂಪಣ್ಣನವರು ವರದಿ ಆಧಾರವಾಗಿ ಯಾವ ಕ್ರಮ ಕೈಗೊಳ್ಳಲಾಯಿತು?. ರಾಜ್ಯದಲ್ಲಿ SIT ತಂಡದ ರಚನೆಯಂತೂ ಸಿದ್ದರಾಮಯ್ಯ ಇನ್ ಟ್ರಬಲ್ (Siddaramaiah In Trouble) ಅಂದರೆ ಸೂಕ್ತ ಎಂಬುದು ರಾಜ್ಯದ ಜನರ ಅಭಿಪ್ರಾಯ ಎಂದು ಟೀಕಿಸಿದರು.
ಸಾಲು ಸಾಲು ಭ್ರಷ್ಟಾಚಾರ: ಜನ ಕ್ಷಮಿಸಲ್ಲ
ರಾಜ್ಯದ ವಾಲ್ಮೀಕಿ ಸಮುದಾಯದ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದ ನೂರಾರು ಕೋಟಿ ಹಣ ಮಾಡಿ ಸಿಕ್ಕಿ ಬಿದ್ದಿರುವುದು ನಿಮ್ಮ ಪಕ್ಷದ ನಿಮ್ಮ ಸರ್ಕಾರದ ನಿಮ್ಮ ಆಪ್ ಮಂತ್ರಿಯೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ ಅಭಿವೃದ್ಧಿಗೆ ಇಟ್ಟಿದ್ದ ಅನುದಾನ ದುರ್ಬಳಕೆ ಮಾಡಿರುವುದನ್ನು ಈ ರಾಜ್ಯದ ಜನರು ಕ್ಷಮಿಸುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜೀನಾಮೆ ನೀಡಿದ ತನಿಖೆಗೆ ಸಹಕರಿಸಿ: ಜೋಶಿ ಆಗ್ರಹ
ಸಿದ್ದರಾಮಯ್ಯನವರೇ ಹತಾಶೆಯಲ್ಲಿ ವಿನಾಕಾರಣ ಏನೇನೋ ಮಾತನಾಡಲು ಹೋಗಿ ನಗೆಪಾಟಲಿಗೆ ಗುರಿಯಾಗಬೇಡಿ. ಈಗಲಾದರೂ ಈ ಎಲ್ಲಾ ತಪ್ಪುಗಳ ನೈತಿಕ ಜವಾಬ್ದಾರಿ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾನೂನಿಗೆ ತಲೆ ಬಾಗಬೇಕು. ಹಗರಣದ ವಿರುದ್ಧ ನಡೆಯುವ ತನಿಖೆಗೆ ಸಹಕರಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರದ ಪೋಷಕತ್ವ ವಹಿಸಿದೆ ಎನ್ನಲು ಇದಕ್ಕಿಂತ ಪುರಾವೆ ಬೇಕೆ?. ಕರ್ನಾಟಕ ಹೈಕೋರ್ಟ್ ತೀರ್ಪಿಗೆ ಪ್ರತಿಭಟನೆ ಮಾಡಿ ಅಗೌರವ ತೋರಿದ್ದಲ್ಲದೆ, ಈಗ ತನಿಖೆಗೆ ಅನುಮತಿಯನ್ನು ಕೂಡ ರಾಜ್ಯ ಸರ್ಕಾರ ನಿಷೇಧಿಸಿದೆ.
ತಾನು ನಿರಪರಾಧಿ ಯಾವ ತನಿಖೆಗಾದರೂ ನಾನು ಹೆದರುವುದಿಲ್ಲ ಎಂದು ಕೊಚ್ಚಿಕೊಳ್ಳುವ ನಿಮ್ಮ ಯು ಟರ್ನ್ ಏಕೆ? ಎಂದು ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
'ಭ್ರಷ್ಟಾಚಾರ ನಮ್ಮ ಹಕ್ಕು' ಇದು ಕಾಂಗ್ರೆಸ್ ಗ್ಯಾರಂಟಿಯೇ?
ಸಂವಿಧಾನದ ಬಗ್ಗೆ ಭಾಷಣ ಮಾಡುವ ನೀವು ಸಂವಿಧಾನವನ್ನು ಹಿಡಿದು ಪೋಸ್ ಕೊಡುವ ರಾಹುಲ್ ಗಾಂಧಿ, ಸಂವಿಧಾನದ ಸಂರಕ್ಷಕರಾದ ರಾಜ್ಯಪಾಲರ ಬಗ್ಗೆ ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ. "ಭ್ರಷ್ಟಾಚಾರ ನಮ್ಮ ಹಕ್ಕು" ಇದು ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಯೇ? ಎಂದು ತಿವಿದರು.
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರು, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಹುದ್ದೆಯನ್ನು ಎರಡುವರೆ ಸಾವಿರ ಕೋಟಿ ರೂಪಾಯಿಗಳಿಗೆ ಹರಾಜು ಹಾಕಿ ಹಣ ಪೀಕಿದ್ದಾರೆ ಎಂಬ ಆರೋಪವನ್ನು ಸ್ವಪಕ್ಷದ ನಾಯಕರಿಂದಲೇ ಎದುರಿಸುತ್ತಿರುವ ಪ್ರಧಾನಿ ಮೋದಿಯವರಿಗೆ ಭ್ರಷ್ಟಾಚಾರ ಕುರಿತು ಮಾತನಾಡುವ ನೈತಿಕತೆ ಇದೆಯೇ ಎಂದು ತಿಳಿಸಿದರು. ಇದಕ್ಕೆ ಪ್ರಹ್ಲಾದ್ ಜೋಶಿಯವರು ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪಕ್ಷ ಮೇಲೆ ಕೇಳಿ ಬಂದ ಹಗರಣ, ಭ್ರಷ್ಟಾಚಾರಗಳನ್ನು ವಿವರಿಸಿ ವಾಗ್ದಾಳಿ ನಡೆಸಿದರು.












Click it and Unblock the Notifications