ಕಾಂಗ್ರೆಸ್ ಶಾಸಕರೊಬ್ಬರ ಷಡ್ಯಂತ್ರದಿಂದ ರೇವಣ್ಣ ಬಂಧನ: ಸತ್ಯ ಬಿಚ್ಚಿಟ್ಟ ಜೆಡಿಎಸ್ ನಾಯಕ
ಹಾಸನ, ಮೇ 06: ಲೋಕಸಭಾ ಚುನಾವಣಾ ಹೊತ್ತಲಿ ಹಾಸನ ಪೆನ್ ಡ್ರೈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಲೈಂಗಿಕ ದೌರ್ಜನ್ಯ ಆರೋಪ ಹಾಗೂ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಪ್ರಕರಣದಲ್ಲಿ ಎಸ್‌ಐಟಿ ಅಧಿಕಾರಿಗಳು ಮಾಜಿ ಸಚಿವ ಹೆಚ್.ಡಿ.ರೇವಣ್ಣರನ್ನು ಬಂಧಿಸಿದ್ದಾರೆ. ಇದರ ಹಿಂದೆ ಕಾಂಗ್ರೆಸ್ ಶಾಸಕರೊಬ್ಬರ ಕೈವಾಡವಿದೆ ಎಂದು ಮಾಜಿ ಶಾಸಕ, ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಲಿಂಗೇಶ್, ಯಾವುದೇ ತಪ್ಪು ಮಾಡದ ಮಾಜಿ ಸಚಿವ ಹಾಗೂ ಶಾಸಕ ಹೆಚ್ ಡಿ ರೇವಣ್ಣರನ್ನು ರಾಜಕೀಯ ಷಡ್ಯಂತ್ರದಿಂದ ವಿನಾಕಾರಣ ಬಂಧಿಸಲಾಗಿದೆ. ಇದರ ಹಿಂದೆ ಕೆ.ಆರ್.ನಗರದ ಶಾಸಕರೊಬ್ಬರ ಚಿತಾವಣೆಯಿದೆ ಎಂದು ಪರೋಕ್ಷವಾಗಿ ಶಾಸಕ ರವಿಶಂಕರ್ ವಿರುದ್ಧ ಆರೋಪ ಮಾಡಿದ್ದಾರೆ. ಹೆಚ್.ಡಿ.ರೇವಣ್ಣ ತಮ್ಮ ತಂದೆ-ತಾಯಿ ಆರೋಗ್ಯ ವಿಚಾರಿಸಲೆಂದು ದೇವೇಗೌಡರ ಮನೆಗೆ ಹೋಗಿದ್ದರು ಹೊರತು ಅವರ ಮನೆಯಲ್ಲಿ ಅವಿತು ಕೂತಿರಲಿಲ್ಲ ಎಂದು ಲಿಂಗೇಶ್ ತಿಳಿಸಿದ್ದಾರೆ.

ಶ್ರವಣಬೆಳಗೊಳ ಶಾಸಕ ಸಿ.ಎನ್.ಬಾಲಕೃಷ್ಣ ಮಾತನಾಡಿ, ಎಸ್ ಐ ಟಿ ರಚನೆಯನ್ನು ನಾವು ಸ್ವಾಗತ ಮಾಡುತ್ತೇವೆ. ರೇವಣ್ಣ ಅವರನ್ನ ಎಸ್ ಐ ಟಿ ಅವರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಅಡಗಿ ಕೂತಂತವರೇನೂ ಅಲ್ಲ, ಪ್ರಕರಣ ದಾಖಲಾದ ದಿನದಿಂದ ಕ್ಷೇತ್ರದಲ್ಲೇ ಇದ್ದರು. ಅವರು ಆರು ಭಾರಿ ಶಾಸಕರಾಗಿದ್ದವರು, ಸಚಿವರೂ ಆಗಿದ್ದವರು, ಎಸ್ ಐ ಟಿ ಅವರು ಈ ಕೂಡಲೇ ಬಿಡುಗಡೆ ಮಾಡಲಿ. ತನಿಖೆಗೆ ಬರುವಂತೆ ಆಹ್ವಾನ ಮಾಡಲಿ. ಅವರು ಹೊಳೆನರಸೀಪುರ, ಹಾಸನ, ಬೆಂಗಳೂರಿನಲ್ಲಿರ್ತಾರೆ. ದಿನಕ್ಕೊಮ್ಮೆಯೋ, ಎರಡು ದಿನಕ್ಕೊಮ್ಮೆಯೋ ಬಂದು ಹಾಜರಾಗುವಂತೆ ಆಹ್ವಾನ ನೀಡಲಿ ಎಂದು ಹೇಳಿದರು.
ಪ್ರಜ್ವಲ್ ರೇವಣ್ಣ ಅವರ ಕೇಸ್ ಆಗಲಿ, ಯಾರೇ ತಪ್ಪು ಮಾಡಿದ್ರು ಶಿಕ್ಷೆ ಆಗಲಿ. ಕುಮಾರಸ್ವಾಮಿ ಅವರೂ ಹೇಳಿದ್ದಾರೆ, ನಾವೂ ಅದನ್ನೇ ಒತ್ತಾಯ ಮಾಡುತ್ತೇವೆ. ಎಸ್ ಐ ಟಿ ಅವರು ರೇವಣ್ಣ ಅವರನ್ನ ನಡೆಸಿಕೊಳ್ತಿರೋದು ನಮಗೆ ನೋವು ತರ್ತಿದೆ. ವಿಡಿಯೋ ರಿಲೀಸ್ ಮಾಡಿದವರ ವಿರುದ್ಧವೂ ಸೂಕ್ತ ಜರುಗಿಸಬೇಕಿದೆ, ಇದು ಹೆಣ್ಣುಮಕ್ಕಳು ಹಾಗೂ ಸಮಾಜವೇ ತಲೆ ತಗ್ಗಿಸಬೇಕಾದ ವಿಚಾರ ಇದು. ಎಸ್ ಐ ಟಿಯಿಂದ ಪ್ರಮಾಣಿಕವಾದ ತನಿಖೆಯನ್ನ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಬಾಲಕೃಷ್ಣ ಹೇಳಿದರು.












Click it and Unblock the Notifications