Lok Sabha Elections: ಮತ ಪ್ರಚಾರಕ್ಕೆ ರಾಜಕಾರಣಿಗಳು ಯುಟ್ಯೂಬರ್‌ಗಳ ಮೊರೆ: ಮತ ಸೆಳೆಯಲು ಸಾಮಾಜಿಕ ತಾಣಗಳೇ ಟಾರ್ಗೆಟ್
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು ಸುಲಭವಾಗಿ ಮತದಾರರನ್ನು ತಮ್ಮತ್ತ ಸೆಳೆಯಲು ನಾನಾ ಕಸರತ್ತು ಮಾಡುತ್ತವೆ. ಈಗ ತಂತ್ರಜ್ಞಾನ ಬೆಳೆದಂತೆ ಅಭ್ಯರ್ಥಿಗಳು ತಮ್ಮ ರೆಕಾರ್ಡಿಂಗ್ ಸಂದೇಶದ ಮೂಲಕ ಕಾಲ್ ಮಾಡಿ ಮತ ಚಲಾವಣೆ ಮಾಡುವಂತೆ ಮನವಿ ಮಾಡುತ್ತಾರೆ. ಸಮಾಜಿಕ ತಾಣಗಳನ್ನು ಸಹ ಅಭ್ಯರ್ಥಿಗಳು ಪ್ರಚಾರಕ್ಕೆ ಬಹುವಾಗಿ ಬಳಸಿಕೊಳ್ಳುತ್ತಾರೆ.
ತಂತ್ರಜ್ಞಾನವನ್ನು ಚೆನ್ನಾಗಿ ಬಳಸಿಕೊಂಡ ರಾಜಕಾರಣಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಸಾಮಾಜಿಕ ತಾಣಗಳಲ್ಲಿ ಪೋಸ್ಟ್ ಮಾಡುವ ಪ್ರಧಾನಿ ಜನರ ಚಿತ್ತವನ್ನು ತಮ್ಮತ್ತ ಸೆಳೆಯಲು ಪ್ಲ್ಯಾನ್ ಮಾಡಿಕೊಂಡಿರುತ್ತಾರೆ. ಮೋದಿ ಚುನಾವಣಾ ಪ್ರಚಾರಕ್ಕೆ ಈ ಹಿಂದೆ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡಿರುವುದು ಗಮನಾರ್ಹ. ಈಗ ತಂತ್ರಜ್ಞಾನ ಇನ್ನು ಬೆಳೆದಿದೆ. ನಿಮ್ಮ ಅಂಗೈಯಲ್ಲಿ ಜಗತ್ತಿನ ಆಗು ಹೋಗುಗಳನ್ನು ಸುಲಭವಾಗಿ ತಿಳಿದುಕೊಳ್ಳಬಹುದಾಗಿದೆ. ಮೊಬೈಲ್, ಯುಟ್ಯೂಬ್, ಸಾಮಾಜಿಕ ಮಾಧ್ಯಮಗಳನ್ನೇ ರಾಜಕಾರಣಿಗಳು ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದು, ಇದರಿಂದ ಜನರಿಗೆ ಇನ್ನಷ್ಟು ಹತ್ತಿರವಾಗಲು ಪ್ಲ್ಯಾನ್ ಮಾಡಿಕೊಳ್ಳುತ್ತಿದ್ದಾರೆ.

ಯುಟ್ಯೂಬರ್‌ಗಳತ್ತ ಚಿತ್ತ
ಈಗ ಏನೆದ್ದರು, ನೋಡುವ ಯುಗ.. ಓದುಗರ ಸಂಖ್ಯೆ ಕೊಂಚ ಕಡಿಮೆ ಆಗಿದೆ. ಕರ್ನಾಟಕದಲ್ಲೂ ತಮ್ಮ ಡಿಫ್ರೆಂಟ್ ಕಟೆಂಟ್ ಹಾಗೂ ಕಾಮಿಡಿಗಳಿಂದ ಜನರ ಮನಸ್ಸು ಕದ್ದ ಅದೆಷ್ಟೋ ಯುಟ್ಯೂಬರ್‌ಗಳು ಇದ್ದಾರೆ. ಖ್ಯಾತ ಯುಟ್ಯೂಬರ್‌ಗಳಿಗೂ ಸ್ಟಾರ್‌ಗಿರಿ ಲಭ್ಯವಾಗಿದೆ. ಇವರನ್ನು ಬಳಸಿಕೊಂಡು ಅದೆಷ್ಟೋ ಚಿತ್ರಗಳ ಪ್ರಮೋಷನ್‌ಗಳು ದಿನ ನಿತ್ಯ ನಡೆಯುತ್ತಲೇ ಇರುತ್ತವೆ. ಇದರಿಂದ ಖ್ಯಾತ ನಟರು ತಮ್ಮ ಪ್ರಾಂತ್ಯದ ಭಾಷೆಯನ್ನು ಮಾತನಾಡುವುದನ್ನು ನೋಡುವುದೇ ಚಂದ. ಈಗ ಈ ಮಾರ್ಗವನ್ನು ಬಳಸಿಕೊಳ್ಳಲು ರಾಜಕಾರಣಿಗಳು ಪ್ಲ್ಯಾನ್ ಮಾಡಿದ್ದಾರೆ.
ಯುಟ್ಯೂಬರ್‌ಗಳಿಗೆ ಲಕ್ಷಾಂತರ ಫಾಲೋವರ್ಸ್ ಇದ್ದಾರೆ. ಪ್ರಾಂತ್ಯವಾರು ಯುಟ್ಯೂಬರ್‌ಗಳು ಸಹ ಹವಾ ಕ್ರಿಯೇಟ್ ಮಾಡಿದ್ದಾರೆ. ಇವರನ್ನೇ ಬಳಸಿಕೊಂಡು ಜನರಿಗೆ ಹತ್ತಿರವಾಗಲು ರಾಜಕಾರಣಿಗಳು ಪ್ಲ್ಯಾನ್ ಮಾಡಿದ್ದಾರೆ. ಯುಟ್ಯೂಬರ್‌ಗಳನ್ನು ಬಳಸಿಕೊಂಡರೆ ವೇಗವಾಗಿ ಬಹಳಷ್ಟು ಜನರಿಗೆ ರೀಚ್ ಆಗುತ್ತೇವೆ ಎಂಬ ಮಾಸ್ಟರ್ ಪ್ಲ್ಯಾನ್ ರಾಜಕಾರಣಿಗಳದ್ದಾಗಿದೆ. ಈಗಾಗಲೇ ಹಲವು ರಾಜಕೀಯ ಮುಖಂಡರು ಕನ್ನಡದಲ್ಲೂ ಯುಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನವನ್ನು ನೀಡಿದ್ದಾರೆ.
ಅಚ್ಚು ಕಟ್ಟಾದ ಕಾರ್ಯಕ್ರಮ
ಈ ಯುಟ್ಯೂಬ್‌ಗಳು ಸಹ ಟಿವಿಯಲ್ಲಿ ಬರುವಂತೆ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಹೆಣೆದು ಜನರ ಚಿತ್ತವನ್ನು ಕದಿಯುವಲ್ಲಿ ಸಫಲವಾಗುತ್ತಿವೆ. ಇದಕ್ಕೆ ಯುಟ್ಯೂಬರ್ ರಚಿಸುವ ಸ್ಕ್ರಿಪ್ಟ್ ಸಹ ಅಷ್ಟೇ ಚೆನ್ನಾಗಿರುತ್ತದೆ. ಈಗಾಗಲೇ ಕೆಲವು ಯುಟ್ಯೂಬರ್‌ಗಳು ಚುನಾವಣೆಯ ಪ್ರಚಾರದ ವಿಡಿಯೋ ಮಾಡಿ ಹರಿ ಬಿಟ್ಟಿದ್ದಾರೆ. ಅವು ಸಖತ್ ವೈರಲ್ ಆಗುತ್ತಿವೆ. ಇವುಗಳನ್ನೆಲ್ಲಾ ಮನಗೊಂಡು ರಾಜಕಾರಣಿಗಳು ಪ್ರಚಾರಕ್ಕೆ ಹೊಸ ಟಚ್ ನೀಡಲು ಯುಟ್ಯೂಬರ್‌ಗಳ ಮೊರೆ ಹೋಗುತ್ತಿದ್ದಾರೆ.

ಯುಟ್ಯೂಬರ್‌ಗಳ ಕಾರ್ಯಕ್ರಮದಲ್ಲಿ ತಮ್ಮ ಕನಸು ಹಾಗೂ ಆಶಯಗಳನ್ನು ಮುಕ್ತವಾಗಿ ಹಂಚಿಕೊಳ್ಳುವ ರಾಜಕಾರಣಿಗಳು ತಮಗೆ ಏಕೆ ಮತವನ್ನು ಹಾಕಬೇಕು ಎಂದು ತಿಳಿಸುತ್ತಾರೆ. ಏಕಕಾಲಕ್ಕೆ ಈ ವಿಡಿಯೋ ಸಾವಿರಾರು ಮತದಾರರಿಗೆ ರೀಚ್ ಆಗುತ್ತದೆ. ಇದರಿಂದ ರಾಜಕಾರಣಿಗಳ ಕೆಲಸವೂ ಕಮ್ಮಿ ಆಗುತ್ತದೆ. ತಂತ್ರಜ್ಞಾನವನ್ನು ಅರ್ಥ ಮಾಡಿಕೊಂಡು ಅದರ ಜೊತೆ ನಡೆದಲ್ಲಿ ಯಶಸ್ಸು ಸಾಧಿಸಬಹುದು ಎಂಬುದಕ್ಕೆ ಹಲವು ಉದಾಹರಣೆಗಳು ಇವೆ. ಈಗ ಯುಟ್ಯೂಬರ್‌ಗಳನ್ನು ಬಳಸಿಕೊಂಡು ಪ್ರಚಾರಕ್ಕೆ ಮಣೆ ಹಾಕಿರುವ ರಾಜಕಾರಣಿಗಳು ನವ ಭಾರತದ ಕನಸಿಗೆ ಪುಷ್ಠಿ ತುಂಬುತ್ತಿದ್ದಾರೆ.
ಭಾರತದಲ್ಲಿ ಹಲವು ಯುಟ್ಯೂಬರ್‌ಗಳು ನೀಡುವ ಕಂಟೆಟ್ ಉತ್ತಮವಾಗಿವೆ. ಇವರು ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿ ನಂತರ ತಮ್ಮದೇ ಯುಟ್ಯೂಬ್ ಚಾನೆಲ್ ಆರಂಭಿಸಿ, ಜನರಿಗೆ ಇನ್ನು ಹತ್ತಿರವಾಗುತ್ತಿದ್ದಾರೆ. ಖ್ಯಾತ ಯುಟ್ಯೂಬರ್‌ಗಳ ಕಾರ್ಯಕ್ರಮಗಳು ಸಖತ್ ವೈರಲ್ ಆಗುತ್ತವೆ. ಕೇಂದ್ರ ಸರ್ಕಾರ ಡಿಜಿಟಲ್ ಕಂಟೆಂಟ್ ಕ್ರಿಯೇಟರ್‌ಗಳನ್ನು ಗುರುತಿಸಿ ಅವರಿಗೆ ಪುರಸ್ಕಾರಗಳನ್ನು ಸಹ ಈ ವರ್ಷದಿಂದ ನೀಡುತ್ತಿದೆ.












Click it and Unblock the Notifications