ಗೃಹ ಸಚಿವ ಪರಮೇಶ್ವರ್‌ಗೆ ಖಡಕ್ ಎಚ್ಚರಿಕೆ ನೀಡಿದ ಪೊಲೀಸ್ ಸಂಘ
ಬೆಂಗಳೂರು, ಅಕ್ಟೋಬರ್ 22: ಗೃಹ ಸಚಿವರ ನಿಗಾದಲ್ಲಿರುವ ಪೊಲೀಸ್ ಇಲಾಖೆ ಅದೇ ಗೃಹ ಸಚಿವರಿಗೆ ಖಡಕ್ ಎಚ್ಚರಿಕೆ ನೀಡಿದೆ.
ಹೌದು, ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘ ಗೃಹ ಸಚಿವರಿಗೆ ಎಚ್ಚರಿಕೆ ಪತ್ರ ರವಾನಿಸಿದ್ದು, ತಾವು ಈ ಹಿಂದೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಇದ್ದರೆ ಮುಂದಾಗುವ ಪರಿಣಾಮಗಳಿಗೆ ನೀವೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಂಘವು ಎಚ್ಚರಿಕೆ ನೀಡಿದೆ.
ಈ ಹಿಂದೆ 2016ರಲ್ಲಿ ಪೊಲೀಸರು ಪ್ರತಿಭಟನೆಗೆ ಮುಂದಾಗಿ ಆ ನಂತರ ನಡೆದ ಬೆಳವಣಿಗೆಗಳ ಸಮಯದಲ್ಲಿ ನೀವೆ ಗೃಹ ಮಂತ್ರಿ ಆಗಿದ್ದಿರಿ, ಆಗ ನೀವು ನೀಡಿದ ಭರವಸೆಗಳೆಲ್ಲಾ ಪೊಳ್ಳು ಭರವಸೆಗಳಾಗಿ ಉಳಿದುಬಿಟ್ಟವು' ಎಂದು ಪತ್ರದಲ್ಲಿ ಗೃಹ ಸಚಿವ ಪರಮೇಶ್ವರ್ ಅವರನ್ನು ಖಾರವಾಗಿಯೇ ಪ್ರಶ್ನಿಸಲಾಗಿದೆ.

ತೆಲಂಗಾಣ ಮಾದರಿ ಸಂಬಳ ನೀಡಿ
ಪೊಲೀಸರ ವೇತನ ಹೆಚ್ಚಿಸಿ ತೆಲಂಗಾಣ ಮಾದರಿಯಲ್ಲಿ ಸಂಬಳ ಕೊಡುವ ಬಗ್ಗೆ ಶೀಘ್ರವಾಗಿ ನಿರ್ಣಯ ಕೈಗೊಳ್ಳಬೇಕು, ಇತರೆ ರಾಜ್ಯಗಳಲ್ಲಿ ಇರುವಂತೆ ಏಕರೂಪ ಪೊಲೀಸ್ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ಜಾರಿ ಆಗಬೇಕು ಇವುಗಳ ಬಗ್ಗೆ ನೀವು ಇಚ್ಛಾಶಕ್ತಿ ಪ್ರದರ್ಶಿಸಬೇಕು ಎಂದು ಸಂಘವು ಪತ್ರದಲ್ಲಿ ಒತ್ತಾಯಿಸಿದೆ.

ಪರಿಣಾಮ ಎದುರಿಸಬೇಕಾಗುತ್ತದೆ ಜಾಗೃತೆ
ಸಂಘದ ವತಿಯಿಂದ ಅಧ್ಯಕ್ಷ ವಿ.ಶಶಿಧರ ಅವರು ಪತ್ರವನ್ನು ಬರೆದಿದ್ದು, ಪೊಲೀಸ್ ಸಮುದಾಯದ ಮನವಿಗೆ ಶೀಘ್ರವಾಗಿ ಸ್ಪಂದಿಸಬೇಕು ಒಂದೊಮ್ಮೆ ಸ್ಪಂದಿಸಲು ವಿಫಲರಾದರೆ ಮುಂದಿನ ಪರಿಣಾಮಗಳನ್ನು ಗೃಹ ಸಚಿವರಾಗಿ ನೀವೆ ಎದುರಿಸಬೇಕಾಗುತ್ತದೆ ಎಂದು ಪತ್ರದಲ್ಲಿ ಎಚ್ಚರಿಕೆ ಸಹ ನೀಡಲಾಗಿದೆ.

2016ರಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಪೊಲೀಸರು
2016 ರಲ್ಲಿ ಪೊಲೀಸ್ ಇಲಾಖೆಯಲ್ಲಿನ ಅಸಮಾನತೆ ಹೋಗಲಾಡಿಸಿ, ಸಂಬಳ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಆದರೆ ಸರ್ಕಾರವು ಎಸ್ಮಾ ಜಾರಿ ಮಾಡಿದ ಕಾರಣ ಪ್ರತಿಭಟನೆ ನಡೆಯಲಿಲ್ಲ, ಉದ್ದೇಶಿತ ಪ್ರತಿಭಟನೆಯ ಹಿಂದಿನ ದಿನ ಅಖಿಲ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧ್ಯಕ್ಷ ಶಶಿಧರ್ ಅವರನ್ನು ಬಂಧಿಸಲಾಗಿತ್ತು.

ಭರವಸೆಗಳನ್ನು ಈಡೇರಿಸಿಲ್ಲವೆಂಬ ಆರೋಪ
ಪೊಲೀಸರ ಪ್ರತಿಭಟನೆಯ ಎಚ್ಚರಿಕೆಯಿಂದ ಎಚ್ಚೆತ್ತ ಸರ್ಕಾರವು ಆರ್ಡರ್ಲಿ ಪದ್ಧತಿಯನ್ನು ತೆಗೆದುಹಾಕಿತ್ತು. ಹಾಗು ಪೊಲೀಸರಿಗೆ ಕಡ್ಡಾಯ ರಜೆಯ ಸೌಲಭ್ಯವನ್ನು ನೀಡಿತ್ತು. ಅದೇ ಸಮಯದಲ್ಲಿ ಗೃಹ ಸಚಿವರಾದ ಪರಮೇಶ್ವರ್ ಅವರು ಕೆಲವು ಭರವಸೆಗಳನ್ನು ನೀಡಿದ್ದರು ಆದರೆ ಅವು ಜಾರಿ ಆಗಿಲ್ಲವೆಂದು ಸಂಘವು ಆರೋಪಿಸುತ್ತಿದೆ.












Click it and Unblock the Notifications