ಬಿಜೆಪಿ ಸಂಸದ ನಿಧನ: ಕನ್ನಡದಲ್ಲಿ ಸಂತಾಪ ಸೂಚಿಸಿದ ಪ್ರಧಾನಿ ಮೋದಿ
ಬೆಂಗಳೂರು, ಏಪ್ರಿಲ್ 29: ಚಾಮರಾಜನಗರದ ಬಿಜೆಪಿ ಸಂಸದ ವಿ.ಶ್ರೀನಿವಾಸ್ ಅವರು ವಯೋಸಹಜ ಕಾಯಿಲೆ ಬಳಲುತ್ತಿದ್ದು, ಚಿಕಿತ್ಸೆ ಫಲಿಸದೇ ಭಾನುವಾರ ತಡರಾತ್ರಿ ನಿಧನರಾದರು. ಇವರಿಗೆ ಅಪಾರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದರ ಮೋದಿಯವರು ಕನ್ನಡದಲ್ಲಿಯೇ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ಸೋಮವಾರ ಕನ್ನಡದಲ್ಲಿ ಸಾಮಾಜಿಕ ಜಾಲತಾಣದಲ್ಲಿ (ಎಕ್ಸ್) ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು, ಪಕ್ಷದ ಹಿರಿಯ ನಾಯಕ ಹಾಗೂ ಚಾಮರಾಜನಗರದ ಸಂಸದರಾದ ವಿ ಶ್ರೀನಿವಾಸ್ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ.

ಶ್ರೀನಿವಾಸ್ ಪ್ರಸಾದ್ ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು. ಬಡವರು, ದೀನದಲಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ಸಮಾಜ ಸೇವೆಯ ವಿವಿಧ ಕೆಲಸಗಳಿಂದಾಗಿ ತುಂಬಾ ಜನಪ್ರಿಯರಾಗಿದ್ದರು. ಅವರ ಕುಟುಂಬ ಮತ್ತು ಬೆಂಬಲಿಗರಿಗೆ ನನ್ನ ಸಂತಾಪಗಳು. ಓಂ ಶಾಂತಿ ಎಂದು ಅವರು ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಹಿರಿಯ ನಾಯಕ ಹಾಗೂ ಚಾಮರಾಜನಗರದ ಸಂಸದರಾದ ಶ್ರೀ ವಿ ಶ್ರೀನಿವಾಸ್ ಪ್ರಸಾದ್ ಅವರ ನಿಧನದಿಂದ ನನಗೆ ಅತೀವ ನೋವಾಗಿದೆ. ಅವರು ಸಾಮಾಜಿಕ ನ್ಯಾಯದ ಹೋರಾಟಗಾರರಾಗಿದ್ದರು, ಬಡವರು, ದೀನದಲಿತರು ಮತ್ತು ವಂಚಿತರ ಕಲ್ಯಾಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಅವರು ತಮ್ಮ ಸಮಾಜ ಸೇವೆಯ ವಿವಿಧ ಕೆಲಸಗಳಿಂದಾಗಿ ತುಂಬಾ ಜನಪ್ರಿಯರಾಗಿದ್ದರು. ಅವರ…
— Narendra Modi (@narendramodi) April 29, 2024
ಕೆಲವು ದಿನಗಳಿಂದಲೂ ಶ್ರಿನಿವಾಸ್ ಪ್ರಸಾದ್ ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಶನಿವಾರ ಬೆಂಗಳೂರು ಮಣಿಪಾಲ್ ಆಸ್ಪತ್ರೆ ದಾಖಲಾಗಿದ್ದರು. ಈ ವೇಳೆ ಅವರ ಸ್ಥಿತಿ ಗಂಭೀರವಗಿತ್ತು. ಬಹು ಅಂಗಾಂಗ ವೈಫಲ್ಯಗಳಿಂದಲೂ ಅವರು ಬಳಲುತ್ತಿದ್ದರು. ಹೀಗಾಗಿ ಅವರಿಗೆ ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು.
ನಿಧನಕ್ಕೆ ಬಸವರಾಜ್ ಬೊಮ್ಮಾಯಿ ಸಂತಾಪ
ಕೇಂದ್ರದ ಮಾಜಿ ಸಚಿವರು, ಸಂಸದರು ಆಗಿದ್ದ ಹಿರಿಯ ರಾಜಕಾರಣಿ ವಿ. ಶ್ರೀನಿವಾಸ ಪ್ರಸಾದ್ ಅವರ ನಿಧನದ ಸುದ್ದಿ ಕೇಳಿ ಮನಸಿಗೆ ದುಖವಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದರು.
ಸೋಮವಾರ ಟ್ವೀಟ್ ಮಾಡಿರುವ ಅವರು, ಮೃತ ಸಂಸದರು ಶಾಸಕರಾಗಿ, ಸಂಸದರಾಗಿ ಸುಮಾರು ಐವತ್ತು ವರ್ಷಗಳ ಕಾಲ ರಾಜಕೀಯ ಜೀವನದಲ್ಲಿ ತೊಡಗಿಸಿಕೊಂಡು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನಾನುರಾಗಿಯಾಗಿದ್ದರು. ಶ್ರೀನಿವಾಸ ಪ್ರಸಾದ್ ಅವರ ಅಗಲಿಕೆಯಿಂದ ರಾಜ್ಯ ಒಬ್ಬ ಹಿರಿಯ ನಾಯಕ ಹಾಗೂ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ ಎಂದು ಅವರು ಕಂಬನಿ ಮಿಡಿದರು.












Click it and Unblock the Notifications