ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯುವ ಬೆಣ್ಣೆ ನಗರಿಯಲ್ಲಿ ಬಿಜೆಪಿ ವೇದಿಕೆ ಸಜ್ಜು: ಇಲ್ಲಿದೆ ಮೋದಿ ಪ್ರವಾಸದ ವೇಳಾಪಟ್ಟಿ
ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಬಿಜೆಪಿ ಭರ್ಜರಿ ತಯಾರಿ, ಮೋದಿ ಪ್ರವಾಸದ ವಿವರ ಇಲ್ಲಿದೆ.
ದಾವಣಗೆರೆ, ಮಾರ್ಚ್20: 2023 ರ ವಿಧಾನಸಭಾ ಚುನಾವಣಾ ಕಣ ರಂಗೇರಿದ್ದು, ಈ ಬಾರಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕು ಎಂದು ಪಣತೊಟ್ಟಿರುವ ಬಿಜೆಪಿ ಹೈಕಮಾಂಡ ನಾಯಕರ ಮೂಲಕ ಮತಭೇಟೆಗೆ ಮುಂದಾಗಿದೆ.
ವಿಜಯಸಂಕಲ್ಪ ಯಾತ್ರೆಯ ಮೂಲಕ ರಾಜ್ಯಾದ್ಯಂತ ಪ್ರಚಾರವನ್ನ ನಡೆಸಿರುವ ಬಿಜೆಪಿ ಅಂತಿಮವಾಗಿ ಮೋದಿ ಕ್ಲೈಮ್ಯಾಕ್ಸ್ ದಾವಣಗೆರೆಯಲ್ಲಿ ಮಾರ್ಚ್ 25 ಕ್ಕೆ ಮುಕ್ತಾಯಗೊಳ್ಳಲಿದ್ದು, ಪ್ರಧಾನಿ ಮೋದಿ ಅವರು ಬೆಣ್ಣೆನಗರಿಗೆ ಬರಲಿದ್ದು, ಇಡೀ ದಾವಣಗೆರೆ ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸಂಪೂರ್ಣ ಸಿಟಿ ಕೇಸರಿಮಯವಾಗುತ್ತಿದೆ. ಈಗಾಗಲೇ ಸಕಲ ಸಿದ್ದತೆ ಕೈಗೊಂಡಿದ್ದು, ಸಿದ್ದರಾಮೋತ್ಸವಕ್ಕೆ ಠಕ್ಕರ್ ಕೊಡಲು ಬಿಜೆಪಿ ತಯಾರಿ ನಡೆಸಿದೆ ಎನ್ನಲಾಗಿದೆ.

ಈ ಹಿಂದೆ ವಿರೋಧ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 75 ನೇ ಹುಟ್ಟು ಹಬ್ಬದ ಹಿನ್ನೆಲೆ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ನಡೆಸುವ ಮೂಲಕ ಸಿದ್ದರಾಮಯ್ಯ ಸರ್ಕಾರದ ಅವದಿಯಲ್ಲಿ ಜಾರಿಗೊಳಿಸಿದ ಕಾರ್ಯಕ್ರಮ ಕುರಿತು ಬೃಹತ್ ಸಮಾವೇಶವನ್ನ ನಡೆಸಿ, ಐದಾರು ಲಕ್ಷ ಜನರನ್ನ ಸೇರಿಸುವ ಮೂಲಕ ಕಾಂಗ್ರೆಸ್ ನಾಯಕರು ತಮ್ಮ ಶಕ್ತಿ ಪ್ರದರ್ಶನವನ್ನ ತೋರಿಸಿದ್ರು.
ಇದೀಗ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ರಾಜ್ಯಕ್ಕೆ ಪದೇ ಪದೇ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 25ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ದಾವಣಗೆರೆ ಹೊರವಲಯದ ಜಿಎಂಐಟಿ ಕಾಲೇಜು ಬಳಿ ನಡೆಯಲಿರುವ ಬಿಜೆಪಿ ಅಭಿಯಾನವಾದ ವಿಜಯಸಂಕಲ್ಪ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ಸುಮಾರು 400 ಎಕರೆ ಪ್ರದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, 10 ಲಕ್ಷ ಜನ ಸೇರಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸದ್ಯ ಸಮಾವೇಶಕ್ಕೆ ಭರ್ಜರಿಯಾಗಿ ಸಿದ್ಧತೆ ನಡೆಯುತ್ತಿದ್ದು, 40 ಕ್ಕೂ ಹೆಚ್ಚು ಜೆಸಿಬಿಗಳಿಂದ ಸಮಾವೇಶ ಸ್ಥಳದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಗಿದೆ. ಕಾಂಗ್ರೆಸ್ನ ಸಿದ್ದರಾಮೋತ್ಸವಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಬಿಜೆಪಿ ಈ ಸಮಾವೇಶವನ್ನು ಬಳಸಿಕೊಳ್ಳಲಿದೆ ಎನ್ನಲಾಗುತ್ತಿದೆ.
ಮಾರ್ಚ್ 25 ರಂದು ದಾವಣಗೆರೆಗೆ ಮೋದಿ ಭೇಟಿ: ಇಲ್ಲಿದೆ ಪ್ರವಾಸದ ವಿವರ:
ಮಾ.25ರಂದು ಬೆಳಗ್ಗೆ 10.10ಕ್ಕೆ HAL ಏರ್‌ಪೋರ್ಟ್‌ಗೆ ಆಗಮನ
ಹೆಚ್‌ಎಎಲ್‌ನಿಂದ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಪ್ರಯಾಣ
ಬೆಳಗ್ಗೆ 10.35ಕ್ಕೆ ಚಿಕ್ಕಬಳ್ಳಾಪುರಕ್ಕೆ ಪ್ರಧಾನಿ ಮೋದಿ ತಲುಪಲಿದ್ದಾರೆ
ಚಿಕ್ಕಬಳ್ಳಾಪುರದಲ್ಲಿ ಬೆಳಗ್ಗೆ 10.45ಕ್ಕೆ ವೈದ್ಯಕೀಯ ಸಂಸ್ಧೆ ಉದ್ಘಾಟನೆ
ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ, ಸಂಶೋಧನಾ ಸಂಸ್ಥೆ
ಮಧ್ಯಾಹ್ನ 12.55ಕ್ಕೆ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣಕ್ಕೆ ಮೋದಿ ಆಗಮನ
ಮಧ್ಯಾಹ್ನ 1 ಗಂಟೆಗೆ ವೈಟ್‌ಫೀಲ್ಡ್ ಮೆಟ್ರೋ ಹೊಸ ಮಾರ್ಗ ಉದ್ಘಾಟನೆ
ಉದ್ಘಾಟನೆ ಬಳಿಕ ಮೆಟ್ರೋದಲ್ಲಿ ಮೋದಿ ಪ್ರಯಾಣ
ಮಧ್ಯಾಹ್ನ 1.50ಕ್ಕೆ ಕಾಪ್ಟರ್‌ನಲ್ಲಿ ಬೆಂಗಳೂರಿಂದ ದಾವಣಗೆರೆಗೆ ಪ್ರಯಾಣ
ಮಧ್ಯಾಹ್ನ 3.30ಕ್ಕೆ ದಾವಣಗೆರೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
ಸಂಜೆ 5.15ಕ್ಕೆ ಕಾಪ್ಟರ್‌ನಲ್ಲಿ ದಾವಣಗೆರೆಯಿಂದ ಶಿವಮೊಗ್ಗಕ್ಕೆ ಪ್ರಯಾಣ
ಸಂಜೆ 5.55ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ನವದೆಹಲಿಗೆ ನಿರ್ಗಮನ
ಈಗಾಗಲೇ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಹೈಕಮಾಂಡ್ ನಾಯಕರು ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ಬಾರಿ ಮಧ್ಯ ಕರ್ನಾಟಕದಲ್ಲಿ ಶಕ್ತಿ ಪ್ರದರ್ಶನವನ್ನ ತೋರಿಸಲು ಬಿಜೆಪಿ ಕಲಿಗಳು ಭರ್ಜರಿ ತಯಾರಿ ನಡೆಸಿದ್ದಾರೆ. ದಾವಣಗೆರೆಯಲ್ಲಿ ರೋಡ್ ಶೋ ನಡೆಸಲು ಸಿದ್ದತೆ ನಡೆದಿದೆ ಎನ್ನಲಾಗಿದೆ.
ಇನ್ನೂ ಪ್ರಧಾನಿ ನರೇಂದ್ರ ಮೋದಿ ದಾವಣಗೆರೆಗೆ ಮೂರನೇ ಬಾರಿ ಬರುತ್ತಿದ್ದು, 2018 ರಲ್ಲಿ ದಾವಣಗೆರೆಯಲ್ಲಿ ನಡೆಯುವ ರೈತ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಸಿದ್ದರಾಮೋತ್ಸವದ ಮೂಲಕ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್ ಗೆ ತಿರುಗೇಟು ನೀಡಲು ಬಿಜೆಪಿ ಕಲಿಗಳು ಸಜ್ಜಾಗಿದ್ದಾರೆ.












Click it and Unblock the Notifications