ಕರ್ನಾಟಕಕ್ಕೆ ಬರ ಪರಿಹಾರ ನೀಡದ ಪ್ರಧಾನಿ ಮೋದಿ ಕೀನ್ಯಾ ದೇಶಕ್ಕೆ $250m ನೆರವು: ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 07: ಕರ್ನಾಟಕದಲ್ಲಿ ಬರಗಾಲಕ್ಕೆ ರೈತರು ತತ್ತರಿಸಿದ್ದಾರೆ. ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಹಿಂಗಾರು ಮಳೆ ನೆಚ್ಚಿಕೊಂಡಿದ್ದ ರೈತರಿಗೆ ಮತ್ತೆ ನಿರಾಸೆಯಾಗಿದೆ. ಇತ್ತ ಸರ್ಕಾರಗಳಿಂದ ಬರಬೇಕಾದ ಪರಿಹಾರ ಹಣವು ಬರುತ್ತಿಲ್ಲ. ಆದರೆ ಸರ್ಕಾರಗಳು ಮಾತ್ರ ಒಬ್ಬರ ಮೇಲೆ ಒಬ್ಬರಂತೆ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿವೆ.
ಬರ ಪರಿಹಾರ ನೀಡು ಕೇಂದ್ರದ ಮಾರ್ಗಸೂಚಿಗಳು ತೊಡಕಾಗಿವೆ ಎಂದು ಕೇಂದ್ರದತ್ತ ಬೆಟ್ಟು ಮಾಡಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಕೀನ್ಯಾ ದೇಶಕ್ಕೆ ಪ್ರಧಾನಿ ಭಾರಿ ಪ್ರಮಾಣದಲ್ಲಿ ಆರ್ಥಿಕ ನೆರವು ಕರ್ನಾಟಕದ ಮೇಲೆ ಅಸಡ್ಡೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಕುರಿತು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಬರಗಾಲಕ್ಕೆ ತುತ್ತಾಗಿ ತೀವ್ರ ಸಂಕಷ್ಟದಲ್ಲಿರುವ ಕರ್ನಾಟಕದ ರೈತರಿಗೆ ಪರಿಹಾರ ನೀಡಬೇಕೆಂದು ತಿಂಗಳುಗಳಿಂದ ಮನವಿ ಸಲ್ಲಿಸಿ ಒತ್ತಾಯಿಸುತ್ತಿದ್ದರೂ ಇಲ್ಲಿಯ ವರೆಗೆ ಪೈಸೆ ಹಣವನ್ನೂ ನೀಡದ ಪ್ರಧಾನಿ ನರೇಂದ್ರ ಮೋದಿಯವರು ಕೀನ್ಯಾ ದೇಶದ ಕೃಷಿ ಕ್ಷೇತ್ರದ ಆಧುನೀಕರಣಕ್ಕಾಗಿ 250 ಮಿಲಿಯನ್ ಡಾಲರ್‌ಗಳಷ್ಟು ನೆರವು ನೀಡಿದ್ದಾರೆ. ಇದನ್ನು ನೋಡಿದಾಗ ಸಹಜವಾಗಿಯೇ ಕನ್ನಡಿಗರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾಕೆ ಇಷ್ಟೊಂದು ಅಸಡ್ಡೆ ಎಂಬ ಪ್ರಶ್ನೆ ಕೇಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯಗಳ ಬಗ್ಗೆ ಕಾಳಜಿ ಇಲ್ಲ ಏಕೆ?
ಸ್ವತಂತ್ರ ದೇಶವಾಗಿ ರೂಪು ಪಡೆದ ದಿನದಿಂದಲೂ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಿಗೆ ನೆರವು ನೀಡುವ ಪರಂಪರೆಯನ್ನು ಭಾರತ ಮುಂದುವರಿಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (BJP) ಸರ್ಕಾರ ಬೇರೆ ದೇಶಗಳ ಕಷ್ಟಕ್ಕೆ ನೆರವಾಗುವುದರ ಬಗ್ಗೆ ನಮ್ಮ ವಿರೋಧ ಇಲ್ಲ. ಆದರೆ ಇದೇ ಔದಾರ್ಯ ಮತ್ತು ಕಾಳಜಿಯನ್ನು ನಮ್ಮದೇ ದೇಶದ ರಾಜ್ಯಗಳ ಬಗ್ಗೆ ಯಾಕೆ ಪ್ರಧಾನಿ ನರೇಂದ್ರ ಮೋದಿಯವರು ತೋರುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.
ಕರ್ನಾಟಕ ರಾಜ್ಯ ಈ ಬಾರಿ ತೀವ್ರ ಬರಗಾಲಕ್ಕೆ ತುತ್ತಾಗಿದ್ದು ರಾಜ್ಯ ಸರ್ಕಾರ ತನ್ನ ಶಕ್ತಿ ಮೀರಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವೇ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಸಮೀಕ್ಷೆ ಮಾಡಿಕೊಂಡು ಹೋಗಿ ವರದಿ ನೀಡಿದೆ.

ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ
ರಾಜ್ಯ ಸರ್ಕಾರ ಕೂಡಾ ಸಮೀಕ್ಷೆ ನಡೆಸಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ನಮ್ಮ ಕೃಷಿ ಮತ್ತು ಕಂದಾಯ ಸಚಿವರಿಬ್ಬರೂ ದೆಹಲಿಗೆ ಭೇಟಿ ನೀಡಿ ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದ್ದಾರೆ.
ರಾಜ್ಯ ಸರ್ಕಾರದ ಇಷ್ಟೆಲ್ಲ ಪ್ರಯತ್ನದ ಹೊರತಾಗಿಯೂ ಕೇಂದ್ರ ಸರ್ಕಾರ ಇದಕ್ಕೆ ಸಂಬಂದಿಸಿದಂತೆ ಪ್ರಾಥಮಿಕ ಸಭೆಯನ್ನೂ ಕರೆದಿಲ್ಲ. ಭೇಟಿಗೆ ಅವಕಾಶ ನೀಡಬೇಕೆಂದು ಪ್ರಧಾನ ಮಂತ್ರಿಯವರಿಗೆ ಬರೆದ ಪತ್ರಕ್ಕೂ ಇಲ್ಲಿಯ ವರೆಗೆ ಪ್ರತಿಕ್ರಿಯೆ ಇಲ್ಲ. ಎಂದು ಅವರು ದೂರಿದರು.
48.19 ಲಕ್ಷ ಎಕರೆ ಕೃಷಿ ಬೆಳೆ ನಷ್ಟ
ಬರಗಾಲದಿಂದಾಗಿ ರಾಜ್ಯದ 48.19 ಲಕ್ಷ ಎಕರೆ ಕೃಷಿ ಭೂಮಿಯಲ್ಲಿ ಆಗಿರುವ ಬೆಳೆನಷ್ಟಕ್ಕಾಗಿ ಕನಿಷ್ಠ ರೂ.4,663 ಕೋಟಿ ರೂಪಾಯಿ ಪರಿಹಾರ ನೀಡುವ ಜೊತೆಯಲ್ಲಿ ಒಟ್ಟು ಬರ ಪರಿಹಾರಕ್ಕಾಗಿ ರೂ.18,171 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ದೇವೆ. ಆದರೆ ಇಲ್ಲಿಯ ವರೆಗೆ ನಯಾಪೈಸೆ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ವಿವರಿಸಿದರು.
ಇತ್ತ ಬಿಜೆಪಿ ನಾಯಕರು ಬರಗಾಲ ಪರಿಹಾರ ಹಣ ಕುರಿತು ಕೇಂದ್ರ ಸಚಿವಾಲಯಗಳ ಕಾರ್ಯ ಚಟುವಟಿಕೆಗಳು ಪೂರ್ಣಗೊಂಡ ನಂತರ ಹಣ ಬಿಡುಗಡೆ ಆಗುತ್ತದೆ. ಅಲ್ಲಿಯವರೆಗೆ ಕೇಂದ್ರದ ಮೇಲೆ ಬೆಟ್ಟು ಮಾಡದೇ ರಾಜ್ಯದ ಪಾಲಿನ ಹಣವನ್ನು ಬರಗಾಲ ಪೀಡಿತ ತಾಲೂಕುಗಳ ರೈತರಿಗೆ ನೀಡುವಂತೆ ಆಗ್ರಹಿಸಿದ್ದಾರೆ.












Click it and Unblock the Notifications