ಪಿಲಿಕುಳ ರೀತಿ ಹಾವೇರಿಯಲ್ಲಿ ವಿಜ್ಞಾನ ಕೇಂದ್ರ, ಆದರೆ 4 ಕೋಟಿ ಸಾಕಾ?
ಹಾವೇರಿ, ಜುಲೈ 18: ನಾಲ್ಕು ಕೋಟಿ ರುಪಾಯಿ ವೆಚ್ಚದಲ್ಲಿ ಸ್ಥಾಪನೆ ಆಗುತ್ತಿರುವ ಜಿಲ್ಲಾ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಇಲ್ಲಿನ ಜಿಲ್ಲಾಡಳಿತ ಭವನದ ಸಮೀಪದಲ್ಲಿರುವ ಒಂಬತ್ತೂವರೆ ಎಕರೆ ಪ್ರದೇಶದಲ್ಲಿ ತಲೆ ಎತ್ತಲಿದೆ. ಈಗಾಗಲೇ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಪಿಲಿಕುಳ ಮಾದರಿಯಲ್ಲಿ ಈ ಕೇಂದ್ರವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಪದೇ ಪದೇ ಸ್ಥಳ ಬದಲಾವಣೆಯಿಂದ ನನೆಗುದಿಗೆ ಬಿದ್ದಿದ್ದ ಕಾಮಗಾರಿಯಿಂದಾಗಿ ವಿಜ್ಞಾನ ಕೇಂದ್ರ ಆರಂಭಕ್ಕೆ ಕಾರ್ಮೋಡ ಕವಿದಿತ್ತು. ಜಿಲ್ಲೆಯಾಗಿ ಎರಡು ದಶಕವಾದರೂ ವಿಜ್ಞಾನ ಕೇಂದ್ರ ಇಲ್ಲದಿರುವುದು ಭವಿಷ್ಯದ ವಿಜ್ಞಾಗಳ ಪಾಲಿಗೆ ತೊಡಕಾಗಿ ಪರಿಣಮಿಸಿತ್ತು. ಈಗ ವಿಜ್ಞಾನ ಕೇಂದ್ರಕ್ಕೆ ಬಾಲಗ್ರಹ ಪೀಡೆಯಿಂದ ಮುಕ್ತಿ ಸಿಕ್ಕಂತಾಗಿದ್ದು, ಆಕರ್ಷಕ ರೀತಿಯಲ್ಲಿ ಕೇಂದ್ರ ಸ್ಥಾಪನೆಯಾಗಲಿದೆ.

ಪಿಲಿಕುಳ ಮಾದರಿ
ರಾಜ್ಯದ ಗಮನ ಸಳೆದಿರುವ ಪಿಲಿಕುಳ ವಿಜ್ಞಾನ ಕೇಂದ್ರದ ಮಾದರಿಯಲ್ಲಿ ಕೇಂದ್ರ ಸ್ಥಾಪನೆಯಾಗಲಿದ್ದು, ವಿಷಯಾಧಾರಿತ ವಿಜ್ಞಾನ, ಮನರಂಜನಾ ವಿಜ್ಞಾನಕ್ಕೆ ಸಂಬಂಧಿಸಿದ ಗ್ಯಾಲರಿಗಳು ಇರಲಿವೆ. ಅದರಲ್ಲಿ ಜೀವವೈವಿಧ್ಯ ಮತ್ತು ಆಧುನಿಕ ಸಂಶೋಧನೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಭಾಗಗಳು ಇರಲಿವೆ.
ಈ ಗ್ಯಾಲರಿಗಳಲ್ಲಿ ವಿದ್ಯಾರ್ಥಿಗಳು ಸ್ವತಃ ಬಳಸಬಹುದಾದ ವಿಜ್ಞಾನ ಮಾದರಿಗಳಿರುತ್ತವೆ. ಅಲ್ಲದೇ ಮಾನವ ವಿಕಾಸ, ವಿನಾಶದ ಅಂಚಿನಲ್ಲಿರುವ ಪ್ರಭೇದಗಳು, ಅವುಗಳನ್ನು ಉಳಿಸುವುದರ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವ ರೀತಿಯಲ್ಲಿ ವಿವರಣೆ ನೀಡುವ ಪ್ರಯತ್ನಗಳು ಇಲ್ಲಿ ಮಾಡಲು ಉದ್ದೇಶಿಸಲಾಗಿದೆ.
ನ್ಯಾನೋ ತಂತ್ರಜ್ಞಾನ, ರಾಕೆಟ್ ತಂತ್ರಜ್ಞಾನ, ಸಂವಹನ ತಂತ್ರಜ್ಞಾನ, ವೈದ್ಯಕೀಯ ತಂತ್ರಜ್ಞಾನದ ಕುರಿತ ಮಾದರಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಈ ಕೇಂದ್ರದಲ್ಲಿ ಇರಲಿವೆ. ಪರಿಸರ ಜಾಗೃತಿ ಜತೆಗೆ ವಿಜ್ಞಾನದ ವಿಸ್ಮಯಗಳು ಇಲ್ಲಿ ಅನಾವರಣಗೊಳ್ಳಲಿವೆ.
ಆದರೆ, ಕೇವಲ ನಾಲ್ಕು ಕೋಟಿ ರುಪಾಯಿ ಅನುದಾನದಲ್ಲಿ ಪಿಲಿಕುಳ ಮಾದರಿಯಲ್ಲಿ ವಿಜ್ಞಾನ ಕೇಂದ್ರ ಆರಂಭ ಸಾಧ್ಯವಿಲ್ಲ. ಇದಕ್ಕೆ ಕನಿಷ್ಠ ಹದಿಮೂರು ಕೋಟಿ ಅನುದಾನ ಅಗತ್ಯವಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.












Click it and Unblock the Notifications