Kodi Mutt Shree : ದಾರಿ ದಾರಿಯಲ್ಲೇ ಬಿದ್ದು ಸಾಯುವರು ಜನ; ಕೋಡಿ ಶ್ರೀ ಆಘಾತಕಾರಿ ಭವಿಷ್ಯ!
ಹಾಸನ, ಅಕ್ಟೋಬರ್ 24: ಉಕ್ರೇನ್-ರಷ್ಯಾ ಯುದ್ಧದಲ್ಲಿ ನೂರಾರು ಮಂದಿ ಸಾವಿನ ಮನೆ ಸೇರಿದ್ದು, ಸಾವಿರಾರು ಜನರು ನೆಲೆ ಕಳೆದುಕೊಂಡು ಬೀದಿಯಲ್ಲಿ ನಿಲ್ಲುವಂತಾಗಿದೆ. ಈ ಪರಿಸ್ಥಿತಿಯ ಹೊರತಾಗಿಯೂ ಲೋಕ ಕಂಟಕವಿದೆ ಎಂದು ಕೋಡಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಜನರು ದಾರಿಯಲ್ಲಿ ಹೋಗ ಹೋಗುತ್ತಿದ್ದಂತೆ ಕುಸಿದು ಬೀಳುತ್ತಾರೆ. ಅಶಕ್ತಿಯು ಜನರ ಜೀವವನ್ನೇ ಕಿತ್ತುಕೊಳ್ಳುತ್ತದೆ ಎಂದು ಶ್ರೀಗಳು ಎಚ್ಚರಿಕೆ ನೀಡಿದ್ದಾರೆ. ಪ್ರಾಕೃತಿಕ ವಿಕೋಪ, ಜಾಗತಿಕ ಮತ್ತು ರಾಷ್ಟ್ರೀಯ ಕಂಟಕದ ಜೊತೆಗೆ ಮಳೆೆಯ ಕುರಿತು ಶ್ರೀಗಳು ಭವಿಷ್ಯ ಹೇಳಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಹಾರನಹಳ್ಳಿ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿರುವ ಆಘಾತಕಾರಿ ಭವಿಷ್ಯವು ಆತಂಕವನ್ನು ಹುಟ್ಟಿಸುವಂತಿದೆ. ಈ ಎಲ್ಲ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಏನು ಮಾಡಬೇಕು ಎಂಬುದರ ಬಗ್ಗೆಯೂ ಸಹ ಶ್ರೀಗಳು ಸಲಹೆ ನೀಡಿದ್ದಾರೆ. ಶ್ರೀಗಳ ಭವಿಷ್ಯದಲ್ಲಿ ಏನಿದೆ?, ಅಪಾಯದಿಂದ ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೆ ಏನು ಮಾಡಬೇಕು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ಕಾರ್ತಿಕ ಮಾಸದವರೆಗೂ ವರುಣನ ಅಬ್ಬರ
ರಾಜ್ಯದಲ್ಲಿ ಮಳೆಗಾಲ ಮುಗಿದರೂ ಮಳೆಯ ಆರ್ಭಟ ಮಾತ್ರ ಮುಗಿಯುತ್ತಿಲ್ಲ. ಬೆಳಗ್ಗೆ ಬಿಸಿಲು ಹೆಚ್ಚಾಗಿದ್ದರೆ ಮಧ್ಯಾಹ್ನದ ಹೊತ್ತಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. ಅದೇ ರೀತಿ ಸಂಜೆ ವೇಳೆಗೆ ಮಳೆ ಆರ್ಭಟ ಶುರುವಿಟ್ಟುಕೊಳ್ಳುತ್ತಿದೆ. ಮುಂದಿನ ಕಾರ್ತಿಕ ಮಾಸದವರೆಗೂ ಈ ಮಳೆಯು ಮುಂದುವರಿಯಲಿದೆ ಎಂದು ಕೋಡಿ ಮಠದ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.

ಜನವರಿ ತಿಂಗಳವರೆಗೂ ಲೋಕ ಕಂಟಕ
ಮಧ್ಯಭಾಗದಿಂದ ಪ್ರಾರಂಭವಾಗಿ ಕಾರ್ತಿಕ ಮಾರ್ಗಶಿರ ಮಾಸದವರೆಗೂ ಲೋಕ ಕಂಟಕವಿದೆ. ಜನವರಿ ಪ್ರಥಮದವರೆಗೂ ಪ್ರಾಕೃತಿಕ ಇರಬಹುದು, ಪ್ರಾದೇಶಿಕ ಇರಬಹುದು, ಭೂ ಕಂಟಕ ಇರಬಹುದು, ರಾಜಭೀತಿ ಇರಬಹುದು, ಬಾಂಬ್, ಭೂಕಂಪನ, ಯುದ್ಧ ಭೀತಿಯು ಇರುತ್ತದೆ. ಅಲ್ಲಿಯವರೆಗೂ ಜನರಿಗೆ ಅಪಾಯವು ತಪ್ಪಿದ್ದಲ್ಲ ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಹಾದಿ-ಬೀದಿಯಲ್ಲೇ ಬಿದ್ದು ಸಾಯುವರು ಜನರು
ಜಾಗತಿಕ, ಪ್ರಾದೇಶಿಕ ಮಟ್ಟದಲ್ಲಿ ಪ್ರಾಕೃತಿಕ ಕಂಟಕಗಳ ಜೊತೆಗೆ ಜನರು ಜನರ ಮೇಲೆ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಜನರ ಮೇಲೆ ನಿಯಂತ್ರಣ ಕಳೆದುಕೊಂಡ ಜನರು ಹುಚ್ಚರಂತೆ ಆಗುತ್ತಾರೆ. ದೇಹದ ಮೇಲೆ ನಿಯಂತ್ರಣವನ್ನು ಕಳೆದುಕೊಂಡು, ದೇಹದ ಅಶಕ್ತಿಯಿಂದಾಗಿ ದಾರಿ ದಾರಿಯಲ್ಲೇ ಬಿದ್ದು ಸಾಯಬಹುದು. ಅಂಗಾಂಗಗಳ ಮೇಲೆ ಪ್ರಭಾವ ಕಳೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ದೈವದ ಮೇಲೆ ಭಕ್ತಿ ಹೊಂದಿರುವುದು ಬಹಳ ಮುಖ್ಯ
ಮುಂದಿನ ಜನವರಿ ಪ್ರಥಮದವರೆಗೂ ಜನರು ಯಾವುದೇ ಕಾರಣಕ್ಕೆ ಎಚ್ಚರಿಕೆ ತಪ್ಪುವಂತಿಲ್ಲ. ಏಕೆಂದರೆ ಜಾಗತಿಕ ದೋಷದ ಜೊತೆಗೆ ರಾಷ್ಟ್ರೀಯ ದೋಷವೂ ಹೆಚ್ಚಾಗಿದೆ. ಹೀಗಾಗಿ ಮುಂದಿನ ಎರಡ್ಮೂರು ತಿಂಗಳು ಮನುಷ್ಯರು ದೈವಭಕ್ತಿ, ನಂಬಿಕೆ, ವಿಶ್ವಾಸದಿಂದ ಇರುವುದು ಬಹಳ ಮುಖ್ಯವಾಗಿರುತ್ತದೆ. ದೈವಭಕ್ತಿಯನ್ನು ಹಾಗೂ ನಂಬಿಕೆಯನ್ನು ಕಳೆದುಕೊಂಡವರಂತೆ ವರ್ತಿಸುವುದು ಯಾರಿಗೂ ಉತ್ತಮವಲ್ಲ ಎಂದು ಕೋಡಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications