ಡಿಕೆಶಿ ಪರಿಸ್ಥಿತಿ ನೋಡಿದ್ರೆ ಕನಿಕರ ಬರುತ್ತಿದೆ: ಅಶೋಕ್ ಹೀಗಂದಿದ್ದೇಕೆ?
ವಿಪಕ್ಷ ನಾಯಕ ಆರ್.ಅಶೋಕ್ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಗ್ಗೆ ವ್ಯಂಗ್ಯವಾಡಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಾಹೇಬರ ಪರಿಸ್ಥಿತಿ ನೋಡಿದರೆ ಕನಿಕರ ಮೂಡುತ್ತಿದೆ ಎಂದು ಅಶೋಕ್ ಹೇಳಿದ್ದಾರೆ. ಈ ರೀತಿ ಅವರು ವ್ಯಂಗ್ಯವಾಗಿ ಡಿಕೆ ಶಿವಕುಮಾರ್ ಅವರ ಕಾಲೆಳೆದಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಣ ಹಾಕುತ್ತಿರುವ ರಾಜಕೀಯ ಪಟ್ಟುಗಳಿಗೆ ಸುಸ್ತಾಗಿರುವ ಡಿಸಿಎಂ ಡಿಕೆ.ಶಿವಕುಮಾರ್ ಅವರು ತಾವು ಎಷ್ಟೇ ತಿಪ್ಪರಲಾಗ ಹಾಕಿದರೂ ಮುಖ್ಯಮಂತ್ರಿ ಕುರ್ಚಿ ದಕ್ಕುವುದಿಲ್ಲ ಎನ್ನುವ ಕಹಿ ಸತ್ಯವನ್ನ ತಡವಾಗಿ ಆದರೂ ಅರಿತುಕೊಂಡಿರುವಂತಿದೆ ಎಂದು ಹೇಳಿದ್ದಾರೆ.

ಇಷ್ಟಾದರೂ ಪಾಪ ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವಂತೆ 'ತ್ಯಾಗ'ದ ಮಾತುಗಳನ್ನು ಆಡುವ ಮೂಲಕ ತಮ್ಮನ್ನ ತಾವೇ ಸಂತೈಸಿಕೊಳ್ಳುತ್ತಿರುವ ಡಿಸಿಎಂ ಸಾಹೇಬರ ಪರಿಸ್ಥಿತಿ ನೋಡಿದರೆ ಕನಿಕರ ಮೂಡುತ್ತಿದೆ ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಗೇಟ್ ಪಾಸ್ ಕೊಟ್ಟಿದೆ. ದೆಹಲಿ ಚುನಾವಣೆಗೆ ಎಐಸಿಸಿ ಹೊರಡಿಸಿರುವ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಥಾನವೇ ಇಲ್ಲ. ಸಿದ್ದರಾಮಯ್ಯ ಅವರನ್ನು "ಕೈ" ಬಿಟ್ಟು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಕಲ್ಪಿಸಿರುವುದನ್ನು ನೋಡಿದರೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ನಿವೃತ್ತಿ ಬಹುತೇಕ ಖಚಿತ-ನಿಶ್ಚಿತ-ಖಂಡಿತ ಎಂದು ಬಿಜೆಪಿ ಕೂಡ ವ್ಯಂಗ್ಯವಾಡಿದೆ.
ರಾಜ್ಯದಲ್ಲಿ ಹಿಂಸಾಚಾರ ತಾಂಡವವಾಡುತ್ತಿದೆ. ಸಮಾಜಘಾತುಕರಿಗೆ ಪೊಲೀಸರ ಭಯವೇ ಇಲ್ಲದಂತಾಗಿದೆ. ಹಾಡುಹಗಲೇ ಮಾರಣಾಂತಿಕ ಥಳಿತ, ಅಡ್ಡಗಟ್ಟಿ ಕೊಲೆ, ಮೂಕಪ್ರಾಣಿಯ ಮೇಲೆ ಕ್ರೌರ್ಯ ಪ್ರಕರಣಗಳು ನಡೆದ ಬೆನ್ನಲ್ಲೇ ಈಗ ರಾಜಧಾನಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ ಎಂದು ಈ ವಿಚಾರವಾಗಿಯೂ ತರಾಟೆಗೆ ತೆಗೆದುಕೊಂಡಿದೆ.

ನಿರ್ಭೀತಿಯಿಂದ ಹಗಲಿನಲ್ಲಿ ನಡೆಯಲಾಗದ ಪರಿಸ್ಥಿತಿ ಇಂದು ನಮ್ಮ ರಾಜ್ಯದಲ್ಲಿದೆ. ಶಾಂತಿಯ ತೋಟದಲ್ಲಿ ಅಶಾಂತಿ ತಲೆದೋರಿದ್ದರೂ ರಾಜ್ಯ ಕಾಂಗ್ರೆಸ್ ಗಾಂಧಿಜೀ ಹೆಸರಲ್ಲಿ ಸಮಾವೇಶ ನಡೆಸುತ್ತಿದೆ. ನಕಲಿ ಗಾಂಧಿಗಳಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಕೂಡಾ ಇಂದಿನ ಗಾಂಧಿ ಭಾರತ ಸಮಾವೇಶಕ್ಕೆ ಆಗಮಿಸಿದ್ದಾರೆ. ಕಾಂಗ್ರೆಸ್ ನಾಯಕರು ರಾಜ್ಯಕ್ಕೆ ಆಗಮಿಸಿದ ಹೊತ್ತಿನಲ್ಲೇ ಸಿದ್ದರಾಮಯ್ಯ ಆಡಳಿತದಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ನಡೆದಿದೆ. ಹೆಣ್ಣಿಗೆ ರಕ್ಷಣೆ ಕೊಡಲಾಗದ ಮಣ್ಣಿನಲ್ಲಿ ಗಾಂಧಿ ಭಾರತ ಸಮಾವೇಶ ಯಾವ ಪೌರುಷಕ್ಕೆ? ಎಂದು ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದೆ.
ಹತ್ರಾಸ್ ಪ್ರಕರಣದಲ್ಲಿ ಭಾರೀ ಆಸಕ್ತಿ ತೋರಿದ್ದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ಥೆಯನ್ನು ಭೇಟಿ ಮಾಡಿ ಧೈರ್ಯ ತುಂಬುವ ಧೈರ್ಯ ತೋರುವಿರಾ ಎಂದು ಸವಾಲು ಹಾಕಿದೆ.












Click it and Unblock the Notifications