ʼಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಹಣ ಇರಲ್ಲʼ; ಆರ್.ಅಶೋಕ್ ಹೀಗಂದಿದ್ಯಾಕೆ?
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷ ನಾಯಕ ಆರ್.ಅಶೋಕ್ ಟಾಂಗ್ ನೀಡಿದ್ದಾರೆ. ಬೇರೆ ರಾಜ್ಯದಲ್ಲಿ ಈ ಗ್ಯಾರಂಟಿ ಯೋಜನೆಗಳಿಂದ ಆಗಿರುವ ಆರ್ಥಿಕ ಸಂಕಷ್ಟದ ವಿಚಾರವನ್ನು ಮುಂದಿಟ್ಟುಕೊಂಡು ರಾಜ್ಯ ಸರ್ಕಾರವನ್ನು ತಿವಿದಿದ್ದಾರೆ. ಅಲ್ಲದೆ, ರಾಜ್ಯದಲ್ಲೂ ಇದೇ ದುರ್ಗತಿ ಬರಲಿದೆ ಎಂದೂ ಎಚ್ಚರಿಸಿದ್ದಾರೆ.
ರಾಜ್ಯ ಕರ್ನಾಟಕ ಸರ್ಕಾರದ ಅವಾಸ್ತವಿಕ ಗ್ಯಾರಂಟಿಗಳು ಮತ್ತು ಅವುಗಳ ಅಪ್ರಬುದ್ಧ ಅನುಷ್ಠಾನದಿಂದ ಸರ್ಕಾರದ ಆರ್ಥಿಕ ಸ್ಥಿತಿ ದಿವಾಳಿಯಾಗಿದ್ದು, ಕಾಂಗ್ರೆಸ್ ಆಡಳಿತದಲ್ಲಿರುವ ಹಿಮಾಚಲ ಪ್ರದೇಶದ ರೀತಿಯಲ್ಲಿ ಕರ್ನಾಟಕದಲ್ಲೂ ಸರ್ಕಾರಿ ನೌಕರರಿಗೆ ಸಂಬಳ ಕೊಡಲೂ ಹಣವಿಲ್ಲದ ದುಸ್ಥಿತಿ ಬರುವ ದಿನ ಬಹಳ ದೂರವಿಲ್ಲ ಎಂದು ಆರ್.ಅಶೋಕ್ ಹೇಳಿದ್ದಾರೆ.

ಒಳ್ಳೆಯ ಆಡಳಿತಕ್ಕೆ, ಹಣಕಾಸು ನಿರ್ವಹಣೆಗೆ ಹೆಸರುವಾಸಿಯಾಗಿದ್ದ ಕರ್ನಾಟಕಕ್ಕೆ, ಕಾಂಗ್ರೆಸ್ ಸರ್ಕಾರದ 'ಕರ್ನಾಟಕ ಮಾಡೆಲ್'ಗೆ ಸಿಲುಕಿ ನಗೆಪಾಟಲಿಗೀಡಾಗುವ ಪರಿಸ್ಥಿತಿ ಬಂದಿದೆ ಎಂದಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಏನಾಗಿದೆ?: ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳನ್ನು ನೀಡಿರುವ ಸರ್ಕಾರವು ಇದೀಗ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಇದರ ಪರಿಣಾಮ ಸರ್ಕಾರದ ಎಲ್ಲ ಸಚಿವರು ಹಾಗೂ ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ ಎರಡು ತಿಂಗಳು ಯಾವುದೇ ಸಂಬಳ ಅಥವಾ ಭತ್ಯೆ ಕೊಡಲ್ಲ ಎಂದು ಶಾಕ್ ನೀಡಿದೆ ಹಿಮಾಚಲ ಪ್ರದೇಶ ಸರ್ಕಾರ.

ರಾಜ್ಯದ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರಿಗೆ 2 ತಿಂಗಳವರೆಗೆ ಯಾವುದೇ ವೇತನ ಹಾಗೂ ಭತ್ಯೆ ನೀಡಲಾಗುವುದಿಲ್ಲ ಎಂದು ಹಿಮಾಚಲ ಪ್ರದೇಶದ ಸಿಎಂ ಸುಖವಿಂದರ್ ಸಿಂಗ್ ಸುಖು ಅಲ್ಲಿನ ವಿಧಾನಸಭೆಗೆ ತಿಳಿಸಿದ್ದಾರೆ.
ಈ ಬಗ್ಗೆ ಅಲ್ಲಿನ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿದ ನಂತರ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ ಮುಂದಿನ ಎರಡು ತಿಂಗಳು ಯಾವುದೇ ಸಂಬಳ, ಟಿಎ-ಡಿಎ ತೆಗೆದುಕೊಳ್ಳುವುದಿಲ್ಲ ಎಂದು ತಮ್ಮ ಸಂಪುಟದ ಎಲ್ಲ ಸದಸ್ಯರು ನಿರ್ಧಸಿರುವುದಾಗಿ ಸಿಎಂ ಸುಖ್ವಿಂದರ್ ಹೇಳಿದ್ದಾರೆ. ಈ ನಿರ್ಧಾರದಿಂದ ಕೇವಲ ಒಂದು ಸಣ್ಣ ಮೊತ್ತವಷ್ಟೆ. ಇದರ ಜೊತೆಗೆ ಎಲ್ಲ ರಾಜ್ಯದ ಶಾಸಕರು ಕೂಡ ಕೊಡುಗೆ ನೀಡಬೇಕು ಎಂದು ಕೋರಿಕೊಂಡಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರದ ಅಸಮರ್ಪಕ ಆಡಳಿತವೇ ಈ ದುಸ್ಥಿತಿಗೆ ಕಾರಣ ಎಂದು ಹೇಳಲಾಗಿದ್ದು, ಹಳೆಯ ಪಿಂಚಣಿ ಯೋಜನೆ, ಮಹಿಳೆಯರಿಗೆ 1,500 ರೂಪಾಯಿ ನೀಡುವ ಗ್ಯಾರಂಟಿ ಯೋಜನೆ, ಉಚಿತ ವಿದ್ಯುತ್ ಯೋಜನೆಗಳಿಂದಾಗಿ ಸಾವಿರಾರು ಕೋಟಿ ಸಾಲದ ಸುಳಿಯಲ್ಲಿ ಸರ್ಕಾರ ಸಿಲುಕಿಕೊಂಡಿದೆ ಎನ್ನಲಾಗಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಇದೇ ಮಾದರಿಯಲ್ಲಿ ಹಿಮಾಚಲ ಪ್ರದೇಶದಲ್ಲೂ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿರುವುದು ಇದೀಗ ಸಂಕಷ್ಟಕ್ಕೆ ದೂಡಿದೆ. ಅಲ್ಲಿನ ಸರ್ಕಾರವು ಮಹಿಳೆಯರಿಗೆ 1,500 ರೂಪಾಯಿ ನೀಡುವ ಗ್ಯಾರಂಟಿ ಯೋಜನೆಯನ್ನು ಘೋಷಣೆ ಮಾಡಿದ್ದು, ಸುಮಾರು 5 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿದ್ದು, ಈ ಯೋಜನೆಗೆ ವಾರ್ಷಿಕ 800 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚವಾಗಲಿದೆಯಂತೆ.
ರಾಜ್ಯ ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬಂದ ನಂತರ ಗೃಹಲಕ್ಷ್ಮಿ ಯೋಜನೆ, ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಯುವನಿಧಿ ಎನ್ನುವ ಐದು ಉಚಿತ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಇತ್ತೀಚೆಗೆ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಕೇಳಿಬರುತ್ತಿದೆ. ಹಾಗಾಗಿ ಈ ಯೋಜನೆಗಳಿಂದಲೂ ರಾಜ್ಯ ಸರ್ಕಾರ ಆರ್ಥಿಕ ದಿವಾಳಿಗೆ ಸಿಲುಕಲಿದೆ ಎಂದು ಟೀಕೆ ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.












Click it and Unblock the Notifications