ವಿಧಾನಸೌಧದಲ್ಲಿ ಕಚೇರಿ ಉದ್ಘಾಟಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ್
ಬೆಂಗಳೂರು, ನವೆಂಬರ್ 23: ವಿರೋಧ ಪಕ್ಷದ ನಾಯಕರಾಗಿ ಇತ್ತೀಚೆಗೆ ಆಯ್ಕೆಯಾಗಿರುವ ಬಿಜೆಪಿಯ ಆರ್ ಅಶೋಕ್ ಅವರು ಗುರುವಾರ ವಿಧಾನಸೌಧದಲ್ಲಿ ತಮ್ಮ ಕಚೇರಿಯನ್ನು ಉದ್ಘಾಟಿಸಿದರು. ಈ ವೇಳೆ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಾಥ್ ನೀಡಿದರು.
ಮೇ ನಲ್ಲಿ ವಿಧಾನಸಭಾ ಚುನಾವಣೆ ನಡೆದ ಬಳಿಕ ಸುಮಾರು 6 ತಿಂಗಳುಗಳ ಕಾಲ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇತ್ತು. ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷರ ಅವಧಿಯೂ ಮುಗಿದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ಎರಡು ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಿತ್ತು. ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಬಿಎಸ್ ಯಡಿಯೂರಪ್ಪ ಅವರ ಮಗ, ಶಾಸಕ ಬಿವೈ ವಿಜಯೇಂದ್ರ ನೇಮಕವಾದರೆ, ವಿಧಾನಸಭೆ ವಿರೋಧ ಪಕ್ಷದ ನಾಯಕನಾಗಿ ಆರ್ ಅಶೋಕ್ ಅವರು ನೇಮಕವಾಗಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಕರ್ನಾಟಕದಿಂದ 28 ಸ್ಥಾನಗಳನ್ನು ಗೆಲ್ಲುವ ಉಮೇದಿನಲ್ಲಿರುವ ಬಿಜೆಪಿ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ಮುಂದಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷರಾದ ಬಿವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ತಮ್ಮ ಪಕ್ಷ ಸಂಘಟನೆ ಕೆಲಸ ಶುರು ಮಾಡಿದ್ದಾರೆ. ಇದಕ್ಕಾಗಿ ರಾಜ್ಯದಾದ್ಯಂತ ಪ್ರವಾಸವನ್ನು ಕೈಗೊಂಡಿದ್ದಾರೆ.
ಆಡಳಿತರೂಢ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಹೇಳುತ್ತಿರುವ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಕೇವಲ ಆರೇ ತಿಂಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಮಾಡಿದ ಸಾಧನೆಗಳ ಪಟ್ಟಿ ನೀಡಿದೆ.
ಬರಗಾಲ ನಿರ್ವಹಣೆ ವೈಫಲ್ಯ, ಕಲುಷಿತ ನೀರಿನಿಂದ ಅಪಾರ ಸಾವು-ನೋವು, ರೈತರ ಸರಣಿ ಆತ್ಮಹತ್ಯೆ, ಶ್ಯಾಡೋ ಸಿಎಂ ಪ್ರಭಾವ, ವರ್ಗಾವಣೆ ದಂಧೆ, ಗುತ್ತಿಗೆದಾರರಿಂದ ಕಲೆಕ್ಷನ್, ₹100 ಕೋಟಿ ಅಕ್ರಮ ಹಣ ಮಂಚದಡಿ ಪತ್ತೆ, ಹಿಂದೂಗಳ ಮೇಲೆ ಹಲ್ಲೆ -ಹತ್ಯೆ, ಪಂಚ ರಾಜ್ಯ ಚುನಾವಣೆಗೆ ಹಣ, ಗಾಟ, ಕಾಸಿಗಾಗಿ ಪೋಸ್ಟಿಂಗ್, ಅಕ್ರಮ ನೇಮಕಾತಿ ಪರೀಕ್ಷೆ, ಶಾಸಕರಿಗಿಲ್ಲ ಅನುದಾನ, ಕುರ್ಚಿಗಾಗಿ ಕಾದಾಟ, ಸಿಎಂ ಡಿನ್ನರ್, ಬ್ರೇಕ್‌ಫಾಸ್ಟ್ ಪಾರ್ಟಿ, ಕಳ್ಳತನದಿಂದ ಕಾವೇರಿ ಪೂರೈಕೆ, ಕಲೆಕ್ಷನ್ ಏಜೆಂಟ್ ಸುರ್ಜೇವಾಲಾ ಅಧಿಕಾರ, ಆರು ತಿಂಗಳಿಗೆ ಇಷ್ಟೆಲ್ಲಾ ಹಳವಂಡಗಳಾದರೆ, ಒಂದು ವರ್ಷಕ್ಕೆ ಕರ್ನಾಟಕದ ಪರಿಸ್ಥಿತಿ ಹೇಗಿರಬೇಡ ಯೋಚಿಸಿ ಎಂದು ಕೇಳಿದೆ.
ಬೇರೆ ರಾಜ್ಯಗಳ ಚುನಾವಣೆ ಬಗ್ಗೆ ಗಮನ ಕೊಡುತ್ತಿರುವ ಕಾಂಗ್ರೆಸ್ಸಿಗರಿಗೆ ನಮ್ಮ ರಾಜ್ಯದ ಜನತೆಯ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ. ಬೆಳೆ ಬೆಳೆಯುವ ಸಮಯದಲ್ಲಿ ಸರಿಯಾಗಿ 5 ತಾಸು ವಿದ್ಯುತ್ ನೀಡದೆ, ರೈತರ ಬೆಳೆ ಹಾನಿಯಾದ ಬಳಿಕ, ಬೆಳಗಾವಿ ಅಧಿವೇಶನದ ಹಿನ್ನಲೆಯಲ್ಲಿ ವಿದ್ಯುತ್ ಕೊಡಲು ಮುಂದಾಗಿದೆ. ಇದು ಬೇಜವಾಬ್ದಾರಿ ಸರ್ಕಾರ ಎಂದು ಆರ್ ಅಶೋಕ್ ಹೇಳಿದ್ದಾರೆ.
ಕಳೆದ ಬಾರಿ ಸರ್ಕಾರ ಬೆಳಗಾವಿಯಿಂದ ಬಿದ್ದಿತ್ತು. ಈ ಬಾರಿ ದುಬೈನಿಂದ ಸರ್ಕಾರ ಬೀಳುತ್ತೆ. ಈಗಾಗಲೇ ದುಬೈಗೆ 5 ಜನ ಹೋಗಿದಾರಂತೆ. ಕಾಂಗ್ರೆಸ್‌ನವರು ಬಿಜೆಪಿ ವಿರುದ್ದ 40% ಆರೋಪ ಮಾಡಿದ್ದರು. ಆದರೆ ಈ ಕಾಂಗ್ರೆಸ್ ಸರ್ಕಾರ 60% ಸರ್ಕಾರ. ಒಂದು ಕಡೆ 50 ಕೋಟಿ ರೂ., ಒಂದು ಕಡೆ 54 ಕೋಟಿ ರೂ. ಸಿಕ್ತು. ಹಲೋ ಅಪ್ಪಾ ಅಂತಾ ವೀಡಿಯೋ ಬಂತಲ್ಲಾ ಇದಕ್ಕಿಂತ ದಾಖಲೆ ಬೇಕಾ? ಇದು 60% ಸರ್ಕಾರ ಅನ್ನೋಕೆ ಎಂದು ಅಶೋಕ್ ತಿರುಗೇಟು ನೀಡಿದ್ದಾರೆ.












Click it and Unblock the Notifications