Minister B. Nagendra: "ಒಂದು ಜಿಲ್ಲೆ ಒಂದು ಕ್ರೀಡೆ" ಯೋಜನೆ ಜಾರಿಗೆ ಚಿಂತನೆ: ಸಚಿವ ಬಿ.ನಾಗೇಂದ್ರ
ಬೆಂಗಳೂರು, ಜುಲೈ.11: ರಾಜ್ಯದಲ್ಲಿ ವಿವಿಧೆಡೆ ಸ್ಥಳೀಯವಾಗಿ ಪ್ರಸಿದ್ಧವಾಗಿರುವ ಕ್ರೀಡೆಗಳನ್ನು ಗುರುತಿಸಿ ಅವುಗಳಲ್ಲಿ ತೊಡಗಿಸಿಕೊಂಡಿರುವ ಕ್ರೀಡಾಪಟುಗಳನ್ನು ಗುರುತಿಸಿ ಸೂಕ್ತ ತರಬೇತಿ ನೀಡಿ ಸಶಕ್ತಗೊಳಿಸುವ ನಿಟ್ಟಿನಲ್ಲಿ "ಒಂದು ಜಿಲ್ಲೆ ಒಂದು ಕ್ರೀಡೆ" ಯೋಜನೆ ಜಾರಿಗೊಳಿಸಲು ಚಿಂತನೆ ನಡೆಸಲಾಗಿದ್ದು,ಶೀಘ್ರ ಜಾರಿಗೊಳಿಸಲಾಗುವುದು ಎಂದು ಪರಿಶಿಷ್ಟ ಪಂಗಡಗಳ ಕಲ್ಯಾಣ,ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಬಿ.ನಾಗೇಂದ್ರ ಅವರು ಹೇಳಿದರು.
ವಿಧಾನಸೌಧದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದೊಂದು ಪ್ರದೇಶದಲ್ಲಿ ಒಂದೊಂದು ಕ್ರೀಡೆಗಳು ಹೆಸರುವಾಸಿ. ವಿಜಯನಗರದಲ್ಲಿ ಕುಸ್ತಿ,ವಿಜಯಪುರದಲ್ಲಿ ಸೈಕ್ಲಿಂಗ್ ನಂತೆ ಎಲ್ಲ ಜಿಲ್ಲೆಗಳಲ್ಲಿಯೂ ಒಂದೊಂದು ಕ್ರೀಡೆಗಳು ಹೆಸರುವಾಸಿಯಾಗಿದ್ದು, ಆ ಕ್ರೀಡೆಗಳಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾವಂತ ಕ್ರೀಡಾಪಟುಗಳನ್ನು ಹೋಬಳಿಮಟ್ಟದಿಂದ ಜಿಲ್ಲಾಮಟ್ಟದವರೆಗೆ ಗುರುತಿಸಿ ಅವರಿಗೆ ಸೂಕ್ತ ತರಬೇತಿ ನೀಡಿ ಸನ್ನದ್ಧಗೊಳಿಸಲಾಗುವುದು ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಡೀ ದೇಶದಲ್ಲಿಯೇ ಅತ್ಯುತ್ತಮವಾದ ಬಜೆಟ್ ಮಂಡಿಸಿದ್ದಾರೆ. ಕಲ್ಯಾಣ ಕರ್ನಾಟಕ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 5ಸಾವಿರ ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಸಿಎಂ ಅವರು ಒದಗಿಸಿದ್ದು, ಸದರಿ ಅನುದಾನದ ಸದ್ಭಳಕೆ ಮಾಡಿಕೊಂಡು ಸಮಗ್ರ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ಕ್ರಿಯಾಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಪರಿಶಿಷ್ಟ ಪಂಗಡ ಸಮುದಾಯಗಳ ಕಲ್ಯಾಣಕ್ಕೆ 2013ರಿಂದ ಇಲ್ಲಿಯವರೆಗೆ ಸಾವಿರಾರು ಕೋಟಿ ರೂ.ಗಳು ಖರ್ಚು ಮಾಡಲಾಗಿದ್ದು,ಸರಕಾರದ ಪ್ರಯೋಜನ ಪಡೆದುಕೊಂಡಿರುವ ಪರಿಶಿಷ್ಟ ಪಂಗಡದ ಫಲಾನುಭವಿಗಳ ಜೀವನಮಟ್ಟದಲ್ಲಿ ಸುಧಾರಣೆಯಾಗಿದೆಯೇ ಎಂಬುದರ ಕುರಿತು ಇಲಾಖೆಯಿಂದ ಮೌಲ್ಯಮಾಪನ ನಡೆಸಲಾಗುವುದು ಎಂದು ಹೇಳಿದರು.
ಬಜೆಟ್ ನಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಕಲ್ಯಾಣಕ್ಕೆ 1588.23 ಕೋಟಿ ರೂ.: ಪರಿಶಿಷ್ಟ ಪಂಗಡದ ಸಮುದಾಯದ ಕಲ್ಯಾಣಕ್ಕಾಗಿ ಈ ಬಾರಿಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1588.23ಕೋಟಿ ರೂ.ಗಳನ್ನು ಒದಗಿಸಿದ್ದಾರೆ. ಈಗ ನೀಡಲಾಗಿರುವ ಬಜೆಟ್ ನಲ್ಲಿ ಪರಿಶಿಷ್ಟ ಪಂಗಡದ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

ಪರಿಶಿಷ್ಟ ಪಂಗಡಗಳ ಜನಾಂಗದಲ್ಲಿ ಸೋಲಿಗ ಸಮುದಾಯ ಒಳಗೊಂಡ ಜೇನುಕುರುಬ, ಕಾಡುಕುರುಬ, ಕೊರಗ, ಇರುಳಿಗ, ಬೆಟ್ಟಕುರುಬ ಇತ್ಯಾದಿ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದವರ ಸಮಗ್ರ ಅಭಿವೃದ್ಧಿಗಾಗಿ 50 ಕೋಟಿ ಮೀಸಲಿಡಲಾಗುತ್ತಿದೆ ಎಂದರು.
ರಾಜ್ಯದ 8 ಜಿಲ್ಲೆಗಳಲ್ಲಿ ವಾಸ ಮಾಡುತ್ತಿರುವ 11 ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಪೌಷ್ಟಿಕ ಆಹಾರ ಯೋಜನೆಯನ್ನು 6 ತಿಂಗಳ ಬದಲು 12 ತಿಂಗಳಿಗೆ ವಿಸ್ತರಿಸಿ 50 ಕೋಟಿ ರೂ.ಗಳ ಮೀಸಲಿಡಲಾಗುತ್ತಿದೆ ಎಂದರು. ಅರಣ್ಯ ಉತ್ಪನ್ನಗಳ ಸಂರಕ್ಷಣೆ ಮತ್ತು ಮೌಲ್ಯವರ್ಧನೆ, ಬುಡಕಟ್ಟು ಪ್ರದೇಶಗಳಲ್ಲಿ 100 ಅರಣ್ಯ ಉತ್ಪನ್ನ ಘಟಕಗಳನ್ನು TRIFED ಸಮನ್ವಯದಲ್ಲಿ ಸ್ಥಾಪನೆ ಮಾಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡಕ್ಕೆ ಸೇರಿದ 10 ಕ್ರೈಸ್ ವಸತಿ ಶಾಲೆ ಕ್ರೀಡಾ ಪ್ರೋತ್ಸಾಹಕ್ಕೆ ತಲಾ 2ಕೋಟಿಯಂತೆ 20 ಕೋಟಿ ಮೀಸಲಿಡಲಾಗುತ್ತಿದೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ವಿಶ್ವದಲ್ಲಿ 250 ರೊಳಗೆ ಯೂನಿವರ್ಸಿಟಿ ರಾಂಕಿಂಗ್ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಪದವಿ & ಸ್ನಾತಕೋತ್ತರ ಉನ್ನತ ಶಿಕ್ಷಣವನ್ನು ವಿದೇಶ ವ್ಯಾಸಂಗದ ಸಂಪೂರ್ಣ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಈ ಯೋಜನೆ ಅನುಷ್ಠಾನಕ್ಕೆ 36 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.
ಈ ಸಾಲಿನ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ 236 ಕೋಟಿ ರೂ.ಗಳು ನೀಡಿದ್ದಾರೆ ಎಂದು ಸಚಿವ ನಾಗೇಂದ್ರ ಅವರು ತಿಳಿಸಿದರು.
ಒಲಿಂಪಿಕ್ ಹಾಗೂ ಪ್ಯಾರಾಲಿಂಪಿಕ್ ವಿಜೇತರಿಗೆ ಗ್ರೂಪ್- A ಹುದ್ದೆ ಮತ್ತು ಏಷಿಯನ್ ಹಾಗೂ ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೆ ಗ್ರೂಪ್ -B ಹುದ್ದೆ ನೀಡಲು ಪ್ರಸಕ್ತ ಸಾಲಿನಿಂದ ಚಾಲನೆ ನೀಡಲಾಗುವುದು ಎಂದರು.
ಕ್ರೀಡಾ ಚಟುವಟಿಕೆಯಲ್ಲಿ ವಿಶೇಷ ಚೇತನರು ಮತ್ತು ಮಹಿಳೆಯರು ಭಾಗವಹಿಸಲು ಅಗತ್ಯ ಸೌಕರ್ಯ ಹಾಗೂ ತರಬೇತಿದಾರರ ಸೇವೆ ಒದಗಿಸಲು 10 ಕೋಟಿ ಅನುದಾನ. ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾ ವಸ್ತು ಸಂಗ್ರಹಾಲಯ ಸ್ಥಾಪಿಸಲು 5 ಕೋಟಿ ಅನುದಾನ. ಕ್ರೀಡಾಪಟುಗಳು ತಂಗಲು ಸುಸಜ್ಜಿತ ಕ್ರೀಡಾ ವಸತಿ ನಿಲಯವನ್ನು ನಿರ್ಮಿಸಲು 10 ಕೋಟಿ ರೂಪಾಯಿ ಅನುದಾನ ಒದಗಿಸಲು ಉದ್ದೇಶಿಸಲಾಗಿದೆ ಎಂದರು.












Click it and Unblock the Notifications