ಯಾರ ಮಾತೂ ಕೇಳಲ್ಲ, ಸೀಟ್ ಬೆಲ್ಟ್ ಧರಿಸದ ಕೇಸುಗಳ ಸಂಖ್ಯೆ 3,35,309
ಬೆಂಗಳೂರು, ಡಿಸೆಂಬರ್ 29: ಸಂಚಾರಿ ನಿಯಮಗಳನ್ನು ಪಾಲಿಸುವ ವಿಚಾರದಲ್ಲಿ ಕರ್ನಾಟಕದ ಜನರು ಯಾರ ಮಾತನ್ನು ಕೇಳುವುದಿಲ್ಲ. ದ್ವಿಚಕ್ರ ವಾಹನಗಳದ್ದು ಒಂದು ಸಮಸ್ಯೆಯಾದರೆ, ನಾಲ್ಕು ಚಕ್ರದ ವಾಹನ ಸವಾರರದ್ದು ಮತ್ತೊಂದು ಸಮಸ್ಯೆ. ಒಟ್ಟಿನಲ್ಲಿ ಎಷ್ಟು ಜಾಗೃತಿ ಮೂಡಿಸಿದರೂ ಸಹ ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಕಟ್ಟುವುದು ಮಾತ್ರ ತಪ್ಪುವುದಿಲ್ಲ.
ಸಂಚಾರಿ ಪೊಲೀಸರು ಸೀಟ್ ಬೆಲ್ಟ್ ಧರಿಸದಿರುವ ಬಗ್ಗೆ ತಪಾಸಣೆ ಮಾಡಲಾಗುವುದು. ಸೀಟ್ ಬೆಲ್ಟ್ ಧರಿಸಿ, ನೀವೂ ಸುರಕ್ಷಿತವಾಗಿರಿ, ನಿಮ್ಮವರನ್ನೂ ಸುರಕ್ಷಿತವಾಗಿರಿಸಿ. ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸಿ ಎಂದು ಜಾಗೃತಿ ಮೂಡಿಸುತ್ತಲೇ ಇದ್ದಾರೆ. ಆದರೆ ಜನರು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಅಂಕಿ ಅಂಶಗಳಲ್ಲಿ ಸಾಬೀತಾಗಿದೆ.

ಕರ್ನಾಟಕದಲ್ಲಿ 2024ರ ಜೂನ್ ತಿಂಗಳ ತನಕ ಸೀಟ್ ಬೆಲ್ಟ್ ಧರಿಸದಿರುವ 3,35,309 ಪ್ರಕರಣಗಳು ದಾಖಲಾಗಿವೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವ ಪ್ರಕರಣಗಳ ಸಂಖ್ಯೆ ಶೇ 17.39ರಷ್ಟಿದೆ.
ಕಡಿಮೆಯಾಗಿದ್ದ ಪ್ರಕರಣಗಳು: ಕರ್ನಾಟಕದಲ್ಲಿ 2021ರಲ್ಲಿ ಸೀಟ್ ಬೆಲ್ಟ್ ಧರಿಸದಿರುವ
3,96,300 ಕೇಸುಗಳು ದಾಖಲಾಗಿತ್ತು. ಒಟ್ಟು ಸಂಚಾರ ನಿಯಮ ಉಲ್ಲಂಘನೆ ಕೇಸುಗಳಲ್ಲಿ ಸೀಟ್ ಬೆಲ್ಟ್ ಧರಿಸದಿರುವ ಪ್ರಕರಣಗಳು ಶೇ 20.56ರಷ್ಟಿತ್ತು.
ಆದರೆ ಅಚ್ಚರಿ ಎಂಬಂತೆ 2022ರಲ್ಲಿ ಸೀಟ್ ಬೆಲ್ಟ್ ಧರಿಸದಿರುವ ಪ್ರಕರಣಗಳು ಕಡಿಮೆಯಾಗಿದ್ದವು. 2,82,893 ಕೇಸುಗಳು ದಾಖಲಾಗಿದ್ದವು. 2023ರಲ್ಲಿ ರಾಜ್ಯದಲ್ಲಿ ಒಟ್ಟು ದಾಖಲಾದ ಈ ಮಾದರಿ ಕೇಸುಗಳ ಸಂಖ್ಯೆ 9,13,297. ಆದರೆ 2024ರ ಜೂನ್ ವೇಳೆಗೆ ರಾಜ್ಯದಲ್ಲಿ 3,35,309 ಕೇಸುಗಳು ದಾಖಲಾಗಿವೆ.
ಈ ಅಂಕಿ ಸಂಖ್ಯೆಗಳನ್ನು ಮುಂದಿಟ್ಟುಕೊಂಡು ಸಂಚಾರಿ ಪೊಲೀಸರು ಜನರಲ್ಲಿ ಸೀಟ್ ಬೆಲ್ಟ್ ಧರಿಸುವ ಕುರಿತು ಹೆಚ್ಚಿನ ಅರಿವು ಮೂಡಿಸಲು ಮುಂದಾಗಿದ್ದಾರೆ. ಕಾರಿನಲ್ಲಿ ಕುಳಿತು ಪೊಲೀಸರು ಹಿಡಿಯಲಿಲ್ಲ ಎಂದರೂ ಕ್ಯಾಮರಾ ಮೂಲಕ ಸೀಟ್ ಬೆಲ್ಟ್ ಧರಿಸದಿರುವ ಪ್ರಕರಣಗಳನ್ನು ಪತ್ತೆ ಹಚ್ಚಿ ದಂಡವನ್ನು ವಸೂಲಿ ಮಾಡಲಾಗುತ್ತಿದೆ.
ಗೃಹ ಸಚಿವ ಡಾ. ಜಿ. ಪರಮೇಶ್ವರ ಈ ಕುರಿತು ಮಾತನಾಡಿದ್ದು, "ಕಡ್ಡಾಯವಾಗಿ ಚಾಲಕ ಮತ್ತು ಮುಂಭಾಗ ಕುಳಿತಿರುವವರು ಸೀಟ್ ಬೆಲ್ಟ್ ಧರಿಸಬೇಕು. ಈ ಕುರಿತು 1980: 194 (6) ಕಾನೂನಿ ನಿಯಮದ ಅಡಿ ಆದೇಶವನ್ನು ಹೊರಡಿಸಲಾಗಿದೆ. 2019ರಲ್ಲಿಯೇ ರಾಜ್ಯದಲ್ಲಿ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ಸೀಟ್ ಬೆಲ್ಟ್ ಧರಿಸದಿರುವುದಕ್ಕೆ ಯಾವುದೇ ವಿನಾಯಿತಿ ನೀಡುವುದಿಲ್ಲ" ಎಂದು ಹೇಳಿದ್ದಾರೆ.
ಸೀಟ್ ಬೆಲ್ಟ್ ಧರಿಸುವ ಕುರಿತು ಸಾಮಾಜಿಕ ಜಾಲತಾಣ, ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪೊಲೀಸರು ಅರಿವು ಮೂಡಿಸುತ್ತಲೇ ಇದ್ದಾರೆ. ದೂರ ಪ್ರಯಾಣ ಮಾಡುವಾಗ ಸೀಟ್ ಬೆಲ್ಟ್ ಧರಿಸುತ್ತಾರೆ. ಆದರೆ ನಗರದಲ್ಲಿ ಸಂಚಾರ ನಡೆಸುವಾಗ ನಿಯಮವನ್ನು ಹಲವಾರು ಜನರು ಪಾಲಿಸುವುದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ನಿಯಮಗಳ ಅನ್ವಯ ಚಾಲಕ ಸೀಟ್ ಬೆಲ್ಟ್ ಧರಿಸದಿದ್ದ ಪ್ರಕರಣದಲ್ಲಿ ರೂ. 500 ದಂಡವನ್ನು ವಿಧಿಸಲು ಅವಕಾಶವಿದೆ. ಈಗಾಗಲೇ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಈ ಮಾದರಿ ಕೇಸುಗಳಲ್ಲಿ ಶೇ 80ರಷ್ಟು ದಂಡವನ್ನು ಸಂಗ್ರಹ ಮಾಡಲಾಗಿದೆ. ಉಳಿದ ವಾಹನ ಸವಾರರಿಗೆ ನೋಟಿಸ್ ನೀಡಲಾಗಿದೆ.
ಒಂದೇ ದಿನ ಪದೇ ಪದೇ ಸೀಟ್ ಬೆಲ್ಟ್ ಧರಿಸದಿರುವ ಕೇಸಿನಲ್ಲಿ ಚಾಲಕ ಸಿಕ್ಕಿಬಿದ್ದರೆ ದಂಡವನ್ನು ಹಾಕಲಾಗುತ್ತದೆ. ದಿನಕ್ಕೆ ಒಮ್ಮೆ ಮಾತ್ರ ದಂಡ ವಿಧಿಸಬೇಕು ಎಂಬ ನಿಯಮವಿಲ್ಲ. ಈ ಮಾದರಿ ನಿಯಮ ಜಾರಿಗೊಳಿಸುವ ಯಾವುದೇ ಪ್ರಸ್ತಾಪವೂ ಸರ್ಕಾರದ ಮುಂದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.












Click it and Unblock the Notifications