ರಾಜ್ಯದಲ್ಲಿ ಮಂಕಿಪಾಕ್ಸ ಇಲ್ಲ: ಏರ್ಫೋರ್ಟ್, ಬಂದರುನಲ್ಲಿ ಕಟ್ಟೆಚ್ಚರ
ಬೆಂಗಳೂರು ಆಗಸ್ಟ್ 06: ಕರ್ನಾಟಕದಲ್ಲಿ ಈವರೆಗೆ ಮಂಕಿ ಫಾಕ್ಸ್ ಪ್ರಕರಣಗಳು ಎಲ್ಲಿಯೂ ಕಂಡು ಬಂದಿಲ್ಲ. ಬಂದರು, ವಿಮಾಣ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಇನ್ನು ಬೇರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಡುವ ವ್ಯಾಸ್ಕ್ಯುಲರ್ (ರಕ್ತನಾಳ ಸಮಸ್ಯೆ) ಸಮಸ್ಯೆ ವಿರುದ್ಧ ಅಗತ್ಯ ಎಚ್ಚರಿಕೆ ನೀಡಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ವಿಶ್ವ ವ್ಯಾಸ್ಕ್ಯುಲರ್ ದಿನ ಪ್ರಯುಕ್ತ ಶನಿವಾರ ವ್ಯಾಸ್ಕ್ಯುಲರ್ ಸರ್ಜನ್ಸ್ ಅಸೋಸಿಯೇಶನ್ ವತಿಯಿಂದ ಆಯೋಜಿಸಿದ್ದ ಟೌನ್‌ಹಾಲ್‌ನಿಂದ ಕಂಠೀರವ ಸ್ಟೇಡಿಯಂವರೆಗಿನ 'ಜಾಗೃತಿ ನಡಿ'ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮಂಕಿಪಾಕ್ಸ ಪ್ರಕರಣಗಳು ಇಲ್ಲ. ಇದ್ದ ಮೂರು ಶಂಕಿತರಿಗೆ ನೆಗಟಿವ್ ವರದಿ ಬಂದಿದೆ. ಹಾಗೆಂದು ಸರ್ಕಾರ ನಿರ್ಲಕ್ಷ್ಯ ಮಾಡದೇ ಅಗತ್ಯ ಮುಂಜಾಗ್ರತಾ ಎಚ್ಚರಿಕೆ ಕ್ರಮ ಕೈಗೊಂಡಿದ್ದೇವೆ ಎಂದರು.
ರಾಜ್ಯದಲ್ಲಿ ಆರಂಭದಿಂದಲೂ ಎಲ್ಲ ವಿಮಾನ ನಿಲ್ದಾಣಗಳಲ್ಲಿ ಹಾಗೂ ಬಂದರುಗಳಲ್ಲಿ 24 ಗಂಟೆಯೂ ಕಟ್ಟೆಚ್ಚರ, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಗೆಯ ಪಾಳಿಯನ್ನು ನಿಗದಿ ಮಾಡಲಾಗಿದೆ. ಬೇರೆ ರಾಜ್ಯಗಳಂತೆ ಕರ್ನಾಟಕದಲ್ಲಿ ಮಂಕಿಪಾಕ್ಸ ಪ್ರಕರಣ ಕಂಡುಬಂದಿಲ್ಲ. ಸ್ಕಿನ್ ರಾಶಸ್, ಸಲಿಂಗ ಕಾಮಿಗಳಲ್ಲಿ, ಸೋಂಕು ಸಂಪರ್ಕಿತರೊಂದಿಗಿನ ಸಂಪರ್ಕ ಸೇರಿದಂತೆ ಹಲವಾರು ಲಕ್ಷಣಗಳಿಂದ ಮಂಕಿಫಾಕ್ಸ್ ತಗುಲತ್ತದೆ. ಆದರೆ ಕೋವಿಡ್‌ನಂತೆ ಮಂಕಿಪಾಕ್ಸ ಮೂರು-ನಾಲ್ಕು ದಿನಗಳ ನಂತರ ಪತ್ತೆಯಾಗುತ್ತಿರುವುದು ಆತಂಕದ ವಿಷಯವಾಗಿದೆ ಎಂದು ಸುಧಾಕರ್ ಕಳವಳ ವ್ಯಕ್ತಪಡಿಸಿದರು.

ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸಿದ್ಧತೆ
ಎಲ್ಲೆಡೆ ಮಂಕಿಫಾಕ್ಸ್ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಅಗತ್ಯ ಎಚ್ಚರಿಕೆ ವಹಿಸುವಂತೆ ಸೂಚಿಸಿದ್ದೇವೆ. ಇನ್ನು ಮುಖ್ಯವಾಗಿ ಮಂಕಿಪಾಕ್ಸ ಕಂಡು ಬಂದರೆ ಅದಕ್ಕೆ ಬೇಕಾದ ಸೂಕ್ತ ಚಿಕಿತ್ಸೆಗೂ ರಾಜ್ಯ ಆಸ್ಪತ್ರೆಗಳಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಅಂತಾರಾಷ್ಟ್ರೀಯ ಪ್ರಯಾಣಿಕರು ನಿಯಮ ಪಾಲಿಸಬೇಕು
ಅಲ್ಲದೇ ಅಂತಾರಾಷ್ಟ್ರೀಯ ಪ್ರಯಾಣಿಕರು ಕರ್ನಾಟಕಕ್ಕೆ, ಬೆಂಗಳೂರು ಸೇರಿದಂತೆ ಯಾವುದೇ ಜಿಲ್ಲೆಗಳಿಗೆ ಬಂದರು ಅವರೆಲ್ಲ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇಥಿಯೋಪಿಯಾ ದೇಶದಿಂದ ಬಂದಿದ್ದ ವ್ಯಕ್ತಿಯೊಬ್ಬರಿಗೆ ಮಂಕಿ ಫಾಕ್ಸ್ ಇರುವ ಅನುಮಾನದ ಮೇಲೆ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆದರೆ ಅದು ಮಂಕಿಫಾಕ್ಸ್ ಅಲ್ಲ, ಸ್ಮಾಲ್ ಫಾಕ್ಸ್ ಎಂದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

ವ್ಯಾಸ್ಕ್ಯುಲರ್ ಸಮಸ್ಯೆ ಬಗ್ಗೆ ಅರಿವು ಅಗತ್ಯ
ದೇಶದಲ್ಲಿ ವ್ಯಾಸ್ಕ್ಯುಲರ್ ತಜ್ಞರು ಬಹಳ ಕಡಿಮೆ ಇದ್ದಾರೆ. ಈ ಆರೋಗ್ಯದ ಸಮಸ್ಯೆ ಬಗ್ಗೆ ನಗರ ಪ್ರದೇಶಗಳಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ವ್ಯಾಸ್ಕ್ಯುಲರ್ ಸಮಸ್ಯೆಗಳು ಬೇರೆ ಅನಾರೋಗ್ಯಕ್ಕೂ ದಾರಿ ಮಾಡಿಕೊಡುತ್ತವೆ. ಯುವಜನರರು ಹಾಗೂ ವೃತ್ತಿಪರರಿಗೆ ಈ ವ್ಯಾಸ್ಕ್ಯುಲರ್ ಸಮಸ್ಯೆ ಕುರಿತು ಜಾಗೃತಿ ಮೂಡಿಸುವ ಮೂಲಕ ನೆರವಾಗಬೇಕು.

ಏನಿದು ವ್ಯಾಸ್ಕ್ಯುಲರ್ ಸಮಸ್ಯೆ?
ಟ್ರಾಫಿಕ್ ಪೊಲೀಸರು ಸಾಮಾನ್ಯ ಜನರಿಗಿಂತ ಹೆಚ್ಚು ಕಾಲ ನಿಂತುಕೊಳ್ಳುತ್ತಾರೆ. ಹಾಗೆಯೇ ಶಿಕ್ಷಕರು, ಸರ್ಜನ್‌ಗಳು ಮತ್ತಿತರರು ಕೂಡ ಹೆಚ್ಚು ಸಮಯ ನಿಂತುಕೊಳ್ಳುತ್ತಾರೆ. ಇದರಿಂದಾಗಿ ವ್ಯಾಸ್ಕ್ಯುಲರ್ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಜಗತ್ತಿನಲ್ಲಿ ಪ್ರತಿ 6 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಕಾಲನ್ನು ಕಳೆದುಕೊಳ್ಳುವ ಸ್ಥಿತಿ ಇದೆ ಎಂದು ಅಂದಾಜಿಸಲಾಗಿದೆ. ರಕ್ತನಾಳದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಬೇಕು. ಇಲ್ಲವಾದರೆ ಅದು ಇನ್ನಿತರ ಆರೋಗ್ಯ ಸಮಸ್ಯೆ ತಂದೊಡ್ಡಬಹುದು. ಲಘು ವ್ಯಾಯಾಮ ಮಾಡಲು ರೂಢಿಸಿಕೊಳ್ಳಬೇಕು. ಇನ್ನು ವಿಶೇಷವಾಗಿ ಮಧುಮೇಹಿಗಳು ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ಸುಧಾಕರ್ ಹೇಳಿದರು.












Click it and Unblock the Notifications