ರಾಮನಗರ ಛಿದ್ರಕ್ಕೆ ಡಿಕೆಶಿ ಸ್ಕೆಚ್: ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದ ಡಿಕೆ ಸುರೇಶ್
ಸಹೋದರ ಡಿ.ಕೆ.ಸುರೇಶ್ ಅವರನ್ನ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಡಿ.ಕೆ ಶಿವಕುಮಾರ್ ಪ್ಲಾನ್ ನಡೆಸಿದ್ದು,ಈ ಕುರಿತು ಡಿ ಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು,ಮಾರ್ಚ್ 15: ರಾಜಕೀಯ ವಿರೋಧಿಗಳಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬಕ್ಕೆ ರಾಮನಗರ ಎನ್ನುವುದು ರಾಜಕೀಯ ಕರ್ಮಭೂಮಿ. ಈ ಬಾರಿಯ ಚುನಾವಣೆಯ ಮೂಲಕ ರಾಮನಗರದಲ್ಲಿ ಹಿಡಿತವನ್ನ ಸಾಧಿಸಲು ಡಿ ಕೆ ಶಿವಕುಮಾರ್ ಮಾಸ್ಟರ್ ಪ್ಲಾನ್ ನಡೆಸಿದ್ದರು.
ರಾಮನಗರ ಜಿಲ್ಲೆಯಲ್ಲಿ ತಮ್ಮ ಹಿಡಿತವನ್ನ ಸಾಧಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಸಂಸದ ಹಾಗೂ ಸಹೋದರ ಡಿ.ಕೆ.ಸುರೇಶ್ ಅವರನ್ನ ರಾಮನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ರಾಮನಗರ ವಿಧಾನಸಭಾ ಕ್ಷೇತ್ರವನ್ನ ವಶಕ್ಕೆ ಪಡೆಯಲು ಡಿ.ಕೆ ಶಿವಕುಮಾರ್ ಪ್ಲಾನ್ ನಡೆಸಿದ್ದು, ನನಗೆ ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿ, ರಾಜ್ಯ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ಉಪಚುನಾವಣೆಗಳನ್ನು ಮಾಡಿ ಮಾಡಿ ರೋಸಿ ಹೋಗಿದ್ದೇನೆ. ಮತ್ತೆ ಉಪ ಚುನಾವಣೆಗಳನ್ನು ಮಾಡಲು ನಾನು ಸಿದ್ದನಿಲ್ಲ. ನಾನು ಸ್ಪರ್ಧೆ ಮಾಡೋದಕ್ಕೆ ಸಿದ್ದನಿಲ್ಲ. ಈ ಬಗ್ಗೆ ಕ್ಷೇತ್ರದ ಜನರ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದರು.
ಈ ಬಗ್ಗೆ ನನಗೆ ಮಾಧ್ಯಮಗಳ ವರದಿ ಮೂಲಕ ಗೊತ್ತಾಗಿದೆ. ಚುನಾವಣಾ ಪ್ರಯುಕ್ತ ಬೇರೆ ಬೇರೆ ಕಾರ್ಯಗಳಲ್ಲಿ ಬ್ಯುಸಿ ಆಗಿದ್ದೇನೆ. ಇದುವರೆಗೆ ಯಾರೂ ರಾಜ್ಯ ನಾಯಕರು ಈ ಬಗ್ಗೆ ಚರ್ಚೆ ಮಾಡಿಲ್ಲ. ನನ್ನ ವ್ಯಾಪ್ತಿಯ ಎಲ್ಲ ಕ್ಷೇತ್ರಗಳಿಗೂ ನಾನೇ ಅಭ್ಯರ್ಥಿ ಅಂತ ಮತ ಕೇಳ್ತಾ ಇದ್ದೇನೆ.
ಲೋಕಸಭಾ ವ್ಯಾಪ್ತಿಯ ಎಲ್ಲ ಕ್ಷೇತ್ರಕ್ಕೂ ನಾನೇ ಅಭ್ಯರ್ಥಿ ಅಂತ, ನನಗೆ ಶಕ್ತಿ ಕೊಡಿ ಅಂತ ಮತ ಯಾಚನೆ ಮಾಡ್ತಾ ಇದ್ದೇನೆ. ನನಗೆ ಜವಾಬ್ದಾರಿ ಇರುವುದರಿಂದ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಎಲ್ಲ ಕ್ಷೇತ್ರಗಳಲ್ಲೂ ನನಗೆ ಚುನಾವಣೆ ನಿಲ್ಲಿ ಎನ್ನುವ ಒತ್ತಡ ಇದೆ. ರಾಮನಗರ, ಚನ್ನಪಟ್ಟಣ, ಆರ್ ಆರ್ ನಗರ ಸೇರಿ ಎಲ್ಲ ಕಡೆಯ ಕಾರ್ಯಕರ್ತರು ಕೂಡ ಕೇಳ್ತಾ ಇದ್ದಾರೆ ಎಂದರು.
ಧ್ರುವ ನಾರಾಯಣ್ ಪುತ್ರನಿಗೆ ಟಿಕೆಟ್ ನೀಡುವ ವಿಚಾರವಾಗಿ ಮಾತನಾಡಿ, ಧ್ರುವ ನಾರಾಯಣ್ ಸಾವು ಅತ್ಯಂತ ದುಃಖಕರ ಸಂಗತಿ. ಕಾಂಗ್ರೆಸ್ ಪಕ್ಷಕ್ಕೆ ಒಬ್ಬ ಪ್ರಾಮಾಣಿಕ ನಾವು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ನಾಯಕರನ್ನು ಕಳೆದುಕೊಂಡಿದ್ದೇವೆ. ಆ ಕ್ಷೇತ್ರ, ಜಿಲ್ಲೆಗೆ, ಆ ಮನೆಗೆ ನ್ಯಾಯ ಸಿಗಬೇಕು. ಆ ಅನ್ಯಾಯ ಸರಿಪಡಿಸಲು ನಾನು ಅವರ ಪರ ಇದ್ದೀನಿ.ನಾನು ನನ್ನ ಸ್ನೇಹಿತನ ಪರ ಇದ್ದೀನಿ ಎಂದರು.
ಬೇರೆಯವರ ಬಗ್ಗೆ ನನಗೆ ಗೊತ್ತಿಲ್ಲ. ನನ್ನ ತೀರ್ಮಾನ ಅಚಲವಾಗಿದೆ. ಅವರಿಗೆ ಗೌರವ, ಪ್ರೀತಿ ತೋರಿಸುತ್ತೇನೆ.ಅವನು ನನ್ನ ಜೊತೆ ಇರಲಿ ಬಿಡಲಿ. ಅವರ ಕುಟುಂಬಕ್ಕೇ ನ್ಯಾಯ ಸಿಗಬೇಕು ಎಂದು ಹೇಳಿದರು.












Click it and Unblock the Notifications