ಪಕ್ಷದಲ್ಲಿ ಭಿನ್ನಾಭಿಪ್ರಾಯವಿಲ್ಲ; ಅರುಣ್ ಸಿಂಗ್
ಬೆಂಗಳೂರು, ಜೂನ್ 16; "ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ. ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ" ಎಂದು ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.
ಬಿಜೆಪಿ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಬುಧವಾರ ಆಗಮಿಸಿದ್ದಾರೆ. ಕುಮಾರಕೃಪ ಅತಿಥಿ ಗೃಹದಿಂದ ಅವರು ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಗೆ ತೆರಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅರುಣ್ ಸಿಂಗ್, "ಮೂರು ದಿನದ ಕಾರ್ಯಕ್ರಮ ನಿಮಿತ್ತ ಬಂದಿದ್ದೇನೆ. ಪಕ್ಷ ಸಂಘಟನೆ ಕುರಿತು ಚರ್ಚಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ತೆಗೆದುಕೊಂಡ ನಿಲುವು ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಚರ್ಚಿಸುತ್ತೇವೆ" ಎಂದರು.

"ಸಿಎಂ, ಮಂತ್ರಿಗಳು ಜನರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು. ಇದರ ಬಗ್ಗೆ ನಾನು ಅವರಿಗೆ ಸೂಚಿಸುತ್ತೇನೆ. ಕೋವಿಡ್‌ನಿಂದ ಮೃತಪಟ್ಟವರಿಗೆ 1 ಲಕ್ಷ ಘೋಷಿಸಲಾಗಿದೆ" ಎಂದು ಹೇಳಿದರು.
"ನಾಯಕತ್ವ ಬದಲಾವಣೆ ಬಗ್ಗೆ ಪುಕಾರು ನಡೆದಿವೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ನಮ್ಮ ಪಕ್ಷದಲ್ಲಿ ಎಲ್ಲವೂ ಸರಿಯಿದೆ, ಪಕ್ಷದಲ್ಲಿ ಯಾವುದೇ ಭಿನ್ನಾಬಿಪ್ರಾಯಗಳಿಲ್ಲ. ಕೆಲವು ಸಣ್ಣಪುಟ್ಟ ಸಮಸ್ಯೆ ನಾನು ಬಗೆಹರಿಸುತ್ತೇನೆ" ಎಂದು ತಿಳಿಸಿದರು.
"ಸಮಸ್ಯೆ ಬಗೆಹರಿಸುವುದಕ್ಕಾಗಿಯೇ ನಾನು ಒಬ್ಬೊಬ್ಬರ ಜೊತೆ ಮಾತುಕತೆ ನಡೆಸುತ್ತೇನೆ. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದೆ" ಎಂದು ಅರುಣ್ ಸಿಂಗ್ ಹೇಳಿದರು.
ಸಚಿವರಿಗೆ ಮಾತ್ರ ಪ್ರವೇಶ; ಬಿಜೆಪಿ ಕಚೇರಿಯಲ್ಲಿ ಅರುಣ್ ಸಿಂಗ್ ಸಚಿವರ ಜೊತೆ ಪ್ರತ್ಯೇಕವಾಗಿ ಮಾತುಕತೆ ನಡೆಸಲಿದ್ದಾರೆ. ಸಚಿವರು ಮಾತ್ರ ಆಗಮಿಸಬೇಕು ಎಂದು ಸೂಚನೆ ನೀಡಲಾಗಿದೆ. ಆಪ್ತ ಸಹಾಯಕರು, ಗನ್‌ಮ್ಯಾನ್‌ಗಳಿಗೆ ಕಚೇರಿಗೆ ಪ್ರವೇಶವಿಲ್ಲ.
ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಬಿಜೆಪಿ ಕಚೇರಿಯೊಳಗೆ ಬಂದಿದ್ದ ಗನ್‌ಮ್ಯಾನ್‌ಗಳನ್ನು ಪಕ್ಷದ ನಿಯೋಜಿತ ಸ್ವಯಂ ಸೇವಕರು ವಾಪಸ್ ಕಳಿಸಿದರು. ಬಿಜೆಪಿ ಕಚೇರಿಗೆ 31 ಸಚಿವರು ಆಗಮಿಸಿದ್ದಾರೆ.
ಪ್ರತಿ ಸಚಿವರ ಜೊತೆ 30 ನಿಮಿಷಗಳ ಕಾಲ ಅರುಣ್ ಸಿಂಗ್ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಡಿಯೂರಪ್ಪ ಮತ್ತು ಕರ್ನಾಟಕ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಉಪಸ್ಥಿತರಿರುವರು.












Click it and Unblock the Notifications