ಅತೃಪ್ತ ಶಾಸಕರ ಕೃಪೆ! ನಿಖಿಲ್ ಕುಮಾರಸ್ವಾಮಿಗೆ ಮತ್ತೊಂದು ಅವಕಾಶ!
ಬೆಂಗಳೂರು, ಜುಲೈ 27: ಮೈತ್ರಿ ಸರ್ಕಾರ ಪತನ ದೇವೇಗೌಡ, ಕುಮಾರಸ್ವಾಮಿ ಅವರಿಗೆ ತೀವ್ರ ನಿರಾಸೆಗೊಳಿಸಿದೆ. ಆದರೆ ನಿಖಿಲ್ ಕುಮಾರಸ್ವಾಮಿ ಅವರಿಗೆ ಮಾತ್ರ ಮತ್ತೊಂದು ಅವಕಾಶ ಬಾಗಿಲು ತೆರೆದಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಲ್ಲಿ ಸುಮಲತಾ ಎದುರಿಗೆ ಸೋತು, ಮೊದಲ ಯತ್ನದಲ್ಲೇ ನಿರಾಸೆ ಅನುಭವಿಸಿದ್ದ ನಿಖಿಲ್ ಕುಮಾರಸ್ವಾಮಿ ಅವರಿಗೆ ಪ್ರಸಕ್ತ ರಾಜಕೀಯ ಸನ್ನಿವೇಶ ಮತ್ತೊಂದು ಅವಕಾಶವನ್ನು ಒದಗಿಸಿದ್ದು, ನಿಖಿಲ್ ಅವರು ಮತ್ತೊಮ್ಮೆ ಚುನಾವಣೆ ಎದುರಿಸುವ ಸರ್ವ ಸಾಧ್ಯತೆಯೂ ಇದೆ.
ಹದಿನೈದು ಶಾಸಕರು ಈಗಾಗಲೇ ರಾಜೀನಾಮೆ ಸಲ್ಲಿಸಿದ್ದು, ಮೂವರು ಶಾಸಕರು ಅನರ್ಹಗೊಂಡಿದ್ದಾರೆ, ಉಳಿಕೆ ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರಗೊಂಡರೆ ಅಥವಾ ಅವರು ಅನರ್ಹಗೊಂಡರೆ ಇನ್ನು ಆರು ತಿಂಗಳಲ್ಲಿ ಉಪಚುನಾವಣೆ ನಡೆಯಲಿದ್ದು, ಉಪಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ನಿಖಿಲ್ ಕುಮಾರಸ್ವಾಮಿ ಇಳಿಯುವ ಸಾಧ್ಯತೆ ಇದೆ.

ರಾಜೀನಾಮೆ ನೀಡಿರುವ ಮೂರು ಜೆಡಿಎಸ್ ಶಾಸಕರು
ಜೆಡಿಎಸ್ ಶಾಸಕರಾದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಕೆ.ಗೋಪಾಲಯ್ಯ, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ಹುಣಸೂರು ಶಾಸಕ ವಿಶ್ವನಾಥ್ ಅವರುಗಳೂ ಸಹ ರಾಜೀನಾಮೆ ಸಲ್ಲಿಸಿದ್ದು, ಈ ಮೂರರಲ್ಲಿ ಒಂದು ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿದೆ.

ಬೆಂಗಳೂರು ಬಿಟ್ಟು ಬೇರೆಡೆ ಸ್ಪರ್ಧೆ
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರ ಬಿಟ್ಟು, ಜೆಡಿಎಸ್ ಪ್ರಾಬಲ್ಯವಿರುವ ಹುಣಸೂರು, ಕೆ.ಆರ್.ಪೇಟೆ ಕ್ಷೇತ್ರದಿಂದ ನಿಖಿಲ್ ಕುಮಾರಸ್ವಾಮಿ ಉಪಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಕುಮಾರಸ್ವಾಮಿ ಅವರ ಆಪ್ತರು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಆರ್.ಆರ್.ನಗರ ಕ್ಷೇತ್ರವೂ ಪರಿಗಣನೆಯಲ್ಲಿ
ಮುನಿರತ್ನ ಶಾಸಕರಾಗಿರುವ ಆರ್.ಆರ್.ನಗರವೂ ನಿಖಿಲ್ ಅವರ ಆಯ್ಕೆಯಲ್ಲಿದ್ದು, ಆರ್.ಆರ್.ನಗರದಲ್ಲಿ ಕಳೆದ ಬಾರಿ ಪ್ರಜ್ವಲ್ ರೇವಣ್ಣ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ಧಕ್ಕಿರಲಿಲ್ಲ. ಹಾಗಾಗಿ ಈಗ ಮುಂದೆ ನಡೆಯುವ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಆರ್.ಆರ್.ನಗರದ ಟಿಕೆಟ್ ನೀಡುವ ಬಗ್ಗೆಯೂ ಚರ್ಚೆ ಸಾಗುತ್ತಿದೆ.

ಮತ್ತೆ ವಿರೋಧ ವ್ಯಕ್ತವಾಗುವ ಸಾಧ್ಯತೆ
ಕಳೆದ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡ ಅವರ ಕುಟುಂಬದ ಮೂರನೇ ತಲೆಮಾರು ಪ್ರಜ್ವಲ್ ರೇವಣ್ಣ , ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಕುಟುಂಬ ರಾಜಕೀಯದ ವಿರುದ್ಧ ಎಂದು ದೊಡ್ಡ ವಿರೋಧ ವ್ಯಕ್ತವಾಗಿತ್ತು. ನಿಖಿಲ್ ಸೋಲಿಗೂ ಇದು ಕಾರಣವಾಗಿತ್ತು. ಹಾಗಾಗಿ ಈಗ ಮತ್ತೆ ನಿಖಿಲ್ ಅವರಿಗೆ ಟಿಕೆಟ್ ನೀಡಿದರೆ ಮತ್ತೆ ವಿರೋಧ ವ್ಯಕ್ತವಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.












Click it and Unblock the Notifications