ಕರ್ನಾಟಕದ ಶನಿವಾರದ ಸುದ್ದಿಗಳತ್ತ ಇಣುಕು ನೋಟ
ಬೆಂಗಳೂರು, ಫೆ.22 : ದೇಶದಲ್ಲಿ ಹಾಲು ಉತ್ಪಾದಿಸುವ ರಾಜ್ಯಗಳಲ್ಲಿ ಕರ್ನಾಟಕವನ್ನು ಮೊದಲನೇ ಸ್ಥಾನ ಪಡೆಯಲು ಎಲ್ಲರೂ ಶ್ರಮಿಸಬೇಕು ಎಂದು ನಂದಿನಿ ಹಾಲು ಉತ್ಪಾದಕರ ಬೃಹತ್ ಸಮಾವೇಶದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ರಾಜ್ಯವ ವಿವಿಧ ಜಿಲ್ಲೆಗಳ ಲಕ್ಷಾಂತರ ರೈತರು ಭಾಗವಹಿಸಿದ್ದಾರೆ.
ಶನಿವಾರ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮಾದಾವರ ಬಳಿ ನಂದಿನಿ ಹಾಲು ಉತ್ಪಾದಕರ ಬೃಹತ್ ಸಮಾವೇಶ ನಡೆಯುತ್ತಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ನಂದಿನಿ ಉತ್ಪನ್ನಗಳ ರಾಯಭಾರಿ ನಟ ಪುನೀತ್ ರಾಜ್ ಕುಮಾರ್ ಮುಂತಾದವರು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ.
ಸದ್ಯ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದನ್ನು ಮೊದಲನೇ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ರೈತರು ಶ್ರಮಿಸಬೇಕು ಎಂದು ಸಮಾವೇಶದಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಇದೇವೇಳೆ ನಂದಿನಿ ಸ್ಪೆಷಲ್ ಟೋನ್ಡ್ ಹಾಲನ್ನು ಮಾರುಕಟ್ಟೆಗೆ ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. [ಸಮಾವೇಶದಲ್ಲಿ ಪುನೀತ್ ಏನು ಹೇಳಿದರು]
ಶೇ 9ರಷ್ಟು ಫ್ಯಾಟ್, ಮಿನರಲ್ ಯುಕ್ತ ಈ ಹಾಲು 500 ಮತ್ತು 250 ಎಂ.ಎಲ್ ಪ್ಯಾಕೆಟ್ ಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಹಾಲಿನಿಂದ ಉತ್ತಮ ದರ್ಜೆಯ ಮೊಸರು ತಯಾರಿಸಬಹುದು ಮಾತ್ರವಲ್ಲ ಗ್ರಾಹಕರ ಕೈಗೆಟುವ ದರದಲ್ಲಿ ಹಾಲು ಲಭ್ಯವಿದೆ. ಕೆಎಂಎಫ್ ಅಧ್ಯಕ್ಷ ಸೋಮಶೇಖರ ರೆಡ್ಡಿ, ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.
ಟ್ರಾಫಿಕ್ ಜಾಮ್ : ನಂದಿನಿ ಹಾಲು ಉತ್ಪಾದಕರ ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂರತ ರೈತರು ಆಗಮಿಸಿರುವುದರಿಂದ ಬೆಂಗಳುರು-ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು 10 ಕಿ.ಮೀಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ. [ಕರ್ನಾಟಕದ ಇತರ ಸುದ್ದಿಗಳು]

ಫುಲ್ ಟ್ರಾಫಿಕ್ ಜಾಮ್
ನಂದಿನಿ ಹಾಲು ಉತ್ಪಾದಕರ ಬೃಹತ್ ಸಮಾವೇಶ ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿಯ ಮಾದಾವರ ನಡೆಯುತ್ತಿದ್ದು, ರಾಜ್ಯದ ವಿವಿಧ ಭಾಗಗಳಿಂದ ಸಮಾವೇಶಕ್ಕೆ ಲಕ್ಷಾಂರತ ರೈತರು ಆಗಮಿಸಿರುವುದರಿಂದ ಬೆಂಗಳುರು-ತುಮಕೂರು ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಸುಮಾರು 10 ಕಿ.ಮೀಗೂ ಹೆಚ್ಚು ದೂರ ವಾಹನಗಳು ಸಾಲುಗಟ್ಟಿ ನಿಂತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.

ಕಾಂಗ್ರೆಸ್ ಗೆ ನಾಯಕತ್ವದ ಕೊರತೆ ಎದುರಾಗಿದೆ
ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವದ ಕೊರತೆ ಉಂಟಾಗಿದ್ದು ಇದರಿಂದ ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಬೆಂಗಳೂರಿನ ಜಿಕೆವಿಕೆಯಲ್ಲಿ ನಡೆದ ಬಿದಿರು ಉತ್ಸವ ಉದ್ಘಾಟಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 150 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷಕ್ಕೆ ಸದ್ಯ ನಾಯಕತ್ವದ ಕೊರತೆ ಉಂಟಾಗಿದೆ. ಆದ್ದರಿಂದ ದೇಶದಲ್ಲಿ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಇತ್ತೀಚೆಗೆ ನಡೆದ ಹಲವಾರು ಭ್ರಷ್ಟಾಚಾರ ಪ್ರಕರಣಗಳು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ. ಇದನ್ನು ಉಪಯೋಗಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದರೆ ಆಶ್ಚರ್ಯವಿಲ್ಲ ಎಂದು ರಾಜ್ಯಪಾಲರು ಹೇಳಿದರು.

ಚಿತ್ರದುರ್ಗದಲ್ಲಿ ಆರ್ಯವೈಶ್ಯ ಸಾಹಿತ್ಯ ಸಮ್ಮೇಳನ
ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ವತಿಯಿಂದ 5 ಆರ್ಯವೈಶ್ಯ ಸಾಹಿತ್ಯ ಸಮ್ಮೇಳನವನ್ನು ಚಿತ್ರದುರ್ಗದ ವಾಸವಿ ಮಹಲ್‌ನಲ್ಲಿ ಆಯೋಜಿಸಲಾಗಿದೆ. ಫೆ.23ರ ಭಾನುವಾರ ಬೆಳಗ್ಗೆ 8.30ಕ್ಕೆ ಸಮ್ಮೇಳನಕ್ಕೆ ಚಾಲನೆ ದೊರೆಯಲಿದೆ. ಆರ್ಯವೈಶ್ಯರ ಧಾರ್ಮಿಕ ಆಚರಣೆಗಳು, ಕೊಡುಗೆ, ಸಮಕಾಲೀನ ಸಮಸ್ಯೆಗಳು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿಗಳು ಹಾಗೂ ಕವಿಗೋಷ್ಠಿ ನಡೆಯಲಿವೆ. ಡಾ.ವಿಜಯಾ ಸುಬ್ಬರಾಜ್ ಸಮ್ಮೇಳನಾಧ್ಯಕ್ಷರಾಗಿದ್ದು, ಸಂಘದ ಅಧ್ಯಕ್ಷ ಕಾಶಿ ವಿಶ್ವನಾಥ ಶ್ರೇಷ್ಠಿ ಸಮ್ಮೇಳನ ಉದ್ಘಾಟಿಸಲಿದ್ದಾರೆ.

ಯೋಧನ ಆತ್ಮಹತ್ಯೆ
ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎನ್‌ಎಂಪಿಟಿಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತಪಟ್ಟ ಯೋಧನನ್ನು ಮಹಾರಾಷ್ಟ್ರ ಮೂಲದ ಕೆಟಿ ಸಂದೀಪ್ ಸರ್ಕಟೆ(38) ಎಂದು ಗುರುತಿಸಲಾಗಿದೆ. ಶನಿವಾರ ಮುಂಜಾನೆ ಹೊಟ್ಟೆಗೆ ಗುಂಡು ಹೊಡೆದುಕೊಂಡು ಸಂದೀಪ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಪಿಜಿಆರ್ ಸಿಂಧ್ಯಾ ಬಿಜೆಪಿಗೆ?
ಜೆಡಿಎಸ್ ಹಿರಿಯ ನಾಯಕ ಪಿಜಿಆರ್ ಸಿಂಧ್ಯಾ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈಗಾಗಲೇ ಸಿಂಧ್ಯಾ ಪಕ್ಷ ಸೇರ್ಪಡೆ ಕುರಿತು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಿಂಧ್ಯಾ ಡಿಕೆ ಶಿವಕುಮಾರ್ ವಿರುದ್ಧ ಸೋಲು ಅನುಭವಿಸಿದ್ದರು.












Click it and Unblock the Notifications