ನೇಕಾರರ ವಿಶೇಷ ಯೋಜನೆಯಡಿ ವಿದ್ಯುತ್ ಪೂರೈಕೆ ಬಂಪರ್!
ಬೆಂಗಳೂರು: ನೇಕಾರರ ವಿಶೇಷ ಯೋಜನೆ ಅಡಿ ಈಗ ಜಾರಿಯಲ್ಲಿರುವ ಯೋಜನೆಯನ್ನು ಮುಂದುವರಿಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಆಶ್ವಾಸನೆ ನೀಡಿದ್ದಾರೆ. 20 ಎಚ್‌ಪಿ ತನಕ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗದ ಘಟಕಗಳಿಗೆ 1.25 ರೂಪಾಯಿ ದರದಲ್ಲಿ ವಿದ್ಯುತ್ ಪೂರೈಕೆ ಯೋಜನೆ ಮುಂದುವರೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ.
ತಮ್ಮನ್ನು ಭೇಟಿಯಾದ ನೇಕಾರರ ಸಮುದಾಯಗಳ ಒಕ್ಕೂಟದ ನಿಯೋಗದ ಬೇಡಿಕೆಗಳಿಗೆ ಸ್ಪಂದಿಸಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಇದರ ಜೊತೆಗೆ 10 ಎಚ್‌ಪಿ ವರೆಗಿನ ಘಟಕಗಳಿಗೆ 250 ಯುನಿಟ್ ತನಕ ಉಚಿತ ವಿದ್ಯುತ್ ಒದಗಿಸಲು ಆಯವ್ಯಯದಲ್ಲಿ ಘೋಷಿಸಲಾಗಿದ್ದು, ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಅಲ್ಲದೆ ಹಿಂದುಳಿದ ವರ್ಗಗಳ 2 ಎ ವರ್ಗದಡಿ ಬರುವ ಸಮುದಾಯಗಳ ಗುತ್ತಿಗೆದಾರರಿಗೆ 1 ಕೋಟಿ ರೂಪಾಯಿ ತನಕ ಕಾಮಗಾರಿಗಳಲ್ಲಿ ಮೀಸಲಾತಿ ಘೋಷಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದ್ದಾರೆ.

ರಾಜಕೀಯ ಪ್ರಾತಿನಿಧ್ಯಕ್ಕೂ ಮನವಿ
ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿಯಾದ ನೇಕಾರರು ತಮ್ಮ ವೃತ್ತಿಪರ ಚಟುವಟಿಕೆಗಳಿಗೆ ಮುಖ್ಯಮಂತ್ರಿಯವರು ಹಿಂದಿನಿಂದ ಬೆಂಬಲ ನೀಡಿದ್ದನ್ನು ಸ್ಮರಿಸಿ, ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯವನ್ನೂ ನೀಡುವಂತೆ ಮನವಿ ಮಾಡಿದರು. ಒಕ್ಕೂಟಕ್ಕೆ ಬೆಂಗಳೂರು ಮಹಾನಗರದಲ್ಲಿ ನಿವೇಶನ ನೀಡುವುದು, ಕಾಂತರಾಜ ವರದಿ ಜಾರಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಇದೇ ವೇಳೆ ಮನವಿ ಮಾಡಿದ್ದಾರೆ.
ಸಿಎಂ ಭೇಟಿ ಸಂದರ್ಭ ಮಾಜಿ ಸಚಿವ ಎಚ್.ಎಂ. ರೇವಣ್ಣ, ಹಂಪಿ ಗಾಯತ್ರಿ ಪೀಠದ ಶ್ರೀ ದಯಾನಂದಪುರಿ ಸ್ವಾಮೀಜಿ, ತಪಸಿಹಳ್ಳಿ ದಿವ್ಯಜ್ಞಾನಾನಂದ ಸ್ವಾಮೀಜಿ, ಬಾಗಲಕೋಟೆ ಜಿಲ್ಲೆ ನೀರಲಕೇರಿ ಸಿದ್ಧಾರೂಢ ಮಠದ ಶ್ರೀ ಘನಲಿಂಗ ಸ್ವಾಮೀಜಿ, ಧಾರವಾಡದ ಶಿವಾನಂದ ಮಠದ ಶಿವಾನಂದ ಸ್ವಾಮಿಗಳು, ರಾಜ್ಯ ನೇಕಾರರ ಸಮುದಾಯಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಬಿ.ಎಸ್. ಸೋಮಶೇಖರ ಮತ್ತಿತರ ನೇಕಾರ ಮುಖಂಡರು ಉಪಸ್ಥಿತರಿದ್ದರು.

ಒಟ್ಟಾರೆ ಹೇಳೋದಾದ್ರೆ ಈಗ ನೇಕಾರರ ಸಮುದಾಯದ ಮುಖಂಡರ ಬೇಡಿಕೆಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿದ್ದಾರೆ. ಈ ಸಂದರ್ಭದಲ್ಲಿ ನೇಕಾರ ಸಮುದಾಯದ ಮುಖಂಡರು ತಮ್ಮ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡುವಂತೆ ಮನವಿ ಮಾಡಿರುವುದು ವಿಶೇಷ. ಇದರ ಜೊತೆಗೆ ನೇಕಾರರ ವೃತ್ತಿಗೆ ಅಗತ್ಯವಿರುವ ಅನುಕೂಲಗಳನ್ನೂ ಒದಗಿಸುವ ಬಗ್ಗೆ ಸಿಎಂ ಆಶ್ವಾಸನೆ ನೀಡಿದ್ದು, ಹಿಂದಿನ ಪ್ರಮುಖ ಯೋಜನೆಗಳನ್ನ ಮುಂದುವರಿಸಿಕೊಂಡು ಹೋಗುವ ಮೂಲಕ ಸಮುದಾಯಕ್ಕೆ ಮತ್ತಷ್ಟು ನೆರವಾಗುವ ಭರವಸೆ ನೀಡಿದ್ದಾರೆ.












Click it and Unblock the Notifications