ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ NEP ಸಂಪೂರ್ಣ ರದ್ದು: ಸರ್ಕಾರ
ಬೆಂಗಳೂರು, ಆಗಸ್ಟ್ 14: ಕರ್ನಾಟಕದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ (2024ರಿಂದ) ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (NEP) ಯನ್ನು ರದ್ದು ಮಾಡುತ್ತೇವೆ. ಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು NEP ರದ್ದುಗೊಳಿಸಬೇಕಿದೆ ಎಂದರು.

RSS ಕಾರ್ಯಸೂಚಿಯ ಭಾಗವಾಗಿರುವ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಸಭೆಯಲ್ಲಿ ಅಗ್ರಹ ಕೇಳಿ ಬಂತು ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಈ ವರ್ಷ ತಡವಾಯಿತು. ಮುಂದಿನ ವರ್ಷದ ಶೈಕ್ಷಣಿಕ ವರ್ಷದಿಂದ ಈ ನೀತಿಯನ್ನು ರದ್ದು ಮಾಡುತ್ತೇವೆ. ಚುನಾವಣೆ ಫಲಿತಾಂಶ ಬಂದು ಸರ್ಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. ಮಧ್ಯದಲ್ಲಿ ಸಮಸ್ಯೆ ಆಗಬಾರದು ಎನ್ನುವ ಕಾರಣದಿಂದ ಈ ವರ್ಷ ಹಾಗೆಯೇ ಮುಂದುವರೆದಿದೆ ಎಂದು ಅವರು ತಿಳಿಸಿದರು.
NEP ಗೆ ಏಕ ಕಾಲದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಉಪನ್ಯಾಸಕರು ಹಾಗೂ ಶಿಕ್ಷಕರ ವಿರೋಧವಿದೆ. ಬಿಜೆಪಿ ದೇಶದಲ್ಲಿ ಎಲ್ಲಾ ಈ ನೀತಿಯನ್ನು ಜಾರಿಗೊಳಿಸದೆ ರಾಜ್ಯದಲ್ಲಿ ಮೊದಲ ಬಾರಿಗೆ ಜಾರಿಗೊಳಿಸಿ ನಾಡಿನ ವಿದ್ಯಾರ್ಥಿ ಸಮೂಹದ ಹಿತಾಸಕ್ತಿಯನ್ನು ಬಲಿಕೊಟ್ಟಿದೆ ಎಂದು ಬಿಜೆಪಿ ವಿರುದ್ಧ ಅವರು ಕಿಡಿ ಕಾರಿದರು.
ಜನರ ನಿರ್ಧಾರದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭರವಸೆ: ಸಿಎಂ
ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಇಡಿ ದೇಶದ ಜನರ ಮತ್ತು ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಭರವಸೆಯನ್ನು ಹೆಚ್ಚಿಸಿ ಸಂಚಲನ ಮೂಡಿಸಿದೆ. ಒಂದು ಕಡೆ ಆರ್‌ಎಸ್‌ಎಸ್ ಹಿಡನ್ ಅಜೆಂಡಾ ಜಾರಿಗೊಳಿಸುತ್ತಾ ಮತ್ತೊಂದು ಕಡೆ ಬೆಲೆ ಏರಿಕೆ, ಹಣದುಬ್ಬರ, ಭ್ರಷ್ಟಾಚಾರ, ದುರಾಡಳಿತದಿಂದ ನಾಡಿನ, ದೇಶದ ಜನತೆಯನ್ನು ವಿಪರೀತ ಸಂಕಷ್ಟಕ್ಕೆ ಸಿಲುಕಿಸಿದ್ದರು. ನಾಡಿನ ಜನ ಈ ಎಲ್ಲಾ ದುಷ್ಟಾಚಾರವನ್ನು ಸಮರ್ಥವಾಗಿ ಧಿಕ್ಕರಿಸಿ ಸೋಲಿಸಿದ್ದಾರೆ ಎಂದು ಚುನಾವಣೆ ಗೆಲುವಿನ ಕುರಿತು ಅವರು ವಿವರಿಸಿದರು.
ಮನುಸ್ಮೃತಿಯ ಜಾತಿ ಆಧಾರಿತ ಶೋಷಿತ ನ್ಯಾಯಪದ್ಧತಿಯನ್ನು ಜಾರಿಗೆ ತರುವ ಮನಸ್ಥಿತಿಯವರು ಡಾ.ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ಸೇಡು ತೀರಿಸಿಕೊಳ್ಳುವ ರೀತಿಯಲ್ಲಿ ವರ್ತಿಸುತ್ತಾ ಸಂವಿಧಾನವನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶ್ರಮಿಕರಿಗೆ ಅವಕಾಶ ನಾಶ
ಸಂವಿಧಾನ ಬದಲಾವಣೆ ಆದರೆ ದೇಶದ ಶೇಕಡಾ 90 ಕ್ಕೂ ಹೆಚ್ಚು ಸಂಖ್ಯೆಯ ಜನರ ದುಡಿಯುವ ಮತ್ತು ಬದುಕಿನ ಅವಕಾಶಗಳು ನಾಶವಾಗುತ್ತದೆ. ಆದ್ದರಿಂದ ಸಂವಿಧಾನವನ್ನು ಉಳಿಸಿ ದೇಶದ ದುಡಿಯುವ ಜನ ವರ್ಗಗಳ ಬದುಕಿನ ಅವಕಾಶಗಳನ್ನು ಕಾಪಾಡುವ ಬಹಳ ದೊಡ್ಡ ಜವಾಬ್ದಾರಿ ದೇಶದ ಜನರ ಮೇಲಿದೆ. ಕಾಂಗ್ರೆಸ್ ಗೆ ನಾಡಿನ ಮತ್ತು ದೇಶದ ದುಡಿಯುವ ವರ್ಗಗಳು ಈ ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಕಾರ್ಯಕರ್ತರನ್ನು ಉದ್ದೇಶಿಸಿ ತಿಳಿಸಿದರು.
ಜನರ ಜೇಬಿನಲ್ಲಿರುವ ಹಣವನ್ನು ಕಿತ್ತು ಸಾವಿರಾರು ಕೋಟಿ ಒಡೆಯರಾಗಿರುವ ಶ್ರೀಮಂತರಿಗೆ ನೀಡುವುದು ಅವರ ಆರ್ಥಿಕತೆ. ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆ ಮತ್ತು ಆರ್ಥಿಕತೆಯ ನೆರವನ್ನೂ ನೀಡದೆ ಇಡಿ ನಾಡಿನ ಜನತೆಗೆ ಬಿಜೆಪಿ ವಂಚಿಸಿದೆ.
ಆದರೆ, ನಾವು ಜನರ ಜೇಬಿನಲ್ಲಿ ಹಣ ಉಳಿಯುವ ರೀತಿಯಲ್ಲಿ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದ್ದೇವೆ. ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಆಯವ್ಯಯವನ್ನು ನಾವು ಮಂಡಿಸಿದ್ದೇವೆ. ಕರ್ನಾಟಕ ಮಾದರಿಯ ಈ ಅಭಿವೃದ್ಧಿಯನ್ನು ದೇಶದ ಎಲ್ಲಾ ರಾಜ್ಯಗಳೂ ಅಧ್ಯಯನ ನಡೆಸಿ ಅಳವಡಿಸಿಕೊಳ್ಳಲು ಮುಂದಾಗಿದ್ದೇವೆ ಎಂದು ತಿಳಿಸಿದರು.












Click it and Unblock the Notifications