ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತ ದುಷ್ಕೃತ್ಯ ಖಂಡನೀಯ: ನಳಿನ್‍ಕುಮಾರ್ ಕಟೀಲ್
ಬೆಂಗಳೂರು, ಮಾರ್ಚ್27: ಶಿಕಾರಿಪುರದಲ್ಲಿ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮನೆಯ ಮೇಲೆ ಕಲ್ಲೆಸೆತದ ದುಷ್ಕೃತ್ಯ ಖಂಡನೀಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಇಂಥ ದುಷ್ಕೃತ್ಯಕ್ಕೆ ಯಾರೂ ಬೆಂಬಲ ಕೊಡಬಾರದು. ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯವ ಕೆಲಸದಲ್ಲಿ ಭಾಗಿಯಾಗಬೇಕು ಎಂದು ಅವರು ತಿಳಿಸಿದ್ದಾರೆ. ಇದು ಸಂವಿಧಾನಕ್ಕೆ ಅಗೌರವ ತರುವ ಕಾರ್ಯವಾಗಿದೆ. ಯಾರೇ ತಪ್ಪು ಮಾಡಿದ್ದರೂ ಅದನ್ನು ಸರಕಾರ ಪತ್ತೆ ಮಾಡಿ ಅವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದ್ದಾರೆ.

ಮೀಸಲಾತಿಯ ವಿಚಾರದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರಕಾರ ಅತ್ಯಂತ ವಿವೇಚನಾಪೂರ್ಣ ನಿರ್ಣಯ ಪ್ರಕಟಿಸಿದೆ. ಇದನ್ನು ಎಲ್ಲ ಸಮುದಾಯದವರು ಅರ್ಥ ಮಾಡಿಕೊಂಡು ಶಾಂತಿ ಕಾಪಾಡಬೇಕು. ಒಳ ಮೀಸಲಾತಿ ಬಗ್ಗೆ ತಪ್ಪು ಮಾಹಿತಿ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದು ಅತ್ಯಂತ ನೋವುಂಟುಮಾಡಿದೆ: ಸಿಎಂ ಬೊಮ್ಮಾಯಿ

ಎಲ್ಲ ಸಮುದಾಯಗಳನ್ನು ಅತ್ಯಂತ ಪ್ರೀತಿ ವಿಶ್ವಾಸದಿಂದ ತೆಗೆದುಕೊಂಡು ಹೋದವರು ಯಡಿಯೂರಪ್ಪ ಅವರು ತಾಂಡಾ ಅಭಿವೃದ್ಧಿ ನಿಗಮವನ್ನ ಪ್ರಾರಂಭ ಮಾಡಿದ್ದು ಅವರು. ಕೆಲವರ ತಪ್ಪು ಕಲ್ಪನೆಯಿಂದ ಮತ್ತು ಕೆಲವರ ಪ್ರಚೋದನೆಯಿಂದ ಅವರ ನಿವಾಸದ ಮೇಲೆ ಕಲ್ಲುತೂರಾಟವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶಿಕಾರಿಪುರಲ್ಲಿ ಹೀಗಾಗಿದೆ ಅಂದರೆ ರಾಜಕೀಯ ದುರುದ್ದೇಶ ಇದೆ. ಯಡಿಯೂರಪ್ಪ ಅವರ ಸೇವೆಯಿಂದ ಅವರಿಗೆ ಅಲ್ಲಿನ ಜನರ ಬೆಂಬಲ ಸದಾ ಇರುತ್ತದೆ. ಅದನ್ನು ಕದಲಿಸಲು ವಿರೋಧ ಪಕ್ಷದವರು ಈ ಕೆಲಸವನ್ನು ಮಾಡಿದ್ದಾರೆ. ಇದು ಅತ್ಯಂತ ಹೀನ ಮತ್ತು ಖಂಡನೀಯ ಕೆಲಸ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇನ್ನೂ ಈ ಕುರಿತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ಮಾತನಾಡಿ, ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿ ಹೆಚ್ಚು ಅನುದಾನ ಕೊಟ್ಟವರು ಯಡಿಯೂರಪ್ಪನವರು. ಆದರೆ, ಕಾಂಗ್ರೆಸ್‍ನವರ ಕುಚೋದ್ಯದಿಂದ ಕಲ್ಲು ತೂರಾಟ ಮಾಡಿದ್ದಾರೆ. ಇಂಥ ಹಿಂಸಾಚಾರವನ್ನು ಕೈಬಿಡಬೇಕು ಎಂದು ಮನವಿ ಮಾಡಿದರು.
ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಕಲ್ಬುರ್ಗಿಯಲ್ಲಿ ತಾಂಡಾ ನಿವಾಸಿಗಳಿಗೆ ಒಂದೇ ದಿನ 51 ಸಾವಿರ ಹಕ್ಕುಪತ್ರ ಕೊಟ್ಟದ್ದು ಬಿಜೆಪಿಯ ಬೊಮ್ಮಾಯಿ ಅವರ ಸರಕಾರ. ಒಳ ಮೀಸಲಾತಿ ವರ್ಗೀಕರಣ ಆಗಿದೆ. ಆದೇಶವನ್ನೂ ಕೊಡಲಾಗಿದೆ. ವಿವಿಧ ಆಯೋಗ, ಸಮಿತಿಗಳ ರಚನೆ ಮಾಡಿ ವರದಿ ಪಡೆಯಲಾಗಿದೆ. ಕಾಂತರಾಜ್ ಸಮಿತಿ ವರದಿ ಸಿದ್ಧತೆಗೆ 182 ಕೋಟಿ ಖರ್ಚು ಮಾಡಿ ಕಾಲಹರಣ ಮಾಡಿದ್ದಾರೆ ಎಂದು ಟೀಕಿಸಿದರು.
ನ್ಯಾಯದ ಬಗ್ಗೆ ಯಡಿಯೂರಪ್ಪ ಅವರ ಜೊತೆ ಚರ್ಚಿಸಲಿ ಎಂದು ಅವರು ಆಹ್ವಾನಿಸಿದರು. ಜನತೆಯನ್ನು ತಪ್ಪು ದಾರಿಗೆ ಎಳೆಯುವ ಕಾಂಗ್ರೆಸ್‍ನವರು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಯಡಿಯೂರಪ್ಪ ಅವರ ಮನೆ ಮೇಲೆ ಕಲ್ಲೆಸೆತ, ಹಿಂಸಾಚಾರ ಸರಿಯಲ್ಲ. ಯಾರಿಗೂ ಅನ್ಯಾಯ ಆಗಿಲ್ಲ. ಕಾಂಗ್ರೆಸ್ಸಿನವರ ರಾಗ ಬದಲಾಗಿದೆ. ಮತಬ್ಯಾಂಕ್ ರಾಜಕೀಯಕ್ಕಾಗಿ ಪ್ರಚೋದನೆ ಮಾಡಿ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದು ತಿಳಿಸಿದರು.
ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ, ಭೂಮಿ ಕೊಟ್ಟದ್ದು ಬಿಜೆಪಿ. ಕಾಂಗ್ರೆಸ್ ಈ ಕೆಲಸ ಮಾಡಿಲ್ಲ. ಲಂಬಾಣಿ ಸಮುದಾಯ ಪ್ರಚೋದನೆಗೆ ಒಳಗಾಗಬಾರದು. ಅವಶ್ಯವಿದ್ದರೆ ಮನವಿ ಕೊಡಿ ಎಂದು ವಿನಂತಿಸಿದರು. ಕಾಂಗ್ರೆಸ್‍ನವರು ಮತಬ್ಯಾಂಕಿಗಾಗಿ ತಂಟೆ, ತಕರಾರು ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿದರು. ಮಾದಿಗ ಸಮುದಾಯದ 30 ವರ್ಷಗಳ ಹೋರಾಟಕ್ಕೆ ಕಾಂಗ್ರೆಸ್ಸಿನ ಉತ್ತರ ಏನು ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಕಾಂಗ್ರೆಸ್ ಪಕ್ಷವು ಗೂಂಡಾಗಿರಿಯನ್ನು ಬಿತ್ತುತ್ತಿದೆ ಎಂದ ಅವರು, ಯಾರೂ ಕಾನೂನನ್ನು ಕೈಗೆತ್ತಿಕೊಳ್ಳದಿರಿ ಎಂದು ತಿಳಿಸಿದರು. ಸರಕಾರಕ್ಕೆ ಬಿನ್ನಹ ಸಲ್ಲಿಸಿ ಪರಿಹಾರ ಪಡೆದುಕೊಳ್ಳಿ ಎಂದು ತಿಳಿಸಿದರು.











Click it and Unblock the Notifications