Mysuru Dasara 2026: ಅಂಬಾರಿ ಹೊರುವ ಅಭಿಮನ್ಯು ನಿವೃತ್ತಿ; ಮಹೇಂದ್ರನಿಗೆ ಸಿಗುತ್ತಾ ಪಟ್ಟ?
ಮೈಸೂರು: 2026ರ ಮೈಸೂರು ದಸರಾ ಅಂಬಾರಿಯನ್ನು ಈ ಬಾರಿ ಅಭಿಮನ್ಯು ಹೊರುವುದಿಲ್ಲ. ಬದಲಾಗಿ ಬೇರೆ ಆನೆಗಳನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಅರ್ಜುನನ ಬಳಿಕ 2020ರಿಂದ 2025ರವರೆಗೆ ನಿರಂತವಾಗಿ ಅಂಬಾರಿ ಹೊತ್ತ ಅಭಿಮನ್ಯ ಆನೆ ನಿವೃತ್ತಿಯಾಗಿದೆ. ಅಂಬಾರಿ ಹೊರುವ ಸ್ಥಾನಕ್ಕೆ ಇತರ ಆನೆಗಳ ಹೆಸರು ಕೇಳಿ ಬಂದಿವೆ. ದಸಾರಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಆನೆಗಳ ಪಟ್ಟಿ ಬಿಡುಗಡೆ ಮಾಡಿದೆ.
ಪ್ರಸ್ತುತ 2026ರ ನಾಡಹಬ್ಬ ಮೈಸೂರು ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರ ಸಿದ್ಧತೆ ಆರಂಭಿಸಿದೆ. ಹಬ್ಬದ ಪ್ರಮುಖ ಆಚರಣೆ ಅಂಬಾರಿ ಉತ್ಸವವು ಪ್ರಮುಖ ಆಕರ್ಷಣೆಯೂ ಆಗಿದೆ. ಆರು ವರ್ಷಗಳಿಂದ ಅಂಬಾರಿ ಹೊತ್ತ ಅಭಿಮನ್ಯುವಿಗೆ ವಯಸ್ಸಾಗಿದ್ದು, ಆ ಆನೆಯನ್ನು ಕೈ ಬಿಡಲು ನಿರ್ಧರಿಸಲಾಗಿದೆ. ಆ ಸ್ಥಾನಕ್ಕೆ ಮಹೇಂದ್ರ, ಸುಗ್ರೀವ, ಪ್ರಶಾಂತ, ಧನಂಜಯ ಆನೆಗಳು ರೇಸಿನಲ್ಲಿವೆ.

ದಸರಾ ಗಜಪಡೆಯ ಪಟ್ಟಿ ಬಿಡುಗಡೆ
ಅರಣ್ಯ ಸಚಿವ ರಾಮಲಿಂಗಾ ರೆಡ್ಡಿ ಅವರು, ದಸರಾ ಗಜಪಡೆಯ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಇನ್ನೊಂದೆಡೆ ಎರಡು ತಂಡಗಳ ಆನೆಗಳು ಶೀಘ್ರವೇ ಮೈಸೂರು ಅರಮನೆ ಆವರಣಕ್ಕೆ ಬರಲಿವೆ. ಮೊದಲ ತಂಡದಲ್ಲಿ 9 ಹಾಗೂ ಎರಡನೇ ತಂಡದಲ್ಲಿ 3 ಆನೆಗಳು ಅರಮನೆಗೆ ಅಗಮಿಸಲಿವೆ. ಸಚಿವರು ನೀಡಿದ ಪಟ್ಟಿ ಪ್ರಕಾರ ಆಗಸ್ಟ್ 26ರಂದು ಹುಣಸೂರು ತಾಲೂಕಿನ ವೀರನ ಹೊಸಳ್ಳಿಯಿಂದ ಗಜಪಯಣ ಮೊದಲ ಆರಂಭವಾಗಲಿದೆ. ತಂಡದಲ್ಲಿ ದುಬಾರೆ ಶಿಬಿರದ ಧನಂಜಯ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ ಹಾಗೂ ಕಾವೇರಿ, ಬಳ್ಳೆ ಶಿಬಿರದ ಮಹೇಂದ್ರ ಮತ್ತು ಲಕ್ಷ್ಮೀ, ಮತ್ತಿಗೋಡು ಶಿಬಿರದ ಏಕಲವ್ಯ ಆಗಮಿಸಲಿದೆ. 2ನೇ ತಂಡದಲ್ಲಿ ನಾಗರಹೊಳೆಯ ದೊಡ್ಡಹರವೆ ಶಿಬಿರದ ರೂಪ, ಬಂಡೀಪುರದ ರಾಮಪುರ ಶಿಬಿರದ ಶ್ರೀಕಂಠ ಆನೆಗಳು ಬರಲಿವೆ. ಮೀಸಲು ಆನೆಗಳಾಗಿ ದುಬಾರೆಯ ಹರ್ಷ ಮತ್ತು ಮತ್ತಿಗೋಡಿನ ಭೀಮನನ್ನು ಆಯ್ಕೆ ಮಾಡಲಾಗಿದೆ.
ಅಭಿಮನ್ಯು ಗತ್ತು, ಸಾಮರ್ಥ್ಯ
ಅರ್ಜುನನ ಬಳಿಕ ಅಭಿಮನ್ಯು ಅಂಬಾರಿ ಹೊರುವ ಪ್ರಮುಖ ಆನೆಯಾಗಿದೆ. ಕಾಡಾನೆಗಳನ್ನು ಸೆರೆಹಿಡಿಯುವ ಮತ್ತು ಕಾಡಾನೆಗಳ ಹಾವಳಿ ತಡೆಯುವ ಕಾರ್ಯಾಚರಣೆಗಳಲ್ಲಿ ಅಭಿಮನ್ಯುವನ್ನು ಮೀರಿಸುವವರಿಲ್ಲ. ಅತ್ಯಂತ ಅನುಭವಿ ಮತ್ತು ಪಳಗಿದ ಆನೆ ಅಭಿಮನ್ಯು. ಆದರೆ ಅಂಬಾರಿ ಹೊರುವ ಸಾಮರ್ಥ್ಯ ಅದಕ್ಕಿದ್ದರೂ ವಯಸ್ಸಿನ ಕಾರಣಕ್ಕೆ ಅವಕಾಶ ನಿರಾಕರಿಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
ಮಹೇಂದ್ರನಿಗೆ ಸಿಗುತ್ತಾ ಅಂಬಾರಿ ಹೊರುವ ಕೆಲಸ!
ಪರಾಕ್ರಮಿ ಅಭಿಮನ್ಯು ಬಳಿಕ ಮಹೇಂದ್ರ ಆನೆಯು ಆ ಸ್ಥಾನ ತುಂಬಬಹುದು ಎನ್ನಲಾಗಿದೆ. ಶ್ರೀರಂಗಪಟ್ಟಣ ದಸರಾದಲ್ಲಿ 42 ವರ್ಷದ ಮಹೇಂದ್ರ ನಾಲ್ಕು ಸಲ ಅಂಬಾರಿ ಹೊತ್ತ ಅನುಭವ ಹೊಂದಿದೆ. ಮೈಸೂರು ದಸರಾ ಜಂಬೂಸವಾರಿ ಮೆರವಣಿಗೆ ವೇಳೆ, ತಾಲೀಮು ನಡೆಸುವಾಗ ಅನೇಕ ಬಾರಿ ಬಾರಿ ಮರದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತು ಸಾಗಿದ ಉದಹಾರಣೆ ಇದೆ. ಹೀಗಾಗಿ ಅಭಿಮನ್ಯು ಬಳಿಕ ಮಹೇಂದ್ರನೇ ಆಯ್ಕೆಯಾಗುವ ನಿರೀಕ್ಷೆಗಳಿವೆ.
ಒಂದು ವೇಳೆ ಮಹೇಂದ್ರನನ್ನು ಆಯ್ಕೆ ಮಾಡದಿದ್ದರೆ ಆ ಜಾಕ್ಕೆ 54 ವರ್ಷದ ಪ್ರಶಾಂತ ಆನೆಯನ್ನು ಆಯ್ಕೆ ಮಾಡುವ ಲಕ್ಷಣಗಳಿವೆ. ಇದು ಸೌಮ್ಯ ಸ್ವಭಾವ ಹೊಂದಿರುವ ಆನೆ. ಪ್ರತಿ ಬಾರಿಯಂತೆ ತರಬೇತಿ ಅವಧಿಯಲ್ಲಿ ಆನೆಗಳು ತೋರುವ ವರ್ತನೆ, ಅವುಗಳ ವಯಸ್ಸು, ಸಾಮರ್ಥ್ಯದ ಮೇಲೆ ಈ ಬಾರಿಯು ಸಮರ್ಥ ಆನೆಯನ್ನು ಆಯ್ಕೆ ಮಾಡಲಾಗುತ್ತದೆ.


Click it and Unblock the Notifications
