Mysuru: ಅರ್ಕೇಶ್ವರ ದೇವಸ್ಥಾನದ ಗೋಡೆಯ ಮೇಲೆ ಶಿಲುಬೆ, ಮಸೀದಿ ಚಿತ್ರ; ಪ್ರತಾಪ್ ಸಿಂಹ ಆಕ್ರೋಶ!
ಇತಿಹಾಸ ಪ್ರಸಿದ್ಧ ಹಳೆ ಎಡತೊರೆಯ ಶ್ರೀ ಅರ್ಕೇಶ್ವರ ದೇವಸ್ಥಾನದ ಒಳಾಂಗಣದ ಕಲ್ಲಿನ ಗೋಡೆಯ ಮೇಲೆ ಶಿಲುಬೆ ಹಾಗೂ ಮಸೀದಿಯ ಚಿತ್ರಗಳನ್ನು ಬಿಡಿಸಿರುವ ಘಟನೆ ಶನಿವಾರ (ಅ.17) ಬೆಳಕಿಗೆ ಬಂದಿದೆ. ಈ ಘಟನೆಯಿಂದ ಸ್ಥಳೀಯ ಭಕ್ತರು ಹಾಗೂ ಹಿಂದೂ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದು, ಕೃತ್ಯ ಎಸಗಿದವರನ್ನು ಪತ್ತೆಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಶನಿವಾರ ಮಧ್ಯಾಹ್ನ ದೇವಸ್ಥಾನಕ್ಕೆ ದೇವರ ದರ್ಶನಕ್ಕೆ ತೆರಳಿದ್ದ ಭಕ್ತರು ಒಳಾಂಗಣದ ಕಲ್ಲಿನ ಗೋಡೆಯ ಮೇಲೆ ಬಿಡಿಸಲಾಗಿದ್ದ ಚಿತ್ರಗಳನ್ನು ಗಮನಿಸಿದ್ದಾರೆ. ಈ ಕುರಿತು ದೇವಸ್ಥಾನದ ಪಾರುಪತ್ತೆದಾರರನ್ನು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಈ ವಿಷಯವನ್ನು ಹಿಂದೂ ಸಂಘಟನೆಗಳ ಮುಖಂಡರ ಗಮನಕ್ಕೆ ತಂದಿದ್ದು, ಅವರು ದೇವಸ್ಥಾನಕ್ಕೆ ಆಗಮಿಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಿಸಿ ಟಿವಿ ದೃಶ್ಯಾವಳಿ ಪರಿಶೀಲನೆಗೆ ಆಗ್ರಹ
ದೇವಸ್ಥಾನದ ಆವರಣದಲ್ಲಿ ಇಂತಹ ಚಿತ್ರಗಳನ್ನು ಬಿಡಿಸಿದವರು ಯಾರು? ಯಾವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ? ದೇವಸ್ಥಾನದ ಸುತ್ತಮುತ್ತ ಸಿಸಿ ಟಿವಿ ಕ್ಯಾಮೆರಾಗಳಿದ್ದರೂ ಘಟನೆ ನಡೆದಿರುವುದು ಹೇಗೆ? ಎಂದು ಹಿಂದೂ ಸಂಘಟನೆಗಳ ಮುಖಂಡರು ಪ್ರಶ್ನಿಸಿದರು. ಘಟನೆಯ ಹಿಂದಿರುವವರನ್ನು ಪತ್ತೆಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರ ಆಕ್ರೋಶದ ಹಿನ್ನೆಲೆಯಲ್ಲಿ ದೇವಸ್ಥಾನದ ಪಾರುಪತ್ತೆದಾರರಾದ ಆರತಿ ಅವರು ಗೋಡೆಯ ಮೇಲಿನ ಚಿತ್ರಗಳನ್ನು ಅಳಿಸಿ ಬಣ್ಣ ಬಳಿಯಲು ಮುಂದಾದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಂಘಟನೆಗಳ ಮುಖಂಡರು, ಚಿತ್ರಗಳನ್ನು ಅಳಿಸುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಅವುಗಳನ್ನು ಬಿಡಿಸಿದವರನ್ನು ಪತ್ತೆಹಚ್ಚುವುದು ಮುಖ್ಯ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಘಟನೆಯ ಕುರಿತು ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದರು. ಈಕುರಿತು ಪ್ರತಿಕ್ರಿಯಿಸಿದ ಪಾರುಪತ್ತೆದಾರರಾದ ಆರತಿ ಅವರು, ಘಟನೆಗೆ ಸಂಬಂಧಿಸಿದಂತೆ ತನಗೆ ಹೆಚ್ಚಿನ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ
ದೇವಸ್ಥಾನದ ಸುತ್ತಮುತ್ತ ಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿ, ಚಿತ್ರಗಳನ್ನು ಬಿಡಿಸಿದವರನ್ನು ಗುರುತಿಸಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಸಂಘಟನೆಗಳ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಬಂಧಪಟ್ಟ ಅಧಿಕಾರಿಗಳು, ದೇವಸ್ಥಾನದಲ್ಲಿ ಶಿಲುಬೆ ಹಾಗೂ ಮಸೀದಿಯ ಚಿತ್ರಗಳನ್ನು ಬಿಡಿಸಿದವರನ್ನು ಆದಷ್ಟು ಬೇಗ ಪತ್ತೆಹಚ್ಚಲಾಗುವುದು. ಈ ಸಂಬಂಧ ಪಾರುಪತ್ತೆದಾರರಿಗೆ ಲಿಖಿತ ದೂರು ನೀಡುವಂತೆ ತಿಳಿಸಲಾಗಿದೆ. ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರತಾಪ್ ಸಿಂಹ ಆಕ್ರೋಶ
ಹಳೆ ಎಡತೊರೆಯ ಐತಿಹಾಸಿಕ ಶ್ರೀ ಅರ್ಕೇಶ್ವರ ದೇವಸ್ಥಾನದ ಗೋಡೆಯ ಮೇಲೆ ಶಿಲುಬೆ ಮತ್ತು ಮಸೀದಿಯ ಚಿತ್ರ ಬಿಡಿಸಿರುವ ಘಟನೆಗೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರತಾಪ್ ಸಿಂಹ ಧ್ವನಿ ಎತ್ತಿದ್ದಾರೆ. ದೇವಸ್ಥಾನದ ನವೀಕರಣ ಕಾರ್ಯ ನಡೆಯುತ್ತಿರುವ ಸಂದರ್ಭದಲ್ಲಿ ಗೋಡೆಯ ಮೇಲೆ ಈ ಚಿತ್ರಗಳನ್ನು ಬಿಡಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಚಿತ್ರಗಳನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರತಾಪ್ ಸಿಂಹ, "ಕೂಡಲೇ ತೆಗೆಯುತ್ತೀರೋ, ನಾನೇ ಬಂದು ತೆಗೆಸಬೇಕೋ?" ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಈ ಘಟನೆಗೆ ಮುಸ್ಲಿಮರನ್ನು ದೂಷಿಸಬಾರದು ಎಂದು ಹೇಳಿರುವ ಅವರು, ಇದಕ್ಕೆ ಕೆಲವು ಹಿಂದೂಗಳೇ ಕಾರಣ ಎಂದು ಆರೋಪಿಸಿದ್ದಾರೆ.
Mysuru: ಸ್ಥಳಕ್ಕೆ ತಹಶೀಲ್ದಾರ್ ಭೇಟಿ, ಇಬ್ಬರ ವಿರುದ್ಧ ದೂರು
ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ತಹಶೀಲ್ದಾರ್ ಸುರೇಂದ್ರ ಮೂರ್ತಿ ಅವರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ದೇವಸ್ಥಾನದ ಗೋಡೆಯ ಮೇಲೆ ಶಿಲುಬೆ ಮತ್ತು ಮಸೀದಿಯ ಚಿತ್ರಗಳನ್ನು ಬಿಡಿಸಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದ್ದು, ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ ಎಂದು ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ನಡೆಯಬೇಕಿದ್ದು, ಚಿತ್ರಗಳನ್ನು ಬಿಡಿಸಿದವರ ಉದ್ದೇಶ ಹಾಗೂ ಘಟನೆಯ ಸಂಪೂರ್ಣ ವಿವರಗಳು ತನಿಖೆಯಿಂದ ಸ್ಪಷ್ಟವಾಗಬೇಕಿದೆ.


Click it and Unblock the Notifications
