2025ರ ಆಷಾಢ ಮಾಸ ವಿಶೇಷ ದರ್ಶನದಲ್ಲಿ ಭಾರಿ ಗೋಲ್‌ಮಾಲ್: ಚಾಮುಂಡಿ ಬೆಟ್ಟದ ಪ್ರಾಧಿಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ

ಮೈಸೂರು: ನಾಡಿನ ಅಧಿದೇವತೆ ಎಂದು ಕರೆಸಿಕೊಳ್ಳುವ, ಲಕ್ಷಾಂತರ ಭಕ್ತರ ಆರಾಧ್ಯ ದೈವ ನೆಲೆಸಿರುವ ಮೈಸೂರಿನ ಚಾಮುಂಡಿ ಬೆಟ್ಟ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿಬಂದಿದೆ.

ಕಳೆದ 2025ರ ಆಷಾಢ ಮಾಸದ ಸಂದರ್ಭದಲ್ಲಿ ಭಕ್ತರಿಗೆ ನೀಡಲಾಗಿದ್ದ ವಿಶೇಷ ದರ್ಶನದ ಟಿಕೆಟ್ ಹಣದಲ್ಲಿ ಭಾರಿ ಪ್ರಮಾಣದ ಗೋಲ್‌ಮಾಲ್ ನಡೆದಿದೆ ಎಂದು ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಸಮಾಜ ಸೇವಕ ಅರವಿಂದ್ ಶರ್ಮಾ ಅವರು ದಾಖಲೆಗಳ ಸಮೇತ ಗಂಭೀರ ಆರೋಪ ಮಾಡಿದ್ದಾರೆ.

Mysuru Chamundeshwari Temple

ಆಷಾಢ ಮಾಸ ವಿಶೇಷ ದರ್ಶನದಲ್ಲಿ ಹಗರಣ

ಪ್ರತಿ ವರ್ಷ ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಕರ್ನಾಟಕದಿಂದ ಮಾತ್ರವಲ್ಲದೆ, ಹೊರ ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಬರುತ್ತಾರೆ. 2025ರ ಆಷಾಢ ಮಾಸದಲ್ಲಿ ಭಕ್ತರ ಅನುಕೂಲಕ್ಕಾಗಿ ಹಾಗೂ ಜನದಟ್ಟಣೆ ನಿಯಂತ್ರಿಸಲು 2,000 ರೂ. ಹಾಗೂ 300 ರೂಪಾಯಿಯ ವಿಶೇಷ ದರ್ಶನದ ಟಿಕೆಟ್‌ಗಳನ್ನ ನೀಡಲಾಗಿತ್ತು. ಈ ಟಿಕೆಟ್‌ಗಳ ಮಾರಾಟದಿಂದ ಪ್ರಾಧಿಕಾರಕ್ಕೆ ಒಟ್ಟು 4,28,08,100 ರೂ.ಅಂದರೆ ನಾಲ್ಕು ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿತ್ತು. ಆದರೆ, ಈ ಹಣದ ನಿರ್ವಹಣೆ ಹಾಗೂ ಖರ್ಚು-ವೆಚ್ಚಗಳಲ್ಲಿ ಪ್ರಾಧಿಕಾರದ ಅಧಿಕಾರಿಗಳು ನಖಲಿ ಬಿಲ್‌ಗಳನ್ನು ಸೃಷ್ಟಿಸಿ ಭಾರಿ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದು ಅರವಿಂದ್ ಅವರ ಪ್ರಮುಖ ಆರೋಪವಾಗಿದೆ.

ಮಾಹಿತಿ ಹಕ್ಕು ಅಡಿ ಬಯಲಾದ ಸತ್ಯ

ಈ ಅವ್ಯವಹಾರದ ಬಗ್ಗೆ ಅನುಮಾನಗೊಂಡ ಅರವಿಂದ್ ಶರ್ಮಾ ಅವರು 2026ರ ಜನವರಿ 3ರಂದು ಮಾಹಿತಿ ಹಕ್ಕು ಅಂದರೆ ಆರ್‌ಟಿಐ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ವಿಶೇಷ ದರ್ಶನದಿಂದ ಬಂದ ಆದಾಯ ಹಾಗೂ ಖರ್ಚಿನ ಸಂಪೂರ್ಣ ವಿವರಗಳನ್ನು ಒದಗಿಸುವಂತೆ ಕೋರಿದ್ದರು. ಆದರೆ, ಪ್ರಾಧಿಕಾರದ ಅಧಿಕಾರಿಗಳು ಮಾಹಿತಿ ನೀಡಲು ಹಿಂದೇಟು ಹಾಕಿದ್ದರು. ಈ ಹಿನ್ನೆಲೆಯಲ್ಲಿ ಶರ್ಮಾ ಅವರು 2026ರ ಫೆಬ್ರವರಿ 24ರಂದು ಮೊದಲ ಮೇಲ್ಮನವಿ ಸಲ್ಲಿಸಿದರು. ಆದರೂ ಅಧಿಕಾರಿಗಳು ಆರ್‌ಟಿಐ ಕಾಯ್ದೆಯನ್ನು ನಿರ್ಲಕ್ಷಿಸಿ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಅಂತಿಮವಾಗಿ ಶರ್ಮಾ ಅವರು ಖುದ್ದಾಗಿ ಕಚೇರಿಗೆ ಭೇಟಿ ನೀಡಿ ಪ್ರಶ್ನಿಸಿದಾಗ, ಅಧಿಕಾರಿಗಳು ಅಹಂಕಾರದಿಂದ ವರ್ತಿಸಿ, ಗಂಟೆಗಟ್ಟಲೆ ಕಾಯಿಸಿ, ನಂತರ ಅನಿವಾರ್ಯವಾಗಿ ದಾಖಲೆಗಳನ್ನ ನೀಡಿದ್ದಾರೆ. ಈ ದಾಖಲೆಗಳನ್ನು ಪರಿಶೀಲಿಸಿದಾಗಲೇ ಪ್ರಾಧಿಕಾರದ ಅಸಲಿ ಬಣ್ಣ ಬಯಲಾಗಿದೆ.

ನಕಲಿ ಬಿಲ್‌ ಸೃಷ್ಟಿ

ಆರ್‌ಟಿಐ ಅಡಿ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ವಿಶೇಷ ದರ್ಶನದ ಒಟ್ಟು ಆದಾಯ 4,28,08,100 ರೂ.ಗಳಲ್ಲಿ ಪ್ರಾಧಿಕಾರವು 66,69,520 ರೂ.ಗಳನ್ನು ಮಾತ್ರ ಖರ್ಚು ಮಾಡಿದ್ದು, ಉಳಿದ 3,61,38,580 ರೂ. ಮೊತ್ತವು ಪ್ರಾಧಿಕಾರದ ಬಳಿ ಬಾಕಿ ಉಳಿದಿದೆ. ಆದರೆ, ಖರ್ಜು ಮಾಡಿರುವ ಈ 66 ಲಕ್ಷ ರೂಪಾಯಿಯ ಬಿಲ್‌ಗಳಲ್ಲಿ ಭಾರಿ ಅಕ್ರಮವನ್ನ ನೋಡಬಹುದು.

ಮಾರುಕಟ್ಟೆಯಲ್ಲಿ ಕೇವಲ 6 ರೂಪಾಯಿಗೆ ಹೋಲ್‌ಸೇಲ್‌ ದರದಲ್ಲಿ ಸಿಗುವ ಅರ್ಧ ಲೀಟರ್ ನೀರಿನ ಬಾಟಲಿಗೆ ಬರೋಬ್ಬರಿ 38 ರೂ. ಬಿಲ್ ಮಾಡಲಾಗಿದೆ. ಅದೇ ರೀತಿ, 15 ರಿಂದ 20 ರೂಪಾಯಿಗೆ ಸಿಗುವ ಸ್ಮರಣಿಕೆ ಕೈಚೀಲಗಳಿಗೆ 58 ರೂಪಾಯಿ ಬಿಲ್ ತೋರಿಸಲಾಗಿದೆ. ಹೋಲ್‌ಸೇಲ್‌ನಲ್ಲಿ 60-70 ರೂಪಾಯಿಗೆ ಸಿಗುವ ದೇವಿಯ ಮೂರ್ತಿಗಳಿಗೆ 170 ರೂಪಾಯಿ ಹಾಗೂ ಕೇವಲ 15-20 ರೂಪಾಯಿಯ ಲಾಡು ಪ್ರಸಾದಕ್ಕೆ 50 ರೂಪಾಯಿ ಬಿಲ್ ಮಾಡಿ ಹಣ ಲೂಟಿ ಮಾಡಿದ್ದಾರೆ.

"ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ದಿನಕ್ಕೆ ಸಾವಿರಾರು ಜನ ಭಕ್ತರು ಬಂದು ಹೋಗುತ್ತಾರೆ. ಅದು ದೇವಿಯ ಮೇಲಿನ ನಂಬಿಕೆಯಿಂದ. ಆದರೆ, ಪ್ರಾಧಿಕಾರ ಮತ್ತು ಅಲ್ಲಿನ ಕೆಲವು ಭ್ರಷ್ಟ ಅಧಿಕಾರಿಗಳು ಇದನ್ನು ಸಂಪೂರ್ಣವಾಗಿ ಭ್ರಷ್ಟಾಚಾರದ ಅಡ್ಡವನ್ನಾಗಿ ಮಾಡಿಕೊಂಡಿದ್ದಾರೆ" ಎಂದು ಅರವಿಂದ್ ಶರ್ಮಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಸ್ಥಾನದ ಹಣದಲ್ಲಿ ಅವ್ಯವಹಾರ ನಡೆದಿರುವುದು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂಬ ಕೂಗು ಸಾರ್ವಜನಿಕ ವಲಯದಿಂದಲೂ ಕೇಳಿ ಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+