MUDA Scam: ಮುಡಾ ಹಗರಣ, ಸಿದ್ದರಾಮಯ್ಯ ವಿರುದ್ಧ ತೀರ್ಪು, ಪೊಲೀಸ್ ಭದ್ರತೆ ಹೆಚ್ಚಳ
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಬದಲಿ ನಿವೇಶನ ಹಂಚಿಕೆ ಪ್ರಕರಣದ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಿದೆ. ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದ ಕ್ರಮವನ್ನು ಕೋರ್ಟ್ ಎತ್ತಿ ಹಿಡಿದಿದೆ.
ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠ ಮಂಗಳವಾರ ಈ ತೀರ್ಪು ಪ್ರಕಟಿಸಿದೆ. ಸದ್ಯ ಸಿದ್ದರಾಮಯ್ಯ ಗೃಹ ಕಛೇರಿ ಕೃಷ್ಣಾದಲ್ಲಿದ್ದಾರೆ. ಅನೇಕ ಸಚಿವರು, ಕಾನೂನು ತಜ್ಞರು ಸಹ ಅಲ್ಲಿದ್ದು, ಸರಣಿ ಸಭೆಗಳು ನಡೆಯುತ್ತಿವೆ.

ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 17-ಎ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ಸೆಕ್ಷನ್-2023ರ ಸೆಕ್ಷನ್ 218ರ ಅಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯುಷನ್‌ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಪೊಲೀಸ್ ಭದ್ರತೆ ಹೆಚ್ಚಳ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹೈಕೋರ್ಟ್ ತೀರ್ಪು ನೀಡಿರುವ ಕಾರಣ ಪ್ರತಿಪಕ್ಷಗಳಾದ ಬಿಜೆಪಿ, ಜೆಡಿಎಸ್ ಶಕ್ತಿ ಹೆಚ್ಚಿದೆ. ವಿರೋಧ ಪಕ್ಷಗಳ ವಿವಿಧ ನಾಯಕರು ಈಗಾಗಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ವಿರೋಧ ಪಕ್ಷದವರು ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ನಿವಾಸಕ್ಕೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.
ಹೆಚ್ಚುವರಿ ಕೆಎಸ್ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದ್ದು, ಪ್ರತಿಭಟನೆ ನಡೆಸುವವರನ್ನು ವಶಕ್ಕೆ ಪಡೆದು ಕರೆದುಕೊಂಡು ಹೋಗಲು ಎರಡು ಬಿಎಂಟಿಸಿ ಬಸ್‌ಗಳನ್ನು ಸಿದ್ಧಪಡಿಸಲಾಗಿದೆ. ಬೆಂಗಳೂರು ನಗರದಲ್ಲಿಯೂ ವಿವಿಧ ಕಡೆ ಪ್ರತಿಭಟನೆ ನಡೆಯುವ ಸಾಧ್ಯತೆ ಇದ್ದು, ನಗರ ಪೊಲೀಸರು ಅಲರ್ಟ್ ಆಗಿ ಇರುವಂತೆ ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಎಲ್ಲಾ ವಿಭಾಗದ ಡಿವೈಎಸ್‌ಪಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳವಾರ ಮಧ್ಯಾಹ್ನ ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಿ ಸಿದ್ದರಾಮಯ್ಯ ಗೃಹ ಕಛೇರಿ ಕೃಷ್ಣಾದಲ್ಲಿ ಉಳಿದಿದ್ದಾರೆ. ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ನಿವಾಸಕ್ಕೆ ಆಗಮಿಸಿದ್ದಾರೆ. ಕಾನೂನು ತಜ್ಞರು ಸಹ ಆಗಮಿಸಿದ್ದು, ಮುಂದಿನ ಕಾನೂನು ಹೋರಾಟದ ಕುರಿತು ಅವರು ಚರ್ಚೆಯನ್ನು ನಡೆಸಲಿದ್ದಾರೆ.
ಹೈಕೋರ್ಟ್ ತೀರ್ಪಿನ ಪೂರ್ಣ ಪ್ರತಿ ಮಧ್ಯಾಹ್ನ ಅಥವ ಸಂಜೆಯ ವೇಳೆಗೆ ಸಿದ್ದರಾಮಯ್ಯ ಕೈ ಸೇರುವ ನಿರೀಕ್ಷೆ ಇದೆ. ಹೈಕೋರ್ಟ್ ಏಕಸದಸ್ಯ ಪೀಠದ ತೀರ್ಪನ್ನು ಸಿದ್ದರಾಮಯ್ಯ ದ್ವಿಸದಸ್ಯ ಪೀಠದಲ್ಲಿ ಪ್ರಶ್ನೆ ಮಾಡುವ ಅಥವ ಈ ತೀರ್ಪಿಗೆ ತಡೆ ನೀಡುವಂತೆ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ಹೈಕೋರ್ಟ್ ತೀರ್ಪಿನ ಬಳಿಕ ಕರ್ನಾಟಕದ ಪ್ರತಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು, 'ದಲಿತರ ಭೂಮಿ, ಅನುದಾನ, ಅಧಿಕಾರವನ್ನು ಕಿತ್ತುಕೊಂಡು ಭ್ರಷ್ಟರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರದ ವಿರುದ್ಧ NDA ಮಿತ್ರ ಪಕ್ಷಗಳಾದ ಬಿಜೆಪಿ ಜೆಡಿಎಸ್ ಎರಡು ಪಕ್ಷಗಳ ನಡೆಸಿದ ಮೈಸೂರು ಚಲೋ ಪಾದಯಾತ್ರೆಗೆ ಭಾರೀ ಗೆಲುವು ಸಿಕ್ಕಿದೆ. ಪರಿಶಿಷ್ಟರು, ಶೋಷಿತರ ಹಣವನ್ನು ಲೂಟಿ ಮಾಡಿ ಮೆರೆದಾಡುತ್ತಿರುವ ಕಾಂಗ್ರೆಸ್ ಸರ್ಕಾರ ಒಂದು ಕ್ಷಣವೂ ಆಡಳಿತ ನಡೆಸುವ ಯೋಗ್ಯತೆ ಉಳಿಸಿಕೊಂಡಿಲ್ಲ' ಎಂದು ಹೇಳಿದೆ.
'ರಾಜ್ಯಪಾಲರ ವಿರುದ್ಧವೇ ಷಡ್ಯಂತ್ರ ರೂಪಿಸಿ ಅವರ ಅಧಿಕಾರವನ್ನೇ ಪ್ರಶ್ನಿಸುವ ಮೂರ್ಖತನಕ್ಕೆ ಕೈ ಹಾಕಿ ನ್ಯಾಯಾಲಯದಲ್ಲಿ ಬೆತ್ತಲಾಗಿದೆ ಇಡೀ ಕಾಂಗ್ರೆಸ್ ಸರ್ಕಾರ. ಇನ್ನಾದರೂ ಭ್ರಷ್ಟ ಮುಖ್ಯಮಂತ್ರಿ ಲಜ್ಜೆಬಿಟ್ಟು ರಾಜೀನಾಮೆ ಕೊಟ್ಟು ತೊಲಗಬೇಕು' ಎಂದು ಬಿಜೆಪಿ ಆಗ್ರಹಿಸಿದೆ.











Click it and Unblock the Notifications