ಸಂಚಾರಿ ನಿಯಮ ಉಲ್ಲಂಘನೆಯ ದಂಡ ಕಡಿಮೆ ಮಾಡಿ: ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟೆಂಬರ್ 08 : ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ದೇಶಾದ್ಯಂತ ಜಾರಿಗೆ ಬಂದಿದ್ದು ಈ ಕುರಿತು ಚರ್ಚೆ ನಡೆಯುತ್ತಿದೆ. ಸಂಚಾರ ನಿಯಮ ಉಲ್ಲಂಘನೆಗೆ ವಿಧಿಸುತ್ತಿರುವ ದಂಡವನ್ನು ಕಡಿಮೆ ಮಾಡುವಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.
Recommended Video
ಭಾನುವಾರ ಸಿದ್ದರಾಮಯ್ಯ ಸರಣಿ ಟ್ವೀಟ್‌ಗಳನ್ನು ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಬಗ್ಗೆ ಮಾಡಿದ್ದಾರೆ. "ಸಂಚಾರಿ ನಿಯಮ ಪಾಲನೆ ಮಾಡಬೇಕು. ಆದರೆ, ದುಬಾರಿ ದಂಡ ಶುಲ್ಕ ಸಾಮಾನ್ಯ ಜನರಿಗೆ ಹೊರೆಯಾಗಲಿದೆ" ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
"ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019ರ ದಂಡ ಶುಲ್ಕದ ಮೂಲಕ ಸಾಮಾನ್ಯ ಜನರಿಗೆ ಕಿರುಕುಳ ಕೊಡಲಾಗುತ್ತಿದೆ. ದಂಡ ಶುಲ್ಕವನ್ನು ಕಡಿಮೆ ಮಾಡುವಂತೆ ನಾನು ಸರ್ಕಾರವನ್ನು ಒತ್ತಾಯಿಸುತ್ತೇನೆ" ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

"ಹೆಚ್ಚಿನ ದಂಡ ಶುಲ್ಕದಿಂದಾಗಿ ಸಾಮಾನ್ಯ ಜನರಿಗೆ ಹೊರೆಯಾಗುತ್ತಿದೆ. ಒಂದು ವೇಳೆ ಅಗತ್ಯ ದಾಖಲೆಗಳು ಇಲ್ಲವಾದಲ್ಲಿ ಅದನ್ನು ತಂದು ಹಾಜರಿಪಡಿಸುವ ತನಕ ಅವರ ಆಟೋ ಪೊಲೀಸರ ವಶದಲ್ಲಿ ಇರುತ್ತದೆ. ಇದರಿಂದಾಗಿ ಅವರಿಗೆ ನಷ್ಟವಾಗುತ್ತದೆ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
"ಹಲವು ಜನರು ವೈಟ್ ಟಾಪಿಂಗ್ ಬಗ್ಗೆ ಆರೋಪ ಮಾಡುತ್ತಿದ್ದಾರೆ. ಯೋಜನೆ ಬಗ್ಗೆ ತನಿಖೆ ನಡೆಯಲಿ. ಆದರೆ, ಮಳೆಗಾಲದಲ್ಲಿ ಸಾಮಾನ್ಯ ರಸ್ತೆಯನ್ನು ನೋಡಿದರೆ, ವಾಹನ ಸವಾರರ ಅನುಕೂಲಕ್ಕಾಗಿ ಮಾಡಿದ ವೈಟ್ ಟಾಪಿಂಗ್ ಎಷ್ಟು ಸಹಕಾರಿಯಾಗಿದೆ" ಎಂಬುದು ತಿಳಿಯಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ಸೆಪ್ಟೆಂಬರ್ 1ರಿಂದ ದೇಶಾದ್ಯಂತ ಜಾರಿಗೆ ಬಂದಿದೆ. ಆಗಸ್ಟ್ 9ರಂದು ಕೇಂದ್ರ ಸರ್ಕಾರ ಈ ಕುರಿತು ಅಧಿಸೂಚನೆ ಹೊರಡಿಸಿತ್ತು.
ಕರ್ನಾಟಕದಲ್ಲಿಯೂ ಇದು ಜಾರಿಗೆ ಬಂದಿದ್ದು, ಬೆಂಗಳೂರು ನಗರದಲ್ಲಿ ಒಂದೇ ದಿನ 30 ಲಕ್ಷ ದಂಡವನ್ನು ಪೊಲೀಸರು ಸಂಗ್ರಹ ಮಾಡಿದ್ದಾರೆ. ಇವುಗಳಲ್ಲಿ ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ ಪ್ರಕರಣಗಳೇ ಹೆಚ್ಚಾಗಿವೆ.












Click it and Unblock the Notifications