ಹೆಣ್ಮಕ್ಳೇ ಸ್ಟ್ರಾಂಗು ಗುರು!: ರಾಜ್ಯದಲ್ಲಿ ಮತದಾನ ಮಾಡುವಲ್ಲಿ ಮಹಿಳೆಯರೇ ಮುಂದು.. ಅಂಕಿ ಅಂಶ ನೋಡಿ
ಬೆಂಗಳೂರು, ಮೇ. 02 : ರಾಜ್ಯದಲ್ಲಿ ಏಪ್ರಿಲ್ 26 ರಂದು ನಡೆದ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನದ 14 ಕ್ಷೇತ್ರಗಳಲ್ಲಿ ಶೇಕಡಾ 69.56 ರಷ್ಟು ಮತದಾನವಾಗಿದೆ. ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ.
2019 ರ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 80.59 ರಷ್ಟಿದ್ದ ಮಂಡ್ಯದಲ್ಲಿ ಅತಿ ಹೆಚ್ಚು ಅಂದರೆ ಶೇಕಡಾ 81.67 ರಷ್ಟು ಮತದಾನವಾಗಿದೆ. ಆದರೆ ಬೆಂಗಳೂರು ದಕ್ಷಿಣದಲ್ಲಿ ಶೇಕಡಾ 53.17 ರಷ್ಟು ಕಡಿಮೆ ಮತದಾನವಾಗಿದೆ. ಇದೇ ವೇಳೆ ಮಹಿಳಾ ಮತದಾರರು ಹೆಚ್ಚಾಗುವ ಪ್ರವೃತ್ತಿ ಮುಂದುವರೆದಿದೆ. ಕಡಿಮೆ ಹೆಚ್ಚಳವಾದರೂ ಕೂಡ ಮತದಾನ ಮಾಡುವಲ್ಲಿ ಮುಂದೆ ಬರುತ್ತಿದ್ದಾರೆ.

ಭಾರತದ ಚುನಾವಣಾ ಆಯೋಗವು ಹಂಚಿಕೊಂಡಿರುವ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪುರುಷರ ಮತದಾನದ ಪ್ರಮಾಣ ಶೇಕಡಾ 69.48 ಆಗಿದ್ದರೆ, ಮಹಿಳೆಯರು 69.65% ಆಗಿದೆ. ಒಟ್ಟು 1,00,16,921 ಪುರುಷರು ಮತ ಚಲಾಯಿಸಿದರೆ 1,00,20,796 ಮಹಿಳೆಯರು ಮತ ಚಲಾಯಿಸಿದ್ದಾರೆ. 3,875 ಹೆಚ್ಚು ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಐದು ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಪಾರುಪತ್ಯ
ಐದು ಕ್ಷೇತ್ರಗಳಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗದ ಅಂಕಿಅಂಶಗಳು ತೋರಿಸಿವೆ. ಬೆಂಗಳೂರು ಉತ್ತರ, ಬೆಂಗಳೂರು ಸೆಂಟ್ರಲ್, ಬೆಂಗಳೂರು ದಕ್ಷಿಣ, ಬೆಂಗಳೂರು ಗ್ರಾಮಾಂತರ ಮತ್ತು ದಕ್ಷಿಣ ಕನ್ನಡದ ಎಲ್ಲಾ ನಾಲ್ಕು ಕ್ಷೇತ್ರಗಳಲ್ಲಿ ಹೆಚ್ಚಿನ ಮಹಿಳೆಯರು ಮತ ಚಲಾಯಿಸಿದ್ದಾರೆ.

2019 ರ ಮತದಾನದ ಸಮಯದಲ್ಲಿ, ಪುರುಷರ ಶೇಕಡಾವಾರು ಪ್ರಮಾಣವು ಮಹಿಳೆಯರಿಗಿಂತ ಸ್ವಲ್ಪ ಹೆಚ್ಚಾಗಿತ್ತು. ಕಳೆದ ಬಾರಿ ಪುರುಷರು 69.55% ಮತ್ತು ಮಹಿಳೆಯರಿಗೆ 67.65% ಮತ ಚಲಾಯಿಸಿದ್ದರು. 2014 ರಲ್ಲಿಯೂ ಮಹಿಳೆಯರ ಮತದಾನದ ಪ್ರಮಾಣ ಕಡಿಮೆಯಿತ್ತು. ಆ ವೇಳೆ 68.59% ಪುರುಷರು ಮತ್ತು 65.79% ಮಹಿಳೆಯರು ವೋಟ್ ಮಾಡಿದ್ದರು.
ಆಯೋಗದ ಅಂಕಿಅಂಶಗಳ ಪ್ರಕಾರ, ಲೋಕಸಭೆ ಚುನಾವಣೆಯ ಹಂತ 1 ಮತ್ತು ಹಂತ 2 ರಲ್ಲಿ ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ, ಮಣಿಪುರ, ಮೇಘಾಲಯ, ಪುದುಚೇರಿ, ನಾಗಾಲ್ಯಾಂಡ್, ತಮಿಳುನಾಡು, ಉತ್ತರಾಖಂಡ, ಪಶ್ಚಿಮ ಬಂಗಾಳ, ಬಿಹಾರ, ಕೇರಳ ಮತ್ತು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರು ಮತ ಚಲಾಯಿಸಿದ್ದಾರೆ.
ಮೂರನೇ ಹಂತದ ಮತದಾನ
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನದಕ್ಕೆ ಒಟ್ಟು 32,458 ಜನರು ಮನೆಯಿಂದಲೇ ಮತ ಚಲಾಯಿಸಿದ್ದಾರೆ. ಇದು ಒಟ್ಟು 34,110 ಮತದಾರರ ಪಟ್ಟಿಯಲ್ಲಿ 95.16% ಮತ ಚಲಾವಣೆ ಆಗಿದೆ. ಎರಡನೇ ಹಂತದ ಮತದಾನದ ವೇಳೆ ಮನೆಯಿಂದ ಮತ ಚಲಾಯಿಸಲು 48,609 ಮತದಾರರು ನೊಂದಣಿ ಮಾಡಿಕೊಂಡಿದ್ದರು, ಅದರಲ್ಲಿ 46,810 (96.30%) ಮಂದಿ ಮತ ಚಲಾಯಿಸಿದ್ದರು.
ಮೂರನೇ ಹಂತದಲ್ಲಿ, 85 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 23,213 ಮತದಾರರು ನೊಂದಣಿ ಮಾಡಿಕೊಂಡಿದ್ದರು ಅವರಲ್ಲಿ 21,892 (94.31%) ಮತದಾರರು ತಮ್ಮ ಮನೆಯಲ್ಲಿ ಮತ ಚಲಾಯಿಸಿದ್ದಾರೆ. ಅಂತೆಯೇ, 10,897 ಮತದಾರರಲ್ಲಿ 10,566 (96.96%) ಅಂಗವಿಕಲರು (PwD) ತಮ್ಮ ಮನೆಯಿಂದಲೆ ಹಕ್ಕು ಚಲಾಯಿಸಿದ್ದಾರೆ.












Click it and Unblock the Notifications